ADVERTISEMENT

ಚಿಕ್ಕಮಗಳೂರು | ಜನರ ಸಮಸ್ಯೆಗೆ ಸ್ಪಂದಿಸಿ: ಶಾಸಕ ಎಚ್.ಡಿ. ತಮ್ಮಯ್ಯ ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 6:06 IST
Last Updated 22 ಜನವರಿ 2026, 6:06 IST
ಕಳಸಾಪುರ ಗ್ರಾಮ ಪಂಚಾಯಿತಿ ಕಚೇರಿಯನ್ನು ಶಾಸಕ ಎಚ್.ಡಿ.ತಮ್ಮಯ್ಯ ಉದ್ಘಾಟಿಸಿದರು
ಕಳಸಾಪುರ ಗ್ರಾಮ ಪಂಚಾಯಿತಿ ಕಚೇರಿಯನ್ನು ಶಾಸಕ ಎಚ್.ಡಿ.ತಮ್ಮಯ್ಯ ಉದ್ಘಾಟಿಸಿದರು   

ಚಿಕ್ಕಮಗಳೂರು: ಗ್ರಾಮೀಣ ಭಾಗದ ರೈತರು, ಬಡವರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಗ್ರಾಮ ಪಂಚಾಯಿತಿ ಕಚೇರಿಗೆ ಬಂದಾಗ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿ ಸ್ಪಂದಿಸಿ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಶಾಸಕ ಎಚ್.ಡಿ. ತಮ್ಮಯ್ಯ ತಿಳಿಸಿದರು.

ಕಳಸಾಪುರದಲ್ಲಿ ₹24.30 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಗ್ರಾಮ ಪಂಚಾಯಿತಿ ಕಟ್ಟಡ ಹಾಗೂ ₹12 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಗ್ರಂಥಾಲಯ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಜಿ ರಾಮ್ ಜಿ ಯೋಜನೆಯಿಂದ ಒಂದು ಕಾಂಪೌಂಡ್ ನಿರ್ಮಾಣ ಮಾಡಲು ಅಸಾಧ್ಯ. ನರೇಗಾ ಯೋಜನೆಯಡಿ ಸುಂದರವಾಗಿ ಕಟ್ಟಡ ನಿರ್ಮಿಸಲಾಗಿದೆ ಎಂದರು.

ADVERTISEMENT

ಬೀದಿ ದೀಪ, ಚರಂಡಿ ಸ್ವಚ್ಛತೆ, ಕುಡಿಯುವ ನೀರು ಸೇರಿ ಮೂಲ ಸೌಕರ್ಯಗಳ ಬಗ್ಗೆ ಮನವಿ ನೀಡಲು ಪಂಚಾಯಿತಿಗೆ ಸಾರ್ವಜನಿಕರು ಬಂದಾಗ ಸ್ಪಂದಿಸಿ ಕೆಲಸ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಥಳೀಯ ಸಂಸ್ಥೆಗಳು ಉತ್ತಮವಾಗಿ ಕೆಲಸ ಮಾಡಿದಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಸಮರ್ಪಕವಾಗಿ ಸೇವೆ ಸಲ್ಲಿಸಬೇಕು ಎಂದರು.

ನರೇಗಾ ಯೋಜನೆಯ ಶಕ್ತಿ ಕುಗ್ಗಿಸಲಾಗಿದೆ. ಇದನ್ನು ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಈಗಾಗಲೇ ರಾಜ್ಯದಾದ್ಯಂತ ಹೋರಾಟ ರೂಪಿಸಲಾಗಿದೆ ಎಂದು ಹೇಳಿದರು.

ಹಿಂದೆ ತೋಟಗಾರಿಕೆ ಬೆಳೆ ಬೆಳೆಯಲು ಫಲಾನುಭವಿಗಳಿಗೆ ನರೇಗಾ ಯೋಜನೆಯಡಿ ಸಬ್ಸಿಡಿ ನೀಡಲಾಗುತ್ತಿತ್ತು. ಈಗ ಪ್ರೋತ್ಸಾಹಧನ ರದ್ದು ಮಾಡಿದ್ದಾರೆ. ಗ್ರಾಮ ಪಂಚಾಯಿತಿಯಲ್ಲಿ ಕ್ರಿಯಾಯೋಜನೆ ತಯಾರಿಸಲು ಅವಕಾಶವಿತ್ತು. ಇನ್ನು ಮುಂದೆ ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕೆಂಬ ನಿಯಮ ಜಾರಿಗೆ ಬರಲಾಗುತ್ತಿದೆ ಎಂದು ವಿವರಿಸಿದರು.

ಸ್ಥಳೀಯ ಸಂಸ್ಥೆಯ ಸದಸ್ಯರು, ರೈತರು, ಸಾರ್ವಜನಿಕರು ಚುನಾಯಿತ ಪ್ರತಿನಿಧಿಗಳಿಗೆ ತಿದ್ದುಪಡಿ ಯೋಜನೆ ಮಾರಕವಾಗಿದೆ ಎಂದರು.

ಕಳಸಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವರತ್ನ, ಉಪಾಧ್ಯಕ್ಷೆ ಶ್ವೇತಾ, ಸದಸ್ಯರಾದ ಮಂಜುಳಾ, ಕೆ.ಎಸ್ ಶ್ರೀಧರ್, ಕೆ.ಸಿ. ಚಂದ್ರಶೇಖರ್, ನಾಗೇಗೌಡ, ಡಿ.ಸಿ. ಯೋಗೀಶ್, ರಾಧಾ ಕೆ.ಎಚ್, ರುಕ್ಮಿಣಿ, ಗೌಸ್‌ಖಾನ್, ವೆಂಕಟೇಶ್, ದೇವರಾಜ್ ಕೆ.ಸಿ, ಗೌರಮ್ಮ, ಲಕ್ಷ್ಮಮ್ಮ ಉಪಸ್ಥಿತರಿದ್ದರು.

₹87 ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿಪೂಜೆ

ನಗರಸಭೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 6 17 18ರಲ್ಲಿ ಸುಮಾರು ₹87 ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕ ಎಚ್.ಡಿ.ತಮ್ಮಯ್ಯ ಭೂಮಿಪೂಜೆ ನೆರವೇಸಿದರು. ಬಳಿಕ ಮಾತನಾಡಿದ ಅವರು ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹25 ಕೋಟಿ ವಿಶೇಷ ಅನುದಾನವನ್ನು ನಗರಸಭೆಗೆ ಮಂಜೂರು ಮಾಡಿದರು. ಈ ಹಣದಲ್ಲಿ ನಗರದ ಹಲವೆಡೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ’ ಎಂದರು. ‌ ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿ ನಗರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಾಸಕ ಎಚ್.ಡಿ. ತಮ್ಮಯ್ಯ ಅವರು ₹87 ಲಕ್ಷವನ್ನು ನಗರದ ಮೂರು ವಾರ್ಡ್‌ಗಳಿಗೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಸಾಕಷ್ಟು ಅಭಿವೃದ್ಧಿಯಾಗಲಿದೆ’ ಎಂದು ಹೇಳಿದರು. ನಗರಸಭೆ ಉಪಾಧ್ಯಕ್ಷೆ ಲಲಿತಾ ರವಿನಾಯ್ಕ್ ಸದಸ್ಯ ಮುನೀರ್ ಅಹಮದ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್‌ ಅಹಮದ್ ಕೆಫೆಕ್ ಅಧ್ಯಕ್ಷ ಬಿ.ಎಚ್ ಹರೀಶ್ ನಗರಸಭೆ ಸದಸ್ಯ ಖಲಂದರ್ ಮಣಿಕಂಠ ಗುಣವತಿ ಮುಖಂಡ ಕೆ.ಮಹಮದ್ ಆಯುಕ್ತ ಬಿ.ಸಿ. ಬಸವರಾಜು ಇದ್ದರು.

‘ಅಭಿವೃದ್ಧಿ ಮೂಲಕ ಉತ್ತರ’

ಮೂಲಸೌಕರ್ಯಕ್ಕೆ ಅನುದಾನ ಒದಗಿಸಿ ವಿರೋಧ ಪಕ್ಷದ ಟೀಕೆಗಳಿಗೆ ತಕ್ಕ ಉತ್ತರ ನೀಡಲಾಗಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು. ಶಾಂತಿನಗರದ ಭಗತ್‌ಸಿಂಗ್ ಆಟೊ ನಿಲ್ದಾಣ ಹಾಗೂ ಇಂದಿರಾಗಾಂಧಿ ಬಡಾವಣೆ ಸಮೀಪ ₹1.5 ಕೋಟಿ ವೆಚ್ಚದಲ್ಲಿ ರಸ್ತೆ ಡಾಂಬರೀಕರಣಕ್ಕೆ ಬುಧವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಪ್ರತಿನಿತ್ಯ ಸಂಚರಿಸುವ ಸಾರ್ವಜನಿಕ ರಸ್ತೆ ಗುಣಮಟ್ಟದಿಂದ ಕೂಡಿರಬೇಕು. ಕಾಮಗಾರಿ ಕಳಪೆಯಾಗದಂತೆ ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.