ADVERTISEMENT

ಮೂಡಿಗೆರೆ: ವಲಸೆ ಮಕ್ಕಳಿಗಿಲ್ಲ ಕಲಿಕೆ ಭಾಗ್ಯ

ಸಂತೆಕಟ್ಟೆಯಲ್ಲಿ ಬೀಡು ಬಿಟ್ಟಿರುವ 15ಕ್ಕೂ ಅಧಿಕ ಮಕ್ಕಳು

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 6:04 IST
Last Updated 6 ನವೆಂಬರ್ 2025, 6:04 IST
ಮೂಡಿಗೆರೆಯ ಸಂತೆಕಟ್ಟೆಯಲ್ಲಿ ಬೀಡುಬಿಟ್ಟಿರುವ ವಲಸೆ ಕುಟುಂಬಗಳು
ಮೂಡಿಗೆರೆಯ ಸಂತೆಕಟ್ಟೆಯಲ್ಲಿ ಬೀಡುಬಿಟ್ಟಿರುವ ವಲಸೆ ಕುಟುಂಬಗಳು   

ಮೂಡಿಗೆರೆ: ರಾಜ್ಯದ ವಿವಿಧ ಭಾಗಗಳಿಂದ ಕೂಲಿಗಾಗಿ ಬಂದಿರುವ ಹಲವು ವಲಸೆ ಕುಟುಂಬಗಳ ಮಕ್ಕಳು ಪಟ್ಟಣದ ಸಂತೆ ಕಟ್ಟೆಯಲ್ಲಿ ಬೀಡುಬಿಟ್ಟಿದ್ದು ಕಲಿಕೆಯಿಂದ ಹೊರಗುಳಿದಿದ್ದಾರೆ.

ಬೇಲೂರು, ಹಳೇಬೀಡು, ಚಿತ್ರದುರ್ಗ ಸೇರಿದಂತೆ ವಿವಿಧ ಭಾಗಗಳಿಂದ ಮಣ್ಣಿನ ಕೆಲಸಕ್ಕಾಗಿ ಹತ್ತಾರು ಕುಟುಂಬಗಳು ಬಂದಿದ್ದು, ಸಂತೆಕಟ್ಟೆಯ ಆರು ಮಾಳಿಗೆಗಳಲ್ಲಿ ವಾಸಿಸುತ್ತಿದ್ದಾರೆ. ಅಂಗನವಾಡಿ ಹಾಗೂ ಪ್ರಾಥಮಿಕ ಶಾಲಾ ಹಂತದಲ್ಲಿ ಕಲಿಯುವ ವಯಸ್ಸಿನ ಸುಮಾರು 15ಕ್ಕೂ ಬಾಲಕ, ಬಾಲಕಿಯರಿದ್ದಾರೆ.

ಕೆಲವರು ತಮ್ಮ ಪೋಷಕರೊಂದಿಗೆ ಕೂಲಿಯ ಸ್ಥಳಗಳಿಗೆ ತೆರಳಿದರೆ, ಮತ್ತೆ‌ ಕೆಲವು ಮಕ್ಕಳು ಹಗಲಿಡೀ ಸಂತೆ ಕಟ್ಟೆಯಲ್ಲಿಯೇ ಉಳಿದು ತಮ್ಮ ಕುಟುಂಬದ ಪಾತ್ರೆ, ದಿನಸಿಗಳನ್ನು ಕಾಯುವ ಕೆಲಸ ಮಾಡುತ್ತಿದ್ದಾರೆ. ಜಲಜೀವನ್ ಮಿಷನ್ ಕಾಮಗಾರಿಯಲ್ಲಿ ಚರಂಡಿ ನಿರ್ಮಿಸುವುದು ಹಾಗೂ ಶುಂಠಿಗೆ ಮಣ್ಣು ಕೊಡುವ ಕೆಲಸಕ್ಕೆ ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ಬಯಲು‌ ಸೀಮೆಯಿಂದ ಕಾರ್ಮಿಕರು ವಲಸೆ ಬಂದಿದ್ದು, ತಮ್ಮೊಂದಿಗೆ ಮಕ್ಕಳನ್ನು ಕರೆ ತಂದಿದ್ದಾರೆ.

ADVERTISEMENT

ಈ ಕುಟುಂಬಗಳಲ್ಲಿ‌ ಹದಿಹರೆಯದ ಹೆಣ್ಣು ಮಕ್ಕಳು ಕೂಡ ಬಂದಿದ್ದು, ಸ್ನಾನ, ಮಲಮೂತ್ರ ವಿಸರ್ಜನೆಗೆ ಸಂತೆಕಟ್ಟೆಯಲ್ಲಿರುವ ಪೊದೆಗಳನ್ನು ಆಶ್ರಯಿಸುವಂತಾಗಿದೆ. ಯಾವುದೇ ಭದ್ರತೆ, ರಕ್ಷಣೆಯಿಲ್ಲದೇ ಸಂತೆಕಟ್ಟೆಯಲ್ಲಿಯೇ ಜೀವನ ನಡೆಸುವಂತಾಗಿದೆ. ಸಂತೆಕಟ್ಟೆಯಲ್ಲಿ ಪಟ್ಟಣ ಪಂಚಾಯಿತಿಯ ಸಾರ್ವಜನಿಕ ಶೌಚಾಲಯವಿದ್ದರೂ, ಅದಕ್ಕೆ ಬೀಗ ಹಾಕಿರುವುದರಿಂದ ಮಹಿಳೆಯರು, ಹೆಣ್ಣು ಮಕ್ಕಳು, ಕೂಲಿಕಾರ್ಮಿಕರು ಮಲವಿಸರ್ಜನೆಗೆ ಚರಂಡಿಯನ್ನೇ ಬಳಸುವಂತಾಗಿದೆ.

‘ವರ್ಷಪೂರ್ತಿ ಸಂತೆ ಕಟ್ಟೆಯಲ್ಲಿ ವಲಸೆ ಕಾರ್ಮಿಕರೇ ನೆಲೆಸಿರುತ್ತಾರೆ. ಶೌಚಾಲಯದ ವ್ಯವಸ್ಥೆ ಇಲ್ಲದ ಕಾರಣ, ಸಂತೆ ಪ್ರದೇಶವು ಮಲಮೂತ್ರ ವಿಸರ್ಜನೆಯ ಕೇಂದ್ರವಾಗಿ ಅಕ್ಕಪಕ್ಕದ ‌ನಿವಾಸಿಗಳು ವಾಸಿಸದಂತಾಗುತ್ತದೆ. ಸಂತೆ ಕಟ್ಟೆಯಿಂದ ಸ್ವಲ್ಪ ದೂರದಲ್ಲಿ ಸರ್ಕಾರಿ ಶಾಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿದ್ದು, ವಲಸೆ ಮಕ್ಕಳ ಶಿಕ್ಷಣಕ್ಕೆ ಕ್ರಮ‌ ಕೈಗೊಂಡರೆ ಪೋಷಕರ ದುಡಿಮೆಗೆ ಮಕ್ಕಳ ಕಲಿಕೆ ಬಲಿಯಾಗುವುದು ತಪ್ಪುತ್ತದೆ. ಪಟ್ಟಣದ ರಂಗಮಂದಿರ, ಸಂತೆಕಟ್ಟೆ, ಹೊಯ್ಸಳ ಕ್ರೀಡಾಂಗಣ ನಿರಾಶ್ರಿತರ‌ ತಾಣವಾಗಿದ್ದು, ಈ ತಾಣಗಳಲ್ಲಿ 20ಕ್ಕೂ ಅಧಿಕ ಶಾಲೆ ಬಿಟ್ಟಿರುವ ಪ್ರಾಥಮಿಕ ಶಾಲಾ ಹಂತದ ಮಕ್ಕಳು ಕಾಣಸಿಗುತ್ತಾರೆ. ಸಂಬಂಧಿಸಿದ ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸಿದರೆ ಪ್ರತ್ಯೇಕ ಕೇಂದ್ರವನ್ನೇ ತೆರೆಯಬಹುದಾಗಿದೆ. ಸರ್ಕಾರಿ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಕೊರತೆಯಿದ್ದು, ಈ ವಲಸೆ ಮಕ್ಕಳಿಗೆ ಅಲ್ಲಿ ವಸತಿ ಕಲ್ಪಿಸಿ ಶಿಕ್ಷಣಕ್ಕೆ ಪ್ರೇರೇಪಿಸಿದರೆ ಶಿಕ್ಷಣ ವಂಚಿತ ಮಕ್ಕಳಿಗೆ ಅನುವಾಗುತ್ತದೆ' ಎನ್ನುತ್ತಾರೆ ಪಟ್ಟಣದ ಖಾಸಗಿ ಶಾಲೆಯ ಶಿಕ್ಷಕ ಮಹೇಶ್.

ಪ್ರಾಥಮಿಕ ಶಿಕ್ಷಣವು ಮಕ್ಕಳ ಮೂಲಭೂತ ಹಕ್ಕಾಗಿದ್ದು, ಕಣ್ಣೆದುರೇ ಹಕ್ಕು ಮೊಟಕಾಗುತ್ತಿದ್ದರೂ ಹಾಗೂ ಶಿಕ್ಷಣ ಮೊಟಕುಗೊಳಿಸಿ ಜೆಜೆಎಂ ನಂತಹ ಸರ್ಕಾರಿ ಕಾಮಗಾರಿಗಳಲ್ಲಿ‌ ಮಣ್ಣು ಅಗೆಯುವ ಕಾರ್ಯದಲ್ಲಿ ಪೋಷಕರೊಂದಿಗೆ ಭಾಗಿಯಾಗಿದ್ದರೂ ಮಕ್ಕಳನ್ನು ಶಿಕ್ಷಣದತ್ತ ಮುಖ‌ ಮಾಡಿಸದಿರದಕ್ಕೆ ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.