ADVERTISEMENT

ಸಂಪುಟದಲ್ಲಿ ಉಳಿಸಿಕೊಳ್ಳುವುದು, ಬಿಡುವುದು ಪಕ್ಷದ ತೀರ್ಮಾನಕ್ಕೆ ಬಿಟ್ಟದ್ದು: ರವಿ

ಸಚಿವ ಸಿ.ಟಿ. ರವಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 19:45 IST
Last Updated 27 ಜನವರಿ 2020, 19:45 IST
ಸಿ.ಟಿ. ರವಿ
ಸಿ.ಟಿ. ರವಿ   

ಚಿಕ್ಕಮಗಳೂರು: ‘ಸಚಿವರನ್ನು ಉಳಿಸಿಕೊಳ್ಳುವುದು, ಕೈಬಿಡುವುದು ಪಕ್ಷಕ್ಕೆ ಬಿಟ್ಟ ವಿಚಾರ. ಕಾರ್ಯಕರ್ತ ಸ್ಥಾನವನ್ನು ಒಪ್ಪಿ ಸ್ವೀಕರಿಸಿದ್ದೇನೆ, ಅದನ್ನು ಯಾರು ಕಸಿದುಕೊಳ್ಳಲು ಸಾಧ್ಯವಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಪ್ರತಿಕ್ರಿಯಿಸಿದರು.

ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಚೌಳಹಿರಿಯೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾರ್ಯಕರ್ತ ಸ್ಥಾನ ಮಾತ್ರ ಶಾಶ್ವತ. ಉಳಿದವು ಶಾಶ್ವತವಲ್ಲ’ ಎಂದು ಉತ್ತರಿಸಿದರು.

‘ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಬಗ್ಗೆ ತಿಳಿದವರು ದುರುದ್ದೇಶಪೂರ್ವಕವಾಗಿ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಅಮಾಯಕರು ಅರಿವಿಲ್ಲದೆ ತಪ್ಪು ಅಭಿಪ್ರಾಯಕ್ಕೆ ಬಲಿಯಾಗುತ್ತಿದ್ದಾರೆ. ಹೀಗಾಗಿ, ಜಾಗೃತಿ ಸಭೆಗಳನ್ನು ಆಯೋಜಿಸಿ ವಾಸ್ತವಿಕ ಸಂಗತಿ ತಿಳಿಸುವ ಕೆಲಸ ಮಾಡಲಾಗುತ್ತಿದೆ. ರಾಜನಾಥ್‌ ಸಿಂಗ್‌, ಅಮಿತ್‌ ಶಾ ಮೊದಲಾದ ಕೇಂದ್ರ ಸಚಿವರು, ಮುಖಂಡರು ಸಭೆಗಳಲ್ಲಿ ಪಾಲ್ಗೊಂಡು ಸತ್ಯಸಂಗತಿ ತಿಳಿಸುತ್ತಿದ್ದಾರೆ’ ಎಂದರು.

ADVERTISEMENT

‘ಪಿಎಫ್‌ಐ, ಎಸ್‌ಡಿಪಿಐ ಕಾರ್ಯಚಟುವಟಿಕೆ ತಾಲಿಬಾನ್‌ನ ಪ್ರಾಥಮಿಕ ಹಂತ. ಜನರ ‘ಬ್ರೈನ್‌ ವಾಶ್‌’ ಮಾಡಿ ನಂತರ ಅವರ ಕೈಗೆ ಬಂದೂಕು ಕೊಡುವ ಕೆಲಸವನ್ನು ಆಫ್ಗಾನಿಸ್ತಾನದಲ್ಲಿ ತಾಲಿಬಾನಿಗಳು ಮಾಡಿದ್ದರು. ಪಿಎಫ್‌ಐ, ಎಸ್‌ಡಿಪಿಐ ಇದೇ ಕೆಲಸ ಮಾಡುತ್ತಿವೆ’ ಎಂದು ಉತ್ತರಿಸಿದರು.

‘ಸಿಮಿ ನಿಷೇಧಕ್ಕೂ ಮುಂಚೆ ಕಚೇರಿ ಮೇಲೆ ದಾಳಿ ಮಾಡಿದಾಗ ಅಲ್ಲಿ ಮೊಘಲ್‌ಸ್ತಾನ ಹೆಸರು, ಭೂಪಟ ಇತ್ತು. ಉತ್ತರದ ಎಲ್ಲ ರಾಜ್ಯಗಳನ್ನು ಸೇರಿಸಿಕೊಂಡು ಹೊಸರಾಷ್ಟ್ರದ ಕಲ್ಪನೆ ಇಟ್ಟುಕೊಂಡಿದ್ದರು. 1908ರಲ್ಲಿ ಆಗಾ ಖಾನ್‌ ಅವರು ನಾವು ಮುಸಲ್ಮಾರು ರಾಷ್ಟ್ರದೊಳಗೊಂದು ರಾಷ್ಟ್ರ ಎಂದು ಹೇಳಿದ್ದರು. ಎಸ್‌ಡಿಪಿಐ, ಪಿಎಫ್‌ಐನಂಥ ಸಂಘಟನೆಗಳು ರಾಷ್ಟ್ರದೊಳಗಿನ ರಾಷ್ಟ್ರ ಕಲ್ಪನೆಯನ್ನು ಬೆಳೆಸುತ್ತಿರುವುದು ಆಘಾತಕಾರಿ ಸಂಗತಿ. ಜನ ಜಾಗೃತರಾಗಬೇಕು. ಇಲ್ಲದಿದ್ದರೆ 1947ರ ಭಾರತ ವಿಭಜನೆಯಂಥ ಘಟನೆಗಳು ಮರುಕಳಿಸಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.