ADVERTISEMENT

ಮೃತ ಯೋಧ ಗಿರೀಶ್‌ಗೆ ಸ್ವಗ್ರಾಮದಲ್ಲಿ ಅಂತಿಮ ನಮನ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 4:03 IST
Last Updated 13 ಡಿಸೆಂಬರ್ 2025, 4:03 IST
ಬೀರೂರು ಸಮೀಪದ ಜೋಡಿತಿಮ್ಮಾಪುರ ಗ್ರಾಮದಲ್ಲಿ ಶುಕ್ರವಾರ ಮೃತ ಯೋಧ ಗಿರೀಶ್‌ ಅವರ ಧರ್ಮಪತ್ನಿ ಅಭಿಲಾಷಾರಿಗೆ ನಾಯಬ್ ಸುಬೇದಾರ್ ಶಿವಚರಣ್ ಜಿ.ಕೆ. ರಾಷ್ಟ್ರದ್ವಜವನ್ನು ಹಸ್ತಾಂತರಿಸಿದರು
ಬೀರೂರು ಸಮೀಪದ ಜೋಡಿತಿಮ್ಮಾಪುರ ಗ್ರಾಮದಲ್ಲಿ ಶುಕ್ರವಾರ ಮೃತ ಯೋಧ ಗಿರೀಶ್‌ ಅವರ ಧರ್ಮಪತ್ನಿ ಅಭಿಲಾಷಾರಿಗೆ ನಾಯಬ್ ಸುಬೇದಾರ್ ಶಿವಚರಣ್ ಜಿ.ಕೆ. ರಾಷ್ಟ್ರದ್ವಜವನ್ನು ಹಸ್ತಾಂತರಿಸಿದರು   

ಬೀರೂರು(ಕಡೂರು): ರಾಜಸ್ಥಾನದ ಬಿಕಾನೇರ್‌ನಲ್ಲಿ ಮಂಗಳವಾರ (ಡಿ.9) ಮೃತಪಟ್ಟಿದ್ದ ಸೇನಾಪಡೆಯ 60 ವೈರ್‌ಲೆಸ್‌ ಎಕ್ಸ್‌ಪೆರಿಮೆಂಟಲ್‌ ಯುನಿಟ್‌ನ ನಾಯಬ್‌ ಗಿರೀಶ್ ಜೆ.ಬಿ (37) ಅವರ ದೇಹವು, ಶುಕ್ರವಾರ ಬೆಳಿಗ್ಗೆ 5ಗಂಟೆಗೆ ಸ್ವಗ್ರಾಮ ಜೋಡಿತಿಮ್ಮಾಪುರಕ್ಕೆ ತಲುಪಿತು.

ಮೃತರ ದೇಹದೊಂದಿಗೆ ಮಡಿಕೇರಿಯ ನಾಯಬ್‌ ಸುಬೇದಾರ್‌ ಶಿವಚರಣ್ ಜಿ.ಕೆ. ಬಂದು, ಪಾರ್ಥಿವ ಶರೀರಕ್ಕೆ ಗೌರವ ಸೂಚಕವಾಗಿ ಹೊದಿಸಿದ್ದ ರಾಷ್ಟ್ರಧ್ವಜವನ್ನು ಯೋಧನ ಪತ್ನಿ ಅಭಿಲಾಷಾರಿಗೆ ಹಸ್ತಾಂತರಿಸಿದರು.

ಸೇನಾ ಆಸ್ಪತ್ರೆಯಲ್ಲಿ ವೈದ್ಯರ ಅಲಭ್ಯತೆಯಿಂದ ಮರಣೋತ್ತರ ಪರೀಕ್ಷೆ ಎರಡು ದಿನ ವಿಳಂಬವಾಗಿತ್ತು. ಗುರುವಾರ ಮರಣೋತ್ತರ ಪರೀಕ್ಷೆಯ ಬಳಿಕ, ಜೈಪುರದಿಂದ ಬೆಂಗಳೂರಿಗೆ ರಾತ್ರಿ ವಿಮಾನದಲ್ಲಿ ಪಾರ್ಥಿವ ಶರೀರವನ್ನು ತರಲಾಗಿತ್ತು. ಅಲ್ಲಿ ನಿವೃತ್ತ ಕರ್ನಲ್‌ ಹರಿ ಅವರ ನೇತೃತ್ವದಲ್ಲಿ ಸೇವಾ ಅವಧಿಯಲ್ಲಿ ಮೃತರಾದವರಿಗೆ ಸಲ್ಲಿಸುವ ಸರ್ಕಾರಿ ಗೌರವದೊಂದಿಗೆ ಅಂತಿಮ ನಮನ ಸಲ್ಲಿಸಿ, ಬೆಟಾಲಿಯನ್ ಆಂಬುಲೆನ್ಸ್ ಮೂಲಕ ಓರ್ವ ಸಿಬ್ಬಂದಿಯೊಂದಿಗೆ ಮೃತದೇಹವನ್ನು ಸ್ವಗ್ರಾಮಕ್ಕೆ ಕಳುಹಿಸಲಾಗಿತ್ತು. ಶುಕ್ರವಾರ ಬೆಳಿಗ್ಗೆ ಜೋಡಿತಿಮ್ಮಾಪುರದ ಸ್ವಗೃಹಕ್ಕೆ ಶವವನ್ನು ತಂದು ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. ಪತ್ನಿ ಅಭಿಲಾಷಾ ಮತ್ತು ಪುತ್ರ ಪ್ರಣೀತ್‌, ಪುತ್ರಿ ಡಿಂಪನಾ ಪಾರ್ಥಿವ ಶರೀರಕ್ಕೆ ಸೆಲ್ಯೂಟ್ ಮಾಡುವ ಮೂಲಕ ನಮನ ಸಲ್ಲಿಸಿದರು.

ADVERTISEMENT

ಗಿರೀಶ್‌ ಅವರ ತಂದೆ ಬಸಪ್ಪ, ತಾಯಿ ಜಯಮ್ಮ ಸೇರಿದಂತೆ ಕುಟುಂಬಸ್ಥರ ರೋದನ ಮುಗಿಲು ಮುಟ್ಟಿತ್ತು. ಅವರ ದುಃಖವನ್ನು ಕಂಡು ಅಂತಿಮ ನಮನ ಸಲ್ಲಿಸಲು ಪಾಲ್ಗೊಂಡಿದ್ದ ಎಲ್ಲರ ಕಣ್ಣುಗಳು ತೇವಗೊಂಡವು. ನಂತರ ಗ್ರಾಮಸ್ಥರೆಲ್ಲಾ ಸೇರಿ ಗ್ರಾಮದ ರಸ್ತೆಗಳಲ್ಲಿ ಮೆರವಣಿಗೆಯ ಮೂಲಕ ಪಾರ್ಥಿವ ಶರೀರವನ್ನು ತಂದು, ಸಮೀಪದ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು.

ಹಾಸನದ 15 ಕರ್ನಾಟಕ ಬೆಟಾಲಿಯನ್‌ನ ಮೇಜರ್ ಬಿ. ಪಾಟೀಲ್, ಕಡೂರು ತಹಶೀಲ್ದಾರ್ ಸಿ.ಎಸ್‌. ಪೂರ್ಣಿಮಾ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಸಿ.ಆರ್‌. ಪ್ರವೀಣ್, ಬೀರೂರು ಸರ್ಕಲ್‌ ಇನ್‌ಸ್ಪೆಕ್ಟರ್‌ ಶ್ರೀಕಾಂತ್‌ ಎನ್‌.ಎಸ್‌., ಬೀರೂರು ಪಿಎಸ್ಐ ತಿಪ್ಪೇಶ್ ಡಿ.ವಿ., ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಜಿಗಣೇಹಳ್ಳಿ ನೀಲಕಂಠಪ್ಪ, ಜೋಡಿತಿಮ್ಮಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಎಲ್‌. ಆನಂದ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಸವಿತಾ ರಮೇಶ್, ಹಸಿರು ಸೇನೆ ಜಿಲ್ಲಾ ಉಪಾಧ್ಯಕ್ಷ ನಾಗರಾಜ್, ಬಾಲಕೃಷ್ಣ, ನಿ. ಕರ್ನಲ್ ಆನಂದ್, ನಿವೃತ್ತ ಸೈನಿಕರ ಜಿಲ್ಲಾ ಸಂಘದ ಕರ್ನಲ್ ಕೃಷ್ಣೇಗೌಡ, ಕೆ.ಆರ್. ರೇವಣ್ಣ ಹಾಗೂ ತಾಲ್ಲೂಕು ಸಂಘದ ಚಂದ್ರಪ್ಪ ಸೇರಿದಂತೆ ಮಾಜಿ ಯೋಧರು, ಕಂದಾಯ ಇಲಾಖೆ ಅಧಿಕಾರಿಗಳು, ಸರ್ಕಾರಿ ಮತ್ತು ಖಾಸಗಿ ಶಾಲೆಯ ಮಕ್ಕಳು, ಶಿಕ್ಷಕ ವೃಂದದವರು, ಗ್ರಾಮಸ್ಥರು ಮತ್ತು ಗಣ್ಯರು ಶ್ರದ್ಧಾಂಜಲಿ ಅರ್ಪಿಸಿ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.

ನಾಯಬ್‌ ಸುಬೇದಾರ್ ಶಿವಚರಣ್ ಜಿ.ಕೆ ಮಾತನಾಡಿ, ‘ಗಿರೀಶ್ ತಮ್ಮ ಜತೆಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದು, ಜೈಪುರದಿಂದ ಬೆಂಗಳೂರಿಗೆ ಬಂದು ವಿಮಾನ ನಿಲ್ದಾಣದಲ್ಲಿಯೇ ಯೋಧನಿಗೆ ರಾಷ್ಟ್ರಧ್ವಜ ಹೊದಿಸಿ, ರೀತಿಂಗ್‌ ಸೆರೆಮನಿ ಗೌರವವನ್ನೂ ಸಲ್ಲಿಸಲಾಗಿದೆ. ಬೆಂಗಳೂರಿನಿಂದ 100 ಕಿ.ಮೀ ವ್ಯಾಪ್ತಿಯಲ್ಲಿ ಮೃತ ಯೋಧನ ಸ್ವಗೃಹವಿದ್ದಲ್ಲಿ, ಬೆಟಾಲಿಯನ್‌ನ ಎಲ್ಲಾ ಅಧಿಕಾರಿಗಳು ಬಂದು ಅಲ್ಲಿಯೇ ಗೌರವ ಸಲ್ಲಿಸುವುದು ಪದ್ಧತಿ. ಆದರೆ, ಈ ಗ್ರಾಮ ದೂರವಿರುವ ಕಾರಣ ಎಲ್ಲಾ ಸರ್ಕಾರಿ ಗೌರವವನ್ನು ವಿಮಾನ ನಿಲ್ದಾಣದಲ್ಲಿಯೇ ಸಲ್ಲಿಸಿ ಬೀಳ್ಕೊಡಲಾಗಿದೆ’ ಎಂದು ತಿಳಿಸಿದರು.

ಗ್ರಾಮಸ್ಥರು ಪಟಾಕಿ ಸಿಡಿಸಿ, ವಾದ್ಯಮೇಳದೊಂದಿಗೆ ಮೆರವಣಿಗೆಯಲ್ಲಿ ತೆರೆದ ವಾಹನದಲ್ಲಿ ಗಿರೀಶ್ ಅಮರ್‌ ರಹೇ.... ಘೋಷಣೆಯನ್ನು ಕೂಗುತ್ತಾ, ತೋಟದಲ್ಲಿ ಮೃತದೇಹವನ್ನು ತೆಗೆದುಕೊಂಡು ಹೋದ ನಂತರ ಸಂಪ್ರದಾಯದ ವಿಧಿ ವಿಧಾನಗಳನ್ನು ನೆರವೇರಿಸಿ ಶುಕ್ರವಾರ ಮಧ್ಯಾಹ್ನದ ವೇಳೆಗೆ ಅಂತ್ಯಕ್ರಿಯೆ ನಡೆಸಲಾಯಿತು.

ಜೋಡಿತಿಮ್ಮಾಪುರದಲ್ಲಿ ಮೃತ ಯೋಧ ಗಿರೀಶ್‌ ಅವರ ಪಾರ್ಥಿವ ಶರೀರಕ್ಕೆ ಶುಕ್ರವಾರ ನಿವೃತ್ತ ಯೋಧರು ಕಡೂರು ತಹಶೀಲ್ದಾರ್‌ ತಾಲ್ಲೂಕು ಪಂಚಾಯಿತಿ ಇಒ ಸೇರಿದಂತೆ ವಿವಿಧ ಗಣ್ಯರು ಅಂತಿಮ ನಮನ ಸಲ್ಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.