ADVERTISEMENT

ನೀರಿನ ಕೊರತೆ ಉಂಟಾಗದಂತೆ ಕ್ರಮವಹಿಸಿ

ನಗರಸಭೆಯಲ್ಲಿ ನಡೆದ ಸಭೆಯಲ್ಲಿ ಶಾಸಕ ಸಿ.ಟಿ.ರವಿ ಸೂಚನೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2019, 13:39 IST
Last Updated 3 ಜೂನ್ 2019, 13:39 IST
ಚಿಕ್ಕಮಗಳೂರಿನ ನಗರಸಭೆಯಲ್ಲಿ ನಡೆದ ಸಭೆಯಲ್ಲಿ ಶಾಸಕ ಸಿ.ಟಿ.ರವಿ ಮಾತನಾಡಿದರು. ಜಿಲ್ಲಾಧಿಕಾರಿ ಡಾ.ಬಗಾದಿಗೌತಮ್, ನಗರಸಭೆ ಆಯಕ್ತ ಕೆ.ಪರಮೇಶಿ ಇದ್ದಾರೆ.
ಚಿಕ್ಕಮಗಳೂರಿನ ನಗರಸಭೆಯಲ್ಲಿ ನಡೆದ ಸಭೆಯಲ್ಲಿ ಶಾಸಕ ಸಿ.ಟಿ.ರವಿ ಮಾತನಾಡಿದರು. ಜಿಲ್ಲಾಧಿಕಾರಿ ಡಾ.ಬಗಾದಿಗೌತಮ್, ನಗರಸಭೆ ಆಯಕ್ತ ಕೆ.ಪರಮೇಶಿ ಇದ್ದಾರೆ.   

ಚಿಕ್ಕಮಗಳೂರು: ನಗರದಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಶಾಸಕ ಸಿ.ಟಿ.ರವಿ ಸೂಚಿಸಿದರು.

ನಗರಸಭೆಯಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ರಂಜಾನ್ ಹತ್ತಿರ ಬರುತ್ತಿದೆ. ಹೆಚ್ಚುವರಿ ಟ್ಯಾಂಕರ್‌ಗಳನ್ನು ಬಾಡಿಗೆ ಪಡೆದು ಬಡಾವಣೆಗಳಿಗೆ ನೀರು ಸರಬರಾಜು ಮಾಡಬೇಕು. ಹಬ್ಬ ಆಚರಣೆ ತೊಂದರೆ ಆಗದಂತೆ ನೀರು ಪೂರೈಸಬೇಕು. ಯಗಚಿಯಿಂದ ಸರಬರಾಜಾಗುವ ನೀರು ಮುಗುಳವಳ್ಳಿ ಪಿಕ್‌ ಅಪ್‌ನಿಂದ ಹಿಂದಿರುಗದಂತೆ ಎನ್‌ಆರ್‌ವಿ ವಾಲ್ ಅಳವಡಿಸಬೇಕು ಎಂದರು.

ADVERTISEMENT


ನಗರದ ಯುಜಿಡಿ ಕಾಮಗಾರಿ 2013ಕ್ಕೆ ಪೂರ್ಣಗೊಳ್ಳಬೇಕಿತ್ತು. ಕಾಮಗಾರಿ ಅವಧಿಯನ್ನು ನಾಲ್ಕು ಬಾರಿ ವಿಸ್ತರಿಸಲಾಗಿದೆ. ಗುತ್ತಿಗೆದಾರನ ನಿರ್ಲಕ್ಷದಿಂದಾಗಿ ಈವರೆಗೆ ಪೂರ್ಣಗೊಂಡಿಲ್ಲ. ಕಾಮಗಾರಿ ವೆಚ್ಚ ₹57 ಕೋಟಿಯಿಂದ ₹82 ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮತ್ತು ಗುತ್ತಿಗೆದಾರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ನಗರ ವ್ಯಾಪ್ತಿಯ ವಿದ್ಯುತ್ ಕಂಬಗಳಿಗೆ ನಂಬರಿಂಗ್ ಮಾಡಲು ಸೂಚಿಸಿ 7 ತಿಂಗಳಾಗಿವೆ. ಈವರೆಗೆ ಆಗಿಲ್ಲ. ಬೀದಿ ದೀಪಗಳ ಬದಲಿಸಿರುವುದು ಮತ್ತು ದುರಸ್ಥಿಗೊಳಿಸಿರುವುದು ಪಟ್ಟಿಯನ್ನು ಜಿಲ್ಲಾಧಿಕಾರಿ ಮತ್ತು ತಮ್ಮ ಕಚೇರಿಗೆ’ ತಲುಪಿಸುವಂತೆ ಹೇಳಿದರು.

‘ಕಸ ಸಂಗ್ರಹಣಾ ವಾಹನಗಳಿಗೆ ಕಸ ನೀಡಲು ಜನರು ಹೊಂದಿಕೊಂಡಿದ್ದರು. ಆದರೆ ಕೆಲ ದಿನಗಳಿಂದ ಕಸ ಸಂಗ್ರಹಣ ವಾಹನಗಳು ಬಡಾವಣೆಗಳಿಗೆ ನಿತ್ಯ ಹೋಗುತ್ತಿಲ್ಲ. ಜನರು ರಸ್ತೆ ಬದಿ ಕಸ ಹಾಕಲು ಆರಂಭಿಸಿದ್ದಾರೆ. ಈ ಬಗ್ಗೆ ನಗರಸಭೆ ಆರೋಗ್ಯಾಧಿಕಾರಿಗಳು ಗಮನಹರಿಸಬೇಕು. ದಿನ ಬಿಟ್ಟು ದಿನ ಬಡಾವಣೆಗಳಿಗೆ ಬೇಟಿ ನೀಡಬೇಕು. ರಸ್ತೆ ಬದಿ ಕಸ ತೆಗೆಸಲು ಕ್ರಮ ವಹಿಸಬೇಕು. ಸ್ವಚ್ಛತಾ ಕಾರ್ಯ ನಡೆಸಿರುವ ಬಗ್ಗೆ ವಾಟ್ಸ್ ಅಪ್ ಮೂಲಕ ಜಿಲ್ಲಾಧಿಕಾರಿ ಮತ್ತು ನನಗೆ ಪೋಟೋಗಳನ್ನು ಕಳುಹಿಸಬೇಕು’ ಎಂದರು.

ನಗರಸಭೆ ವ್ಯಾಪ್ತಿಯ ಮನೆಗಳು ಮತ್ತು ನಿವೇಶನಗಳ ತೆರಿಗೆಯನ್ನು ಕಟ್ಟು ನಿಟ್ಟಾಗಿ ವಸೂಲಿ ಮಾಡಬೇಕು. ತೆರಿಗೆ ಪಾವತಿಸಿದವರಿಗೆ ನೋಟೀಸ್ ನೀಡಬೇಕು. ಆಗಲೂ ತೆರಿಗೆ ನೀಡದಿದ್ದರೆ, ಮನೆಗಳ ನೀರು, ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕು. ಖಾಸಗಿ ಶಾಲಾ–ಕಾಲೇಜುಗಳಿಗೆ ತೆರಿಗೆ ರಿಯಾಯಿತಿ ನೀಡಲು ಅವಕಾಶ ಇದೆ. ಆದರೆ ಸೆಸ್ ವಿನಾಯಿತಿ ನೀಡಲು ಅವಕಾಶ ಇಲ್ಲ. ಕಡ್ಡಾಯವಾಗಿ ಸೆಸ್ ಸಂಗ್ರಹಿಸಬೇಕು ಎಂದರು.

ಅನಧಿಕೃತ ಕಟ್ಟಡಗಳ ಮೂಲ ಸೌಕರ್ಯಗಳನ್ನು ಕಡಿತಗೊಳಿಸಬೇಕು. ನಗರಸಭೆಯಿಂದ ಪರವಾನಗಿ ನೀಡದಿರುವ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡದಿರಲು ಮೆಸ್ಕಾಂ ಅಧಿಕಾರಿಗಳು ಎಚ್ಚರವಹಿಸಬೇಕು. ಅಯ್ಯಪ್ಪನಗರದ ಉದ್ಯಾನ ಒತ್ತುವರಿ ಮಾಡಿಕೊಂಡು ಕೆಲವರು ಕಟ್ಟಡ ನಿರ್ಮಿಸಿದ್ದಾರೆ. ಆ ಕಟ್ಟಡ ವಶಕ್ಕೆ ಪಡೆಯಬೇಕು. ನಗರಸಭೆ ಸ್ವತ್ತು ಎಂದು ಬೋರ್ಡ್ ಹಾಕಬೇಕು ಎಂದರು.

ಬಹಿರಂಗ ಜಿಮ್: ಜಿಲ್ಲಾ ಆಟದ ಮೈದಾನದಲ್ಲಿರುವ ಸ್ಕೇಟಿಂಗ್ ಟ್ರ್ಯಾಕ್ ಪಕ್ಕ, ಜಯನಗರ, ರತ್ನಗಿರಿ ಬೋರೆ, ನಗರಸಭೆ ಆವರಣದ ಉದ್ಯಾನಗಳಿಗೆ ಬಹಿರಂಗ ಜಿಮ್ ಅಳವಡಿಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಬೇಕು. ತಿಲಕ್ ಪಾರ್ಕ್‌ನಲ್ಲಿರುವ ಜಾರಬಂಡೆಯ ಸ್ಟೀಲ್ ತಗಡು ತುಕ್ಕು ಹಿಡಿದಿದೆ. ಅದನ್ನು ಶೀಘ್ರವಾಗಿ ಬದಲಿಸಬೇಕು ಎಂದರು.

ಎಂ.ಜಿ.ರಸ್ತೆ, ಐ.ಜಿ.ರಸ್ತೆಗಳ ಪಾದಾಚಾರಿ ಮಾರ್ಗವನ್ನು ವ್ಯಾಪಾರಿಗಳು ಅತಿಕ್ರಮಿಸಿದ್ದಾರೆ. ಅದನ್ನು ತೆರವುಗೊಳಿಸಬೇಕು. ತಲೆ ಮೇಲೆ ಹೊತ್ತು ತಂದು ಹಾಗೂ ಸೈಕಲ್‌ ನಿಲ್ಲಿಸಿಕೊಂಡು ಸೊಪ್ಪು ವ್ಯಾಪಾರ ಮಾಡುವವರ ಬಳಿ ಸುಂಕ ವಸೂಲು ಮಾಡಬಾರದು . ತಳ್ಳುವ ಗಾಡಿಗಳಿಂದ ಹೆಚ್ಚು ಸುಂಕ ವಸೂಲು ಮಾಡುತ್ತಿರುವ ಬಗ್ಗೆ ದೂರು ಬಂದಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳು ಕ್ರಮವಹಿಸಬೇಕು ಎಂದರು.

ನೀರಿನ ಕೊರತೆ: ನಗರಕ್ಕೆ 18 ಎಂಎಲ್‌ಡಿ ನೀರಿನ ಅಗತ್ಯ ಇದೆ. ಯಗಚಿಯಿಂದ 10ಎಂ.ಎಲ್‌ಡಿ, ಕೊಳವೆಬಾವಿಗಳಿಂದ 2 ಎಂಎಲ್‌ಡಿ ನೀರು ದೊರೆಯುತ್ತಿದೆ. ಹಿರೇಕೊಳಲೆಯಲ್ಲಿ ಹೂಳು ಹೆಚ್ಚಿರುವುದರಿಂದ ನೀರನ್ನು ಪಂಪ್ ಮಾಡಲು ಸಾಧ್ಯವಾಗುತ್ತಿಲ್ಲ. 6ಎಂಎಲ್‌ಡಿ ನೀರಿನ ಕೊರತೆ ಇದೆ ಎಂದು ನಗರಸಭೆ ಎಇಇ ಲೋಕೇಶ್ ಸಭೆಗೆ ಮಾಹಿತಿ ನೀಡಿದರು.

ಒಂದನೇ ವಾರ್ಡಿನಿಂದ 18ನೇ ವಾರ್ಡ್ ವರೆಗೆ 4 ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ. ಉಳಿಕೆ ವಾರ್ಡುಗಳಿಗೆ ನಗರಸಭೆಯ ಒಂದು ಮತ್ತು ಖಾಸಗಿಯ ನಾಲ್ಕು ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

‘ನಗರಸಭೆ ವ್ಯಾಪ್ತಿಯಲ್ಲಿ 32,263 ಖಾತೆಗಳಿವೆ. ಈ ಪೈಕಿ 3,792 ಖಾತೆಗಳಿಂದ ತೆರಿಗೆ ವಸೂಲು ಮಾಡಲಾಗಿದೆ. ಸರ್ಕಾರಿ ಕಟ್ಟಡಗಳ ತೆರಿಗೆ ₹1.5 ಕೋಟಿ ಬಾಕಿ ಇದೆ. ನಗರಸಭೆ ವ್ಯಾಪ್ತಿಯ 25 ಮಳಿಗೆಗಳಿಂದ ಮೂರು ತಿಂಗಳ ಬಾಡಿಗೆ ಬಾಕಿ ಇದೆ. ಶೀಘ್ರವಾಗಿ ವಸೂಲು ಮಾಡಲಾಗುವುದು’ ಎಂದು ನಗರಸಭೆ ಕಂದಾಯ ಅಧಿಕಾರಿ ಬಸವರಾಜು ತಿಳಿಸಿದರು.

ನಗರಸಭೆ ಸದಸ್ಯರಾದ ಎಚ್.ಡಿ.ತಮ್ಮಯ್ಯ, ಟಿ.ರಾಜಶೇಖರ್, ಮುತ್ತಯ್ಯ, ಕವಿತಾಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.