ADVERTISEMENT

Heavy Rain | ಮಲೆನಾಡು ಭಾಗದಲ್ಲಿ ಮಳೆ ಬಿರುಸು

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 6:24 IST
Last Updated 30 ಆಗಸ್ಟ್ 2025, 6:24 IST
ಮೂಡಿಗೆರೆ ಪಟ್ಟಣದ ಮೇಗಲಪೇಟೆಯಲ್ಲಿ ಹೆದ್ದಾರಿಯಲ್ಲಿ ಮಳೆ ನೀರು ಸಂಗ್ರಹವಾಗಿ ವಾಹನ‌ ಸವಾರರು ಪರದಾಡಿದರು
ಮೂಡಿಗೆರೆ ಪಟ್ಟಣದ ಮೇಗಲಪೇಟೆಯಲ್ಲಿ ಹೆದ್ದಾರಿಯಲ್ಲಿ ಮಳೆ ನೀರು ಸಂಗ್ರಹವಾಗಿ ವಾಹನ‌ ಸವಾರರು ಪರದಾಡಿದರು   

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಲೆನಾಡು ಭಾಗದಲ್ಲಿ ಬಿಟ್ಟು ಬಿಡದೆ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿ, ಕುದುರೆಮುಖ, ಮೂಡಿಗೆರೆ, ಕೊಟ್ಟಿಗೆಹಾರ, ಎನ್.ಆರ್.ಪುರ ಸುತ್ತಮುತ್ತ ಧಾರಾಕಾರ ಮಳೆ ಸುರಿದಿದೆ. ಚಿಕ್ಕಮಗಳೂರು ನಗರ ಮತ್ತು ಸುತ್ತಮುತ್ತ ಕೂಡ ಬಿಟ್ಟು ಬಿಟ್ಟು ಮಳೆ ಸುರಿಯಿತು. ಇಡೀ ರಾತ್ರಿ ಸುರಿದ ಮಳೆ ಬೆಳಿಗ್ಗೆ ಕೊಂಚ ಬಿಡುವು ನೀಡಿತ್ತು. ಮಧ್ಯಾಹ್ನದ ನಂತರ ಆರಂಭವಾಗಿ ಆಗಾಗ ಸುರಿಯಿತು.

ತರೀಕೆರೆ, ಅಜ್ಜಂಪುರ, ಕಡೂರು ಸುತ್ತಮುತ್ತ ಕೂಡ ಮೋಡ ಕವಿದ ವಾತಾವರಣದ ನಡುವೆ ಆಗಾಗ ಮಳೆಯ ಸಿಂಚನವಾಯಿತು.

ADVERTISEMENT

ಮುಂದುವರಿದ ಜೋರು ಮಳೆ

ಕೊಪ್ಪ: ಪಟ್ಟಣ ಸೇರಿ ತಾಲ್ಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಶುಕ್ರವಾರವೂ ಮುಂದುವರಿಯಿತು.

ಗೌರಿ ಹಬ್ಬದ ದಿನ ಬೆಳಿಗ್ಗೆ ಆರಂಭಗೊಂಡಿದ್ದು, ಅಂದಿನಿಂದ ಎಡೆಬಿಡದೆ ಸುರಿಯುತ್ತಿದೆ. ಶುಕ್ರವಾರವೂ ಮಳೆ ಮುಂದುವರಿದಿದ್ದು, ಗಣಪತಿ ಉತ್ಸವ ಸೇರಿ ಸಹಜ ಜನಜೀವನಕ್ಕೆ ಅಡ್ಡಿ ಉಂಟು ಮಾಡಿತ್ತು.

ಮಲೆನಾಡು ಭಾಗದಲ್ಲಿ ಮಳೆ ಬಿರುಸು

‌ಮೂಡಿಗೆರೆ: ತಾಲ್ಲೂಕಿನಾದ್ಯಂತ ಶುಕ್ರವಾರ ಭಾರಿ ಮಳೆಯಾಗಿದ್ದು, ಜನಜೀವನ ತತ್ತರಗೊಂಡಿತು.

ಗುರುವಾರ ತಡರಾತ್ರಿಯಿಂದಲೂ ಆರ್ಭಟಿಸಿದ ಮಳೆ, ಬೆಳಿಗ್ಗೆ ತನಕ ಎಡಬಿಡದೆ ಸುರಿಸು ಅಪಾರ ಪ್ರಮಾಣದ ಹಾನಿ ಉಂಟು ಮಾಡಿದೆ. ಬೆಳಿಗ್ಗೆ ಕೆಲಕಾಲ ಬಿಡುವು ನೀಡಿದ್ದ ಮಳೆಯು ಮಧ್ಯಾಹ್ನ 2 ಗಂಟೆಯ ಬಳಿಕ ಪ್ರಾರಂಭವಾಗಿ ಮೂರು ಗಂಟೆಗೂ ಹೆಚ್ಚು ಕಾಲ ಸುರಿಯಿತು. ಇದರಿಂದಾಗಿ ಎಲ್ಲಿ‌ ನೋಡಿದರೂ ಜಲ ರಾಶಿಯೇ ನಿರ್ಮಾಣವಾಗಿತ್ತು.

ರಾಷ್ಟ್ರೀಯ ಹೆದ್ದಾರಿ 173ರ ಹ್ಯಾಂಡ್ ಪೋಸ್ಟಿನಿಂದ ಹೊರಟ್ಟಿ ಗ್ರಾಮದ ತನಕ ಸುಮಾರು 6 ಕಿ.ಮೀಯಷ್ಟು ದೂರ ಹೆದ್ದಾರಿಯಲ್ಲಿ ಮಳೆ ನೀರು ಹಳ್ಳದಂತೆ ಹರಿದಿದ್ದರಿಂದ ಹೆದ್ದಾರಿಯಲ್ಲಿ ವಾಹನ ಸವಾರರು ಪರದಾಡಿದರು. ವಾರದ ಸಂತೆಯಲ್ಲಿ ತರಕಾರಿ, ಹಣ್ಣು ಮಳೆ ನೀರಿನಲ್ಲಿ ಕೊಚ್ಚಿ ಹೋಗಿ ಸಂತೆಮೈದಾನದ ಬಳಿಯಿರುವ ಹಳ್ಳವನ್ನು ಸೇರಿತು. ಇದರಿಂದ ವರ್ತಕರು ನಷ್ಟ ಅನುಭವಿಸಬೇಕಾಯಿತು.

ಶಾಲೆ ಬಿಡುವ ವೇಳೆ ಧಾರಾಕಾರವಾಗಿ ಮಳೆಯಾಗಿದ್ದರಿಂದ ವಿದ್ಯಾರ್ಥಿಗಳು ಮನೆಗೆ ತೆರಳಲು ಪರದಾಡಿದರು. ಒಂದೇ ದಿನದಲ್ಲಿ ಹೇಮಾವತಿ ನದಿ ಸೇರಿ ಎಲ್ಲಾ ಹಳ್ಳಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಮುಗ್ರಹಳ್ಳಿ, ಕಿತ್ತಲೆಗಂಡಿ, ಉಗ್ಗೆಹಳ್ಳಿ, ಯು. ಹೊಸಳ್ಳಿ ಗ್ರಾಮಗಳಲ್ಲಿ ನದಿ ನೀರು ಭತ್ತದ ಗದ್ದೆಗಳಿಗೆ ನುಗ್ಗಿ ನಾಟಿ ಮಾಡಿದ್ದ ಸಸಿ ಕೊಚ್ಚಿ ಹೋಗಿ ನಷ್ಟ ಉಂಟಾಗಿದೆ.

ಗಣೇಶ ಚತುರ್ಥಿಯ ಮೂರನೇಯ ದಿನವಾಗಿದ್ದರಿಂದ ಹಲವೆಡೆ ಗಣೇಶ ವಿಸರ್ಜನೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ರಭಸವಾದ ಮಳೆಯು ಗಣೇಶ ವಿಸರ್ಜನೆಗೂ ಅಡ್ಡಿಯಾಗಿತ್ತು. ತಡರಾತ್ರಿಯವರೆಗೂ ವಿಸರ್ಜನಾ ಕಾರ್ಯ ನಡೆಯಿತು.

ತಾಲ್ಲೂಕಿನ ವ್ಯಾಪ್ತಿಯಲ್ಲಿ ಧಾರಕಾರ ಮಳೆ

ನರಸಿಂಹರಾಜಪುರ: ತಾಲ್ಲೂಕಿನಾದ್ಯಂತ ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಿಗ್ಗೆವರೆಗೂ ಧಾರಾಕಾರವಾಗಿ ಮಳೆ ಸುರಿಯಿತು. ಗುರುವಾರ ರಾತ್ರಿ 9ರ ವೇಳೆಗೆ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಭಾರಿ ಮಳೆಯಾಯಿತು. ಶುಕ್ರವಾರ ಬೆಳಿಗ್ಗೆವರೆಗೂ ಸುರಿದ ಮಳೆ ನಂತರ ಕ್ಷೀಣಿಸಿತ್ತು. ಪುನಃ ಮಧ್ಯಾಹ್ನದ ನಂತರ ಹಾಗೂ ಸಂಜೆ 5ರ ವೇಳೆ ಜೋರಾಗಿ ಸುರಿಯಿತು. ಗುರುವಾರದಿಂದ ಶುಕ್ರವಾರ ಬೆಳಿಗ್ಗೆವರೆಗೆ ನರಸಿಂಹರಾಜಪುರದಲ್ಲಿ 2.42 ಸೆಂ.ಮೀ ಬಾಳೆಹೊನ್ನೂರಿನಲ್ಲಿ 4.46 ಸೆಂ.ಮೀ ಹಾಗೂ ಮೇಗರಮಕ್ಕಿಯಲ್ಲಿ 4.3 ಸೆಂ.ಮೀ ಮಳೆಯಾಗಿತ್ತು.

ಶಾಲೆ ಅಂಗನವಾಡಿಗೆ ರಜೆ ಇಂದು

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದ ಐದು ತಾಲ್ಲೂಕುಗಳು ಮತ್ತು ಚಿಕ್ಕಮಗಳೂರು ತಾಲ್ಲೂಕಿನ ಏಳು ಹೋಬಳಿಗಳ ತರೀಕೆರೆ ತಾಲ್ಲೂಕಿನ ಎರಡು ಹೋಬಳಿಗಳ ಅಂಗನವಾಡಿ ಮತ್ತು ಶಾಲೆಗಳಿಗೆ ಶನಿವಾರ (ಆ.30) ರಜೆ ಘೋಷಿಸಲಾಗಿದೆ. ಎನ್.ಆರ್.ಪುರ ಕೊಪ್ಪ ಮೂಡಿಗೆರೆ ಶೃಂಗೇರಿ ಕಳಸ ತಾಲ್ಲೂಕಿನ ವ್ಯಾಪ್ತಿ ಚಿಕ್ಕಮಗಳೂರು ತಾಲ್ಲೂಕಿನ ಕಸಬಾ ಅಂಬಳೆ ಆವತಿ ಜಾಗರ ವಸ್ತಾರೆ ಆಲ್ದೂರು ಮತ್ತು ಖಾಂಡ್ಯ ಹೋಬಳಿ  ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಮತ್ತು ಲಿಂಗದಹಳ್ಳಿ ಹೋಬಳಿಗಳಿಗೆ ರಜೆ ಅನ್ವಯವಾಗಲಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.