ಶೃಂಗೇರಿ: ಮಲೆನಾಡಿನಲ್ಲಿ ಹೈನುಗಾರಿಕೆ ಎಂದರೆ ಲಾಭಕರವಲ್ಲ ಎಂಬುದು ಇಲ್ಲಿನ ಬಹುತೇಕರ ಅಭಿಪ್ರಾಯ. ಹಸಿರು ಮೇವು ಕೊರತೆ, ವಾತಾವರಣದ ಏರುಪೇರು. ಅತಿಯಾದ ಮಳೆ ಹೀಗೆ ವಿವಿಧ ಕಾರಣದಿಂದ ಹೈನುಗಾರಿಕೆ ಕಷ್ಟಕರ ಎಂದು ಭಾವಿಸಿದವರೇ ಹೆಚ್ಚು. ಆದರೆ, ಧರೆಕೊಪ್ಪ ಗ್ರಾಮ ಪಂಚಾಯಿತಿ ಆಲುಗೋಡಿನ ವೆಂಕಟರಮಣ ಕಾರಂತ್ ದಂಪತಿ ಇದು ಯಾವುದನ್ನೂ ತೊಂದರೆ ಎಂದು ಭಾವಿಸದೇ ಹೈನುಗಾರಿಕೆಯನ್ನೇ ಉದ್ಯಮವಾಗಿ ಮಾಡಿಕೊಂಡು ಮಾದರಿಯಾಗಿದ್ದಾರೆ.
ತಾಲ್ಲೂಕಿನಲ್ಲಿ ಹಾಲಿನ ಡೈರಿ ಮಾಡಿ ಕ್ಷೀರಾಬ್ದಿ ಎಂಬ ಹೆಸರಿನ ಮುಖಾಂತರ ಹಾಲನ್ನು ಮಾರಾಟ ಮಾಡಿ ಯಶಸ್ವಿಯಾಗಿದ್ದಾರೆ. ತಮ್ಮ 4 ಎಕರೆ ಅಡಿಕೆ ತೋಟವು ಹಳದಿ ಎಲೆ ರೋಗಕ್ಕೆ ತುತ್ತಾಗಿ ತೋಟ ಹಾಳಾಗಿ ಬದುಕು ದುಸ್ತರವಾದಾಗ ವೆಂಕಟರಮಣ ಕಾರಂತ ಅವರ ಕೈಹಿಡಿದಿದ್ದು ಈ ಹೈನುಗಾರಿಕೆ. ಹುಟ್ಟಿ ಬೆಳೆದ ತಾಲ್ಲೂಕಿನಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಛಲದಿಂದ ಮೊದಲಿಗೆ 2 ಹಸುಗಳನ್ನು ಕಟ್ಟಿ ಹಾಲನ್ನು ಮಾರಾಟ ಮಾಡಲು ಆರಂಭಿಸಿ, ಈಗ 20 ಹಸುಗಳನ್ನು ಸಾಕಿ ಅವುಗಳಿಂದ ಜೀವನ ಕಂಡುಕೊಂಡಿದ್ದಾರೆ.
ಸತತ ಪರಿಶ್ರಮದಿಂದ ಸದ್ಯ 20 ಹಸುಗಳನ್ನು ಸಾಕಿ ಪ್ರತಿದಿನ 110 ಲೀಟರ್‌ವರೆಗೆ ಹಾಲು ಉತ್ಪಾದನೆ ಮಾಡುತ್ತಿದ್ದು, 1 ಮತ್ತು ಅರ್ಧ ಲೀಟರ್ ಹಾಲನ್ನು ಮನೆಯಲ್ಲಿ ತಾಯಿ ಸತ್ಯಭಾಮ, ಪತ್ನಿ ರೇಖಾ ಕಾರಂತ್ ಹಾಗೂ ಮಗ ಅಭಿನವ್ ಅವರ ಸಹಕಾರದಿಂದ ಶೃಂಗೇರಿ ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ತಾಲ್ಲೂಕಿನ ಅನೇಕ ಜನ ಹಾಲಿನ ಡೈರಿ ಮಾಡಿ ಹಾಲನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ ಕಾರಂತರು ತಮ್ಮದೇ ಆದ ಬ್ರ್ಯಾಂಡ್‍ನಲ್ಲಿ ಹಾಲನ್ನು ಪ್ಯಾಕ್ ಮಾಡಿ, ತಾಲ್ಲೂಕಿಗೆ ಪರಿಚಯಿಸಿರುವುದು ಮೊದಲಿಗರು.
ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಸ್ಕೂಟರ್‌ನಲ್ಲಿ ಶೃಂಗೇರಿ ಪಟ್ಟಣ, ಮೆಣಸೆ, ಕಲ್ಕಟ್ಟೆ, ಸಚ್ಚಿದಾನಂದಪುರ, ಮಾನಗಾರು, ಅಕ್ರವಳ್ಳಿ ಬಡವಣೆ, ಗುರುಭವನ ಸೇರಿದಂತೆ ಅನೇಕ ಕಡೆ ತೆರಳಿ ಹಾಲಿನ ಪ್ಯಾಕೇಟ್ ಅನ್ನು ನೀಡುತ್ತಾರೆ. ಇದಕ್ಕೆ ಬೆಂಬಲವಾಗಿ ನಿಂತವರು ಸ್ಥಳೀಯರಾದ ಎಚ್.ಕೆ.ಅವಿನಾಶ್ ಹಳಕ ಹಾಗೂ ಪ್ರತಿ ದಿನ ಸ್ಕೂಟಿಯಲ್ಲಿ ಶೃಂಗೇರಿ ಮಾರುಕಟ್ಟೆಗೆ ತಂದುಕೊಡುವಲ್ಲಿ ವೀಣಾ ಅವರ ಕಾರ್ಯ ಅದ್ವಿತೀಯವಾದದ್ದು.
ವೆಂಕಟರಮಣ ಕಾರಂತ್ ಅವರು ತಮ್ಮ ಹಾಲಿನ ಪ್ಯಾಕೆಟ್‍ನೊಂದಿಗೆ ಸ್ಥಳೀಯರು ತಂದುಕೊಟ್ಟ ಗುಣಮಟ್ಟದ ಮಲೆನಾಡು ಗಿಡ್ಡ ತಳಿಯ ಹಸುವಿನ ಹಾಲನ್ನು ಮಾರಾಟ ಮಾಡಿ ಹೈನುಗಾರಿಕೆಯಲ್ಲಿ ಸೈ ಎನಿಸಿಕೊಂಡಿದ್ದಾರೆ. ಹೈನುಗಾರಿಕೆಯಲ್ಲಿ ಯಶಸ್ಸು ಕಂಡು ಗ್ರಾಮದ ಹಲವರಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ. ಛಲವಿದ್ದರೆ ಬಲ ಎಂಬಂತೆ ನೇರ ಹಾಲು ಮಾರಾಟದಿಂದ ಆರ್ಥಿಕ ಸ್ವಾವಲಂಬಿಯಾಗಿ ಇತರರಿಗೂ ವೆಂಕಟರಮಣ ಕಾರಂತ್ ಮಾದರಿಯಾಗಿದ್ದಾರೆ.
‘ಗುಣಮಟ್ಟದ ಹಾಲು ಪೂರೈಕೆ’ ಹಾಲಿಗೆ ಎಲ್ಲಿಯೂ ಕೂಡ ನೀರನ್ನು ಬೆರೆಸದೆ ಗುಣಮಟ್ಟದ ಹಾಲನ್ನು ನೀಡುತ್ತೀದ್ದೇವೆ. ಹಾಲನ್ನು ಉಪಯೋಗಿಸಿದವರು ಒಬ್ಬರು ಇನ್ನೊಬ್ಬರಿಗೆ ಹೇಳಿ ಬಾಯಿಂದ ಬಾಯಿಗೆ ಹಾಲಿನ ಬಗ್ಗೆ ತಿಳಿಸಿ ತನ್ನಿಂದ ತಾನೇ ಮಾರುಕಟ್ಟೆ ಬೆಳೆಯಿತು. ‘4 ಲೀಟರ್‌ನಿಂದ ಆರಂಭವಾಗಿ ಈಗ 110 ಲೀಟರ್‌ವರೆಗೆ ಹಾಲನ್ನು ಮಾರಾಟ ಮಾಡುತ್ತೀದ್ದೇವೆ. ನನ್ನ ವ್ಯಾಪಾರದ ಜೊತೆಗೆ ಬೇರೆಯವರು ಹಸುವನ್ನು ಕಟ್ಟಿ ಸಾಕಿ ಹಾಲನ್ನು ನಮಗೆ ನೀಡಿದರೆ ಕೊಳ್ಳಲು ತಯಾರಿದ್ದೇವೆ. ಇದರಿಂದ ಕ್ಷೀಣಿಸುತ್ತಿರುವ ಹೈನುಗಾರಿಕೆ ಪುನಃ ಚೇತರಿಸಿಕೊಳ್ಳಲು ಸಾಧ್ಯ’ ಎಂದು ವೆಂಕಟರಮಣ ಕಾರಂತ್ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.