ಮೂಡಿಗೆರೆ: ತಾಲ್ಲೂಕಿನ ಮಾಕೋನಹಳ್ಳಿ ಗ್ರಾಮದ ಹೊರಟ್ಟಿ ಗ್ರಾಮದಲ್ಲಿ 25ಕ್ಕೂ ಹೆಚ್ಚು ಕಾಡಾನೆಗಳ ಗುಂಪು, ಮಂಜುನಾಥ್ ಎಂಬುವವರ ಕಾಫಿ ತೋಟಕ್ಕೆ ನುಗ್ಗಿ, ಬೆಳೆಹಾನಿ ಮಾಡಿದೆ.
ಮಂಗಳವಾರ ನಸುಕಿನಲ್ಲಿ 25 ರಿಂದ 30 ಕಾಡಾನೆಗಳ ಗುಂಪು ಹೊಸಪುರ, ಗಾಡಿಚೌಕ, ಚಂದ್ರಾಪುರ ಮಾರ್ಗವಾಗಿ ಹೊರಟ್ಟಿಗೆ ಬಂದಿದ್ದು, ಬೆಳಿಗ್ಗೆ 6.45ರವರೆಗೂ ಮಂಜುನಾಥ್ ಎಂಬುವವರ ತೋಟದಲ್ಲಿಯೇ ಬೀಡು ಬಿಟ್ಟು, 2 ಎಕರೆ ಜಮೀನಿನಲ್ಲಿದ್ದ ಕಾಫಿ, ಕಾಳು ಮೆಣಸು, ಬಾಳೆ, ಅಡಿಕೆ, ಸಿಲ್ವರ್ ಮರಗಳನ್ನು ನೆಲಸಮಗೊಳಿಸಿವೆ. ತೋಟದ ಪಕ್ಕದಲ್ಲೇ ಮನೆಗಳಿದ್ದು, ಆನೆಗಳಿಗೆ ಹೆದರು ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕಿದರು. ಬೆಳಕು ಹರಿಯುವವರೆಗೆ ಕಾಫಿ ತೋಟದಲ್ಲೇ ಕಾಡಾನೆಗಳು ತಿರುಗಾಡಿವೆ. ಇಡೀ ತೋಟವನ್ನು ನಾಶ ಮಾಡಿವೆ ಎಂದು ಸ್ಥಳೀಯರು ಹೇಳಿದರು. ಆನೆ ಹಿಂಡು ಗ್ರಾಮದ ಪಕ್ಕದಲ್ಲಿರುವ ಅರಣ್ಯ ಸೇರಿದ್ದು, ಹೊರಟ್ಟಿ, ತುದಿಯಾಲ, ಮೂಡಸಸಿ ಸುತ್ತಮುತ್ತಲ ಗ್ರಾಮಗಳಲ್ಲಿ ಇಡೀ ದಿನ ಭಯದ ವಾತಾವರಣ ನಿರ್ಮಾಣವಾಗಿತ್ತು.
'ಎರಡು ತಿಂಗಳಿನಿಂದ ಮಾಕೋನಹಳ್ಳಿ, ನಂದೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲೇ ಕಾಡಾನೆಗಳು ಬೀಡು ಬಿಟ್ಟಿವೆ. ಕಾಡಾನೆಗಳು ದಾಳಿ ನಡೆಸುತ್ತಿರುವ ಪ್ರದೇಶಗಳು ಗಡಿ ಗ್ರಾಮಗಳಾಗಿದ್ದು, ಬೇಲೂರು ತಾಲ್ಲೂಕನ್ನು ಕಾಡಾನೆಗಳು ಪ್ರವೇಶಿಸದಂತೆ ತಡೆಯುತ್ತಿರುವುದರಿಂದ ಗಡಿ ಗ್ರಾಮಗಳಲ್ಲಿಯೇ ಕಾಡಾನೆಗಳು ಸುತ್ತಾಡುತ್ತಿವೆ. ನಿರಂತರವಾಗಿ ದಾಳಿ ನಡೆಯುತ್ತಿದ್ದರೂ ಯಾವುದೇ ಪರಿಹಾರ ಕೈಗೊಳ್ಳುತ್ತಿಲ್ಲ. ಕಾಡಾನೆಗಳಿರುವ ಬಗ್ಗೆ ಪ್ರತಿ ಗಂಟೆಗೂ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡುವ ಅರಣ್ಯ ಇಲಾಖೆಯು, ಇಲ್ಲಿನ ವಾಸ್ತವಾಂಶವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಶಾಶ್ವತ ಪರಿಹಾರ ಕಂಡುಕೊಳ್ಳುತ್ತಿಲ್ಲ’ ಎನ್ನುವುದು ಸ್ಥಳೀಯರ ದೂರು.
ಕಾಡಾನೆಗಳು ಗುಂಪಾಗಿ ತಿರುಗಾಡುತ್ತಿರುವುದರಿಂದ ಸುತ್ತಲಿನ ಪ್ರದೇಶಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ರಾತ್ರಿಯಾಗುತ್ತಿದ್ದಂತೆ ಗ್ರಾಮಗಳಲ್ಲಿ ಜನರು ಜೀವ ಬಿಗಿ ಹಿಡಿದು ಕೂರುವಂತಾಗಿದೆ. ಕೂಡಲೇ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಕಾಡಾನೆ ಭಯ: ಕೃಷಿ ಚಟುವಟಿಕೆ ಸ್ತಬ್ಧ ‘30 ಕಾಡಾನೆಗಳು ಏಕಕಾಲದಲ್ಲಿ ತೋಟದಿಂದ ನಡೆದುಕೊಂಡು ಹೋದರೂ ಸಾಕು ತೋಟ ನೆಲ ಸಮವಾಗುತ್ತದೆ. ಕಾಡಾನೆ ದಾಳಿಗೆ ಹೆದರಿ ಕಾಫಿ ಕೊಯ್ಲಿನ ಬಳಿಕ ತೋಟಗಳಲ್ಲಿ ಕೃಷಿ ಚಟುವಟಿಕೆಗಳು ಸ್ತಬ್ಧಗೊಂಡಿವೆ. ಜನಪ್ರತಿನಿಧಿಗಳು ಸಮಸ್ಯೆ ಪರಿಹಾರಕ್ಕಾಗಿ ಇಲಾಖೆಯೊಂದಿಗೆ ತುರ್ತಾಗಿ ಚರ್ಚಿಸಬೇಕು. ಈಗಾಗಲೇ ತೋಟಗಳನ್ನು ಕಳೆದು ಕೊಂಡಿರುವ ರೈತರಿಗೆ ವೈಜ್ಞಾನಿಕ ರೀತಿಯಲ್ಲಿ ಪರಿಹಾರವನ್ನು ನೀಡಬೇಕು' ಎನ್ನುತ್ತಾರೆ ಬೆಳೆ ಹಾನಿಗೊಳಗಾದ ರೈತ ಮಂಜುನಾಥ್ ಹೊರಟ್ಟಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.