ಚಿಕ್ಕಮಗಳೂರು: ಸರ್ಕಾರದ ಅನುದಾನಕ್ಕೆ ಕಾಯದೇ ದಾನಿಗಳ ನೆರವು ಪಡೆದು ಸರ್ಕಾರಿ ಶಾಲೆಯನ್ನು ಸುಸಜ್ಜಿತವಾಗಿ ನಿಭಾಯಿಸಬಹುದು ಎಂಬುದನ್ನು ತಾಲ್ಲೂಕಿನ ಮೈಲಿಮನೆ ಸರ್ಕಾರಿ ಶಾಲೆಯ ಅಭಿವೃದ್ಧಿ ಸಮಿತಿ ಮಾಡಿ ತೋರಿಸಿದೆ.
ಮಲ್ಲಂದೂರು ಸುತ್ತಮುತ್ತಲ ಸುಂದರ ಪರಿಸರದೊಳಗಿನ 10 ಎಕರೆ ಜಾಗದಲ್ಲಿರುವ ಈ ಶಾಲೆ, ಮಲೆನಾಡಿನ ಗ್ರಾಮೀಣ ಮಕ್ಕಳ ಬದುಕು ಬದಲಿಸುವ ಕೇಂದ್ರವಾಗಿದೆ. ಇಲ್ಲಿನ ಎಸ್‌ಡಿಎಂಸಿ ಸದಸ್ಯರು, ಅಧ್ಯಕ್ಷರು ಮತ್ತು ಶಾಲೆಯ ಮುಖ್ಯ ಶಿಕ್ಷಕರಿಗೆ ಶಾಲೆಯ ಅಭಿವೃದ್ಧಿಯದ್ದೇ ಕನಸು. ಸರ್ಕಾರಿ ಶಾಲೆಗೆ ಮಕ್ಕಳನ್ನು ಕರೆ ತರುವುದರಿಂದ ಆದಿಯಾಗಿ ಖಾಸಗಿ ಶಾಲೆಗಳಿಗಿಂತ ಹೆಚ್ಚಾಗಿ ಅವರಿಗೆ ಬೇಕಿರುವ ಎಲ್ಲ ರೀತಿಯ ಸೌಕರ್ಯ ಒದಗಿಸುವ ಕೆಲಸ ಮಾಡುತ್ತಿದ್ದಾರೆ.
ಇದರಿಂದಾಗಿಯೇ ಈ ಶಾಲೆಗೆ 2024-25 ಸಾಲಿನ ‘ಪುಷ್ಟಿ’ ಕಾರ್ಯಕ್ರಮದಡಿ ಅತ್ಯುತ್ತಮ ಎಸ್‌ಡಿಎಂಸಿ ಪ್ರಶಸ್ತಿ ಲಭಿಸಿದೆ. ಮಲೆನಾಡಿನ ಮಡಿಲಿನಲ್ಲಿರುವ ಈ ಶಾಲೆಯ ಆವರಣದಲ್ಲಿ ಚಲನಚಿತ್ರಗಳ ಚಿತ್ರೀಕರಣಗಳು ನಡೆದಿವೆ.
ಎಚ್.ಆರ್.ಗುರುನಾಥೇಗೌಡ ಎಸ್‌ಡಿಎಂಸಿ ಗೌರವಾಧ್ಯಕ್ಷರಾಗಿದ್ದರೆ, ಮುಳ್ಳೇಶ್ ಅವರು ಅಧ್ಯಕ್ಷರಾಗಿದ್ದಾರೆ. ಎಂ.ಸಿ.ಅನುರಾಜೇಗೌಡ, ಪೂರ್ಣೇಶ್, ಶಿವು, ಮಹೇಶ್, ಸುರೇಶ್, ಶಬನಾ, ಮಲ್ಲೇಶಗೌಡ, ರಾಮನಾಯ್ಕ ಸದಸ್ಯರಾಗಿದ್ದಾರೆ.
ಈ ಸಮಿತಿಗೆ ಸದಾ ಶಾಲೆಯ ಅಭಿವೃದ್ಧಿಯದ್ದೆ ಚಿಂತೆ. ದಾನಿಗಳನ್ನು ಹುಡುಕಿ ಶಾಲೆಗೆ ಬೇಕಿರುವ ಎಲ್ಲಾ ಸವಲತ್ತುಗಳನ್ನು ಕಲ್ಪಿಸುತ್ತಿದ್ದಾರೆ. ಸರ್ಕಾರವನ್ನೇ ಎಲ್ಲದಕ್ಕೂ ನಂಬಿಕೊಳ್ಳದೆ ತಮ್ಮ ಉರಿನ ಶಾಲೆಯನ್ನು ತಾವೇ ನಿರ್ವಹಿಸುತ್ತಿದ್ದಾರೆ. ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ಅಲ್ಲಿಂದ ಬರಬೇಕಾದ ಅನುದಾನವನ್ನೂ ಪಡೆದುಕೊಳ್ಳುತ್ತಿದ್ದಾರೆ.
ಬಹುತೇಕ ಬಡ ಮತ್ತು ರೈತರ ಮಕ್ಕಳೇ ಈ ಶಾಲೆಯ ವಿದ್ಯಾರ್ಥಿಗಳಾಗಿದ್ದು, ಅವರಿಗೆ ಯಾವುದೇ ಹೊರೆ ನೀಡದೆ ನಿಭಾಯಿಸುತ್ತಿದ್ದಾರೆ. ಪೀಠೋಪಕರಣ, 100 ಕುರ್ಚಿ, ಸ್ಪೀಕರ್, ಮಕ್ಕಳಿಗೆ ಟ್ರ್ಯಾಕ್ ಸೂಟ್ ಸೇರಿ ಎಲ್ಲವನ್ನೂ ಒದಗಿಸುತ್ತಿದ್ದಾರೆ.
ಸರ್ಕಾರ ಕೊಡುವ ಸಮವಸ್ತ್ರಗಳ ಜೊತೆಗೆ ಟ್ರ್ಯಾಕ್ ಸೂಟ್, ಐ.ಡಿ ಕಾರ್ಡ್ ಸೇರಿದಂತೆ ಖಾಸಗಿ ಶಾಲೆಯ ಯಾವುದೇ ಮಕ್ಕಳಿಗೂ ಕಡಿಮೆ ಇಲ್ಲದಂತೆ ನೋಡಿಕೊಳ್ಳಲಾಗುತ್ತಿದೆ.
ಕಾಫಿ ಟ್ರೇಡರ್ ತ್ಯಾಗರಾಜ್ ಅವರ ಮೂಲಕ 30 ಡೆಸ್ಕ್, 6 ಕುರ್ಚಿ, 10 ಟೇಬಲ್, 10 ಸ್ಟೂಲ್, 2 ರ್‍ಯಾಕ್, 3 ವೈಟ್ ಬೋರ್ಡ್ ಸೇರಿ ₹4 ಲಕ್ಷ ಮೌಲ್ಯದ ವಸ್ತುಗಳನ್ನು ಶಾಲೆಗೆ ತರುವಲ್ಲಿ ಸಮಿತಿ ಯಶಸ್ವಿಯಾಗಿದೆ. ‘ಡಾ.ಜೆ.ಪಿ.ಕೃಷ್ಣೇಗೌಡ ಅವರ ಮೂಲಕ ಹಲವು ಸವಲತ್ತು ಪಡೆದಿದ್ದೇವೆ. ಪ್ರತಿವರ್ಷ ನೋಟ್ ಪುಸ್ತಕ ಮತ್ತು ಇತರ ಸಲಕರಣೆಗಳನ್ನು ಬೇರೆ ಬೇರೆ ದಾನಿಗಳ ಮೂಲಕ ಕೊಡಿಸುತ್ತಿದ್ದೇವೆ’ ಎಂದು ಎಸ್‌ಡಿಎಂಸಿ ಸದಸ್ಯರು ಹೇಳುತ್ತಾರೆ.
ಪಾಠ ಪ್ರವಚನದ ಜತೆಗೆ ಕ್ರೀಡೆಗೂ ಆದ್ಯತೆ ನೀಡಲಾಗಿದೆ. ಬ್ಯಾಡ್ಮಿಂಟನ್‌ನಲ್ಲಿ ಎರಡು ಬಾರಿ ರಾಜ್ಯ ಮಟ್ಟದಲ್ಲಿ ಈ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಕೊಕ್ಕೊ ಕೋರ್ಟ್, ವಾಲಿಬಾಲ್ ಸಿಂಥೆಟಿಕ್ ಅಂಕಣ, ಗ್ರಂಥಾಲಯ, ಪ್ರಯೋಗಾಲಯ, ಸ್ಮಾರ್ಟ್ ಕ್ಲಾಸ್ ಸೌಲಭ್ಯಗಳು ಕೂಡ ಸುಸಜ್ಜಿತವಾಗಿವೆ.
ಸದ್ಯ ಪ್ರೌಢಶಾಲೆಯಲ್ಲಿ 89 ವಿದ್ಯಾರ್ಥಿಗಳಿದ್ದಾರೆ. ಮಕ್ಕಳ ಸಂಖ್ಯೆ ಹೆಚ್ಚಿಸಲು ಸಮಿತಿ ಮತ್ತು ಶಾಲೆಯ ಶಿಕ್ಷಕ ವೃಂದ ಪ್ರಯತ್ನಿಸುತ್ತಿದೆ. ಮುಂದಿನ ಬಾರಿಯಿಂದ ಆಂಗ್ಲ ಮಾಧ್ಯಮ ಆರಂಭಿಸಲು ಉದ್ದೇಶಿಸಿದ್ದು, ಅದಕ್ಕೆ ಬೇಕಿರುವ ಎಲ್ಲಾ ತಯಾರಿ ಮಾಡಿಕೊಂಡಿದೆ. ಶಾಲೆಯ ಆವರಣದಲ್ಲಿ ಕ್ರೀಡಾಂಗಣಕ್ಕೆ ಜಾಗವಿದ್ದು, ಅದಕ್ಕೆ ಬೇಕಿರುವ ಅನುದಾನ ಪಡೆಯುವ ನಿಟ್ಟಿನಲ್ಲೂ ಸಮಿತಿ ಪ್ರಯತ್ನ ನಡೆಸುತ್ತಿದೆ.
ದಾನಿಗಳ ಸಹಕಾರದಿಂದ ಶಾಲೆಗೆ ಬರುವ ಮಕ್ಕಳಿಗೆ ಯಾವ ಕೊರತೆಯೂ ಆಗದಂತೆ ನೋಡಿಕೊಳ್ಳುವ ಕೆಲಸವನ್ನು ಸಮಿತಿ ಮಾಡುತ್ತಿದೆ. ಶಿಕ್ಷಕರಿಂದಲೂ ಉತ್ತಮ ಸಹಕಾರ ದೊರೆಯುತ್ತಿದ್ದು ಪ್ರಶಸ್ತಿ ಬರಲು ಸಾಧ್ಯವಾಯಿತುಮುಳ್ಳೇಶ್ ಎಸ್‌ಡಿಎಂಸಿ ಅಧ್ಯಕ್ಷ
ಎಲ್ಲೇ ಇದ್ದರೂ ನಮಗೆ ಶಾಲೆಯ ಅಭಿವೃದ್ಧಿ ಬಗ್ಗೆಯೇ ಆಲೋಚನೆ ಇರುತ್ತದೆ. ಶಾಲೆಯ ಆವರಣದಲ್ಲಿ ಕ್ರೀಡಾಂಗಣ ನಿರ್ಮಿಸುವ ಉದ್ದೇಶ ಇದೆ. ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದೇವೆಎಂ.ಸಿ.ಅನುರಾಜೇಗೌಡ ಎಸ್‌ಡಿಎಂಸಿ ಸದಸ್ಯ
ಎಸ್‌ಡಿಎಂಸಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ವಿದ್ಯಾರ್ಥಿಗಳ ಕಲಿಕೆಗೆ ಬೇಕಿರುವ ಎಲ್ಲಾ ಸೌಕರ್ಯ ಕಲ್ಪಿಸಲಾಗಿದೆ. ಆಂಗ್ಲ ಮಾದ್ಯಮ ಆರಂಭಿಸಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆಚಂದ್ರೇಗೌಡ ಮುಖ್ಯ ಶಿಕ್ಷಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.