ಚಿಕ್ಕಮಗಳೂರು: ಮಾರುಕಟ್ಟೆಯಲ್ಲಿ ತರಕಾರಿಗಳ ಆವಕ ಹೆಚ್ಚಾಗಿದ್ದು, ತರಕಾರಿ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ. ಕಳೆದ ವಾರ ₹100 ರೂಪಾಯಿದ್ದ ಬೀನ್ಸ್ ಈ ವಾರ ₹80ಕ್ಕೆ ಇಳಿಕೆ ಕಂಡರೂ ಮಾರುಕಟ್ಟೆಯಲ್ಲಿ ಬೀನ್ಸ್‌ಗೆ ಬೇಡಿಕೆ ಕಾಯ್ದುಕೊಂಡಿದೆ.
ಮಳೆ ಆರಂಭವಾಗುತ್ತಿದ್ದಂತೆ ರೈತರು ಬೆಳೆದ ಫಸಲು ಮಳೆಯಿಂದಾಗಿ ಹಾಳಾಗಲಿದೆ ಎಂಬ ಕಾರಣಕ್ಕೆ ಹೆಚ್ಚು ಕೊಯ್ಲು ಮಾಡಿ ರೈತರು ಮಾರುಕಟ್ಟೆಗೆ ತರುತ್ತಿದ್ದಾರೆ. ಅದರಲ್ಲೂ ಬೀಳಿನಲ್ಲಿ ಬೆಳೆಯುವ ಬೆಳೆಗಳಾದ ಬಿನ್ಸ್, ಅಲಸಂಡೆ, ಬಟಾಣಿ, ಜವಳಿಕಾಯಿ ಸೇರಿದಂತೆ ಇತರೆ ತರಕಾರಿಗಳನ್ನು ರೈತರು ಮಳೆ ಬೀಳುತ್ತಿದ್ದಂತೆ ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸುತ್ತಿ
ದ್ದಾರೆ. ತರಕಾರಿ ಹೆಚ್ಚು ದಾಸ್ತಾನು ಆದ ಪರಿಣಾಮ ಬೆಲೆ ಇಳಿಕೆಗೆಯಾಗಿದೆ.
ಜಿಲ್ಲೆಯ ಗ್ರಾಹಕರಲ್ಲಿ ಬೀನ್ಸ್‌ಗೆ ಹೆಚ್ಚು ಬೇಡಿಕೆ ಇದ್ದು, ಕಳೆದ ಎರಡು ತಿಂಗಳಿನಿಂದ ಬೀನ್ಸ್ ಆವಕ ಕಡಿಮೆಯಾಗಿದೆ. ಹೊರ ಜಿಲ್ಲೆಯ ಹಾಸನ, ಸಕಲೇಶಪುರ ಭಾಗದಿಂದ ಜಿಲ್ಲೆಯ ಮಾರುಕಟ್ಟೆಗೆ ಬೀನ್ಸ್ ತರಿಸಲಾಗುತ್ತಿದೆ. ಆದ್ದರಿಂದ ಬೀನ್ಸ್ ಬೆಲೆ ಉಳಿದೆಲ್ಲ ತರಕಾರಿಗಳಿಗಿಂತ ಸ್ವಲ್ಪ ಹೆಚ್ಚಾಗಿದೆ.
ಟೊಮೆಟೊ ಬೆಲೆ ತೀರ ಇಳಿಕೆ ಕಂಡಿದೆ.
ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಮೂಲಂಗಿ ₹40, ನವಿಲು ಕೋಸು ₹60, ಹೀರೇಕಾಯಿ ₹30, ನುಗ್ಗೆಕಾಯಿ ₹100, ಸೌತೆಕಾಯಿ ₹60, ಮೂಲಂಗಿ ₹60, ಮಂಗಳೂರು ಸೌತೆ ₹50, ಕುಂಬಳಕಾಯಿ ₹20, ಹೂಕೋಸು ₹60, ಚೀನಿಕಾಯಿ ₹20, ಸೋರೆಕಾಯಿ ₹20, ಬೆಳ್ಳುಳ್ಳಿ ₹160, ಬಟಾಣಿ ₹200, ಜವಳಿಕಾಯಿ ₹40, ಅಲಸಂಡೆ ₹60, ಶುಂಠಿ ₹80 ದರ ಇದೆ.
ಮಳೆ ಕಾರಣ ಸೊಪ್ಪಿನ ದರ ಏರಿಕೆಯಾಗಿದ್ದು, ಪುದೀನ, ಮೆಂತೆ, ಪಾಲಕ್, ಕೊತ್ತಂಬರಿ, ಕರಿಬೇವು, ಸಬ್ಸಿಗೆ ಕಟ್ಟುಗೆ ₹10 ದರ ಇದೆ.
ಜಿಲ್ಲೆಯ ಮಾರುಕಟ್ಟೆಗೆ ಈ ಮಳೆಗಾಲದ ಆರಂಭದ ಸೀಸನ್‌ನಲ್ಲಿ ಕ್ಯಾರೆಟ್, ಮೂಲಂಗಿ, ಬೀಟ್ರೂಟ್, ಸುಲಿಯುವ ಕಾಳುಗಳು ಹೆಚ್ಚು ಬರುತ್ತಿವೆ. ಇದೇ ರೀತಿ ಮಳೆ ಮುಂದುವರೆದರೆ ಎಲ್ಲ ತರಕಾರಿ ದರ ಮತ್ತಷ್ಟು
ಇಳಿಕೆಯಾಗುವ ಸಾಧ್ಯತೆ ಇದೆ
ಎನ್ನುತ್ತಾರೆ ಶೆಟ್ಟರಬೀದಿಯ ತರಕಾರಿ ವ್ಯಾಪಾರಿ ಜಾಫರ್.
ಮಳೆ ಕಾರಣ ಸೊಪ್ಪಿನ ದರ ಏರಿಕೆ ಟೊಮೆಟೊ ಬೆಲೆ ತೀರ ಇಳಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.