ಚಿಕ್ಕಮಗಳೂರು: ಕಳೆದೆರಡು ವಾರಗಳ ಹಿಂದಿನವರೆಗೆ ಮಾರುಕಟ್ಟೆಯಲ್ಲಿ ಏರುಮುಖವಾಗಿದ್ದ ನಿಂಬೆ ಹಣ್ಣಿನ ದರ, ಮಳೆ ಸುರಿದ ಬೆನ್ನಲ್ಲೇ ಇಳಿಕೆಯ ಹಾದಿಯಲ್ಲಿದೆ. ಕಳೆದ ವಾರ ನಿಂಬೆಹಣ್ಣಿನ ಸಗಟು ಬೆಲೆ1 ಕೆ.ಜಿಗೆ ₹120 ಇತ್ತು. ಈಗ ಇದು ₹100ರ ಆಸುಪಾಸಿಗೆ ತಗ್ಗಿದೆ.
ದೇಹಕ್ಕೆ ತಂಪು ನೀಡುವ ನಿಂಬೆಹಣ್ಣಿಗೆ ಬೇಸಿಗೆಯಲ್ಲಿ ಹೆಚ್ಚಿನ ಬೇಡಿಕೆ. ಶರಬತ್ತು, ಲೈಮ್ ಸೋಡಾ, ಅಡುಗೆ, ಶುಭ ಸಮಾರಂಭ, ಪೂಜೆ ಸೇರಿದಂತೆ ಬೇಡಿಕೆ ಹೆಚ್ಚಿದ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ದೊಡ್ಡ ಗಾತ್ರದ ಒಂದು ನಿಂಬೆ ಹಣ್ಣಿಗೆ ₹10ರಿಂದ ₹12ರವರೆಗೆ ಬೆಲೆ ಬಂದಿತ್ತು. ಆದರೆ, ಕಳೆದೆರಡು ವಾರಗಳಿಂದ ಮಳೆಯಾಗುತ್ತಿದ್ದು, ಬೇಡಿಕೆ ಗಣನೀಯವಾಗಿ ಕುಸಿದಿದೆ. ಈಗ ಒಂದು ನಿಂಬೆ ಹಣ್ಣನ್ನು ಗಾತ್ರ ಆಧರಿಸಿ ₹4ರಿಂದ ₹6 ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಸಣ್ಣ, ಮಧ್ಯಮ ಮತ್ತು ದೊಡ್ಡ ಗಾತ್ರದಲ್ಲಿ ಮೂರು ಬಗೆಯಲ್ಲಿ ವರ್ಗೀಕರಿಸಿ ನಿಂಬೆಹಣ್ಣನ್ನು ವ್ಯಾಪಾರ ಮಾಡಲಾಗುತ್ತಿದೆ.
ಜಿಲ್ಲೆಯ ಮಾರುಕಟ್ಟೆಗೆ ಆಂಧ್ರಪ್ರದೇಶ ಮತ್ತು ವಿಜಯಪುರದಿಂದ ನಿಂಬೆಹಣ್ಣು ಆವಕ ಆಗುತ್ತದೆ. ದೊಡ್ಡ ಗಾತ್ರದ, ಹೆಚ್ಚಿನ ರಸ ಹೊಂದಿರುವ ನಿಂಬೆಹಣ್ಣಿಗೆ ಹೆಚ್ಚಿನ ಬೇಡಿಕೆ. ಆಂಧ್ರದ ಹಳದಿ ನಿಂಬೆ ಮತ್ತು ವಿಜಯಪುರದ ಹಸಿರು ನಿಂಬೆಹಣ್ಣನ್ನು ಗ್ರಾಹಕರು ಅಡುಗೆ, ಉಪ್ಪಿನಕಾಯಿ, ಪಾನಕ ಹೀಗೆ ವಿವಿಧ ಉದ್ದೇಶಗಳಿಗೆ ತಕ್ಕಂತೆ ಆಯ್ಕೆ ಮಾಡಿ ಖರೀದಿಸುತ್ತಾರೆ.
ಮಾರ್ಚ್– ಏಪ್ರಿಲ್ ತಿಂಗಳಿನಲ್ಲಿ ಮದುವೆ, ಗ್ರಹಪ್ರವೇಶ ಸೇರಿದಂತೆ ಶುಭ ಸಮಾರಂಭಗಳು ಹೆಚ್ಚಿದ್ದವು. ಹೀಗಾಗಿ ನಿಂಬೆಹಣ್ಣಿಗೆ ಹೆಚ್ಚಿನ ಬೇಡಿಕೆ ಇತ್ತು. ಗ್ರಾಹಕರಿಗೆ ಮಾರುಕಟ್ಟೆಯಲ್ಲಿ ಸುಲಭವಾಗಿ ನಿಂಬೆಹಣ್ಣು ಸಿಗದಷ್ಟು ಅಭಾವವೂ ಉಂಟಾಗಿತ್ತು. ಈಗ ಸಮಾರಂಭಗಳು ಕಡಿಮೆ ಆಗಿವೆ. ಬೆಲೆಯೂ ಇಳಿದಿರುವುದಿರಂದ ಗ್ರಾಹಕರು ನಿರಾಳರಾಗಿದ್ದಾರೆ.
‘ಬೇಡಿಕೆ ಇದ್ದೇ ಇದೆ’
ಜಿಲ್ಲೆಯಲ್ಲಿ ಮಳೆ ಮುಂದುವರಿಯದೆ ಮತ್ತೆ ಬಿಸಿಲಿನ ವಾತಾವರಣ ಉಂಟಾದರೆ ನಿಂಬೆಹಣ್ಣಿಗೆ ಬೇಡಿಕೆ ಕುದುರುವ ಸಾಧ್ಯತೆ ಇದೆ. ನಿಂಬೆ ಹಣ್ಣಿಗೆ ಎಲ್ಲ ಹಂಗಾಮಿನಲ್ಲೂ ಬೇಡಿಕೆ ಇದ್ದೇ ಇರುತ್ತದೆ. ಬೇಸಿಗೆಯಲ್ಲಿ ತುಸು ಹೆಚ್ಚಿರುತ್ತದೆ ಎನ್ನುತ್ತಾರೆ ನಗರದ ನಿಂಬೆಹಣ್ಣಿನ ಸಗಟು ವ್ಯಾಪಾರಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.