ADVERTISEMENT

ವಿಧಾನ ಪರಿಷತ್ ಚುನಾವಣೆ: ಡಿ.ಸಿ ಕಾಲಿಗೆ ಬೀಳಲು ಹೋದ ಅಭ್ಯರ್ಥಿ!

ರಂಗೇರಿದ ಚುನಾವಣಾ ಕಣ– ಬಿಜೆಪಿ ಅಭ್ಯರ್ಥಿಯಾಗಿ ಎಂ.ಕೆ.ಪ್ರಾಣೇಶ್

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2021, 3:07 IST
Last Updated 21 ನವೆಂಬರ್ 2021, 3:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿಕ್ಕಮಗಳೂರು: ವಿಧಾನ ಪರಿಷತ್ (ಸ್ಥಳಿಯ ಸಂಸ್ಥೆ) ಚುನಾವಣೆಗೆ ಶನಿವಾರ ಒಬ್ಬರು ನಾಮಪತ್ರ ಸಲ್ಲಿಸಿದ್ದಾರೆ.

ಬಿ.ಟಿ.ಚಂದ್ರಶೇಖರ್ ಬೋವಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಈವರೆಗೆ ಒಟ್ಟು ಮೂರು ನಾಮಪತ್ರ ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದ್ದಾರೆ.

ಬಿಜೆಪಿ ಅಭ್ಯರ್ಥಿಯಾಗಿ ಎಂ.ಕೆ.ಪ್ರಾಣೇಶ್: ಜಿಲ್ಲೆಯ ವಿಧಾನಪರಿಷತ್ (ಸ್ಥಳಿಯ ಸಂಸ್ಥೆ) ಚುನಾವಣೆಗೆ ಬಿಜೆಪಿ ಯಿಂದ ಎಂ.ಕೆ.ಪ್ರಾಣೇಶ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ನವೆಂಬರ್ 23ರಂದು ಪ್ರಾಣೇಶ್ ಅವರು ಉಮೇದುವಾರಿಕೆ ಸಲ್ಲಿಸುವರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ADVERTISEMENT

ಡಿ.ಸಿ ಕಾಲಿಗೆ ಬೀಳಲು ಹೋದ ಅಭ್ಯರ್ಥಿ

ಚಿಕ್ಕಮಗಳೂರು: ವಿಧಾನ ಪರಿಷತ್ ಚುನಾವಣೆಗೆ ಶನಿವಾರ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಯೊಬ್ಬರು ಜಿಲ್ಲಾಧಿಕಾರಿ ಕೆ.ಎನ್.ರಮೇಶ್‌ ಅವರ ಕಾಲಿಗೆ ಬೀಳಲು ಹೋದ ಸನ್ನಿವೇಶ ನಡೆಯಿತು.

ಅಭ್ಯರ್ಥಿಯು ನಾಮಪತ್ರ ಸಲ್ಲಿಸಿದ ನಂತರ, ಮಾಧ್ಯಮಗಳ ಕ್ಯಾಮೆರಾ ಆಫ್‌ ಮಾಡಿಸಿ, ‘ನೀವು ಹಿರಿಯರು ನಮಗೆ ಆಶೀರ್ವಾದ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಕಾಲಿಗೆ ಎರಗಲು ಮುಂದಾದರು. ಜಿಲ್ಲಾಧಿಕಾರಿ ಮುಗುಳ್ನಗುತ್ತ ದೂರ ಸರಿದರು. ನಾಮಪತ್ರದಲ್ಲಿ ಕೆಲ ಲೋಪಗಳನ್ನು ಗಮನಿಸಿ, ಭಾವಚಿತ್ರ ಹಾಗೂ ದಾಖಲೆಗಳನ್ನು ಸಲ್ಲಿಸುವಂತೆ ಸಲಹೆ ನೀಡಿದರು.

ಅಭ್ಯರ್ಥಿಯು ಅಷ್ಟಕ್ಕೆ ಸುಮ್ಮನಾಗದೆ ‘ಗುರುಗಳೇ ಕಾಫಿಗೆ ಹೋಗೋಣ’ ಎಂದು ಕರೆದರು. ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ, ಇಲ್ಲವಾದಲ್ಲಿ ನಾವೇ ಕಾಫಿ ಕೊಡಿಸುತ್ತಿದ್ದೆವು’ ಎಂದು ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದರು.

ಅಭ್ಯರ್ಥಿಯ ಅಮಾಯಕತನ ನೋಡಿ, ಸ್ಥಳದಲ್ಲಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್.ರೂಪಾ ಹಾಗೂ ಸಿಬ್ಬಂದಿ ಮುಸಿ ಮುಸಿ ನಕ್ಕರು.

ನೀತಿ ಸಂಹಿತೆ ಉಲ್ಲಂಘನೆ: ಗಾಯತ್ರಿ

ಬಾಳೆಹೊನ್ನೂರು: ‘ಚುನಾವಣೆ ಘೋಷಣೆಯಾದ ನಂತರ ಜಿಲ್ಲೆಗೆ ಬಂದಿದ್ದ ಗ್ರಾಮೀಣಾಭಿವೃದ್ಧಿ ಸಚಿವರು ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನ ಹೆಚ್ಚಿಸುವುದಾಗಿ ಹೇಳಿಕೆ ನೀಡುವ ಮೂಲಕ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ಅವರ ವಿರುದ್ದ ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು’ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದೆ ಇದ್ದಂತಹ ವಿಧಾನ ಪರಿಷತ್‌ ಸದಸ್ಯ ಎಂ.ಕೆ.ಪ್ರಾಣೇಶ್ ಗ್ರಾಮ ಪಂಚಾಯಿತಿ ಸದಸ್ಯರ ಸಮಸ್ಯೆಗಳ ಬಗ್ಗೆ ವಿಧಾನ ಪರಿಷತ್‌ನಲ್ಲಿ ಧ್ವನಿ ಎತ್ತಿಲ್ಲ. ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರಿಗೆ ಬಿಜೆಪಿ ಮುಖಂಡರು ಆಸೆ, ಅಮಿಷ ಒಡ್ಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ವಿಧಾನ ಪರಿಷತ್‌ ಸದಸ್ಯೆಯಾಗಿ ಆಯ್ಕೆಯಾದರೆ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅನುದಾನ ತರುವಲ್ಲಿ ಶ್ರಮ ವಹಿಸುತ್ತೇನೆ. ಜಿಲ್ಲೆಯಲ್ಲಿ ಬಡವರಿಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಂದೂ ಸೂರು ನೀಡಲು ಆಗಿಲ್ಲ. ಮುಂದಿನ ದಿನಗಳಲ್ಲಿ ಗೋಮಾಳವನ್ನು ನಿವೇಶನ ರಹಿತರಿಗೆ ಹಂಚಲು ಕ್ರಮ ಕೈಗೊಳ್ಳುತ್ತೇನೆ’ ಎಂದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಅಂಶುಮಂತ್ ಮಾತನಾಡಿ, ‘ಗಾಂಧೀಜಿಯವರ ಸತ್ಯ ಅಹಿಂಸೆಯ ಹೋರಾಟಕ್ಕೆ ಜಯ ಸಿಕ್ಕಿದೆ. ಅವರ ಹೋರಾಟ ಇಂದಿಗೂ ಪ್ರಸ್ತುತ ಎಂಬುದನ್ನು ರೈತರ ಹೋರಾಟ ತೋರಿಸಿದೆ. ಬಿಜೆಪಿಯು ವ್ಯವಸ್ಥೆಯನ್ನು ಧಿಕ್ಕರಿಸಿ ನಡೆದಿತ್ತು. ಆದರೆ, ರೈತರ ಜನಾದೇಶಕ್ಕೆ ಜಯ ಸಿಕ್ಕಿದೆ. ಕಾಂಗ್ರೆಸ್ ಪಕ್ಷ ನಿರಂತರವಾಗಿ ರೈತರಿಗೆ ಬೆಂಬಲ ನೀಡಿದೆ. ಜಿಲ್ಲೆಯಲ್ಲಿ ಪಕ್ಷದ ಎಲ್ಲಾ ಮುಖಂಡರ ತೀರ್ಮಾನದ ಮೂಲಕ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ’ ಎಂದರು.

ಶಾಸಕ ಟಿ.ಡಿ.ರಾಜೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರ್‌ಬೈಲ್ ನಟರಾಜ್, ಕೆಪಿಸಿಸಿ ಸದಸ್ಯ ಎಂ.ಎಲ್ ಮೂರ್ತಿ, ಹೋಬಳಿ ಅಧ್ಯಕ್ಷ ಮಹಮ್ಮದ ಹನೀಫ್, ಬಿ.ಕೆ.ಮದುಸೂಧನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸವಿತಾ ರಮೇಶ್, ಮಹೇಶ್ ಆಚಾರ್, ಮಹಮ್ಮದ್ ಶಾಫಿ ಹಿರಿಯಣ್ಣ ಇದ್ದರು.

‘ಸ್ವಾಭಿಮಾನದ ಸಂಕೇತ’

ತರೀಕೆರೆ: ‘ವಿಧಾನ ಪರಿಷತ್ ಚುನಾವಣೆ ಕಾಂಗ್ರೆಸ್ ಜಿಲ್ಲಾ ಘಟಕದ ಅಳಿವು ಹಾಗೂ ಉಳಿವಿನ ವಿಷಯವಾಗಿದ್ದು, ಸ್ವಾಭಿಮಾನದ ಸಂಕೇತವಾಗಿದೆ’ ಎಂದು ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ ಹೇಳಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಅಭ್ಯರ್ಥಿಯಾಗಿರುವ ಪ್ರಾಣೇಶ್ ತಮ್ಮ ಅಧಿಕಾರದ ಅವಧಿಯಲ್ಲಿ ಒಮ್ಮೆಯೂ ಯಾವುದೇ ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿಲ್ಲ’ ಎಂದು ದೂರಿದರು.

‘ಕಾಂಗ್ರೆಸ್‌ ಪಕ್ಷವು ಅಹಿಂಸಾವಾದ ಹಾಗೂ ಗಾಂಧಿವಾದದ ಮೇಲೆ ನಂಬಿಕೆಯನ್ನು ಹೊಂದಿದೆ. ಬಿಜೆಪಿ ಸೇಡು ಹಾಗೂ ದ್ವೇಷದ ಆಧಾರದಲ್ಲಿ ಮತವನ್ನು ಕೇಳುತ್ತಿದೆ. ದೇಶದಲ್ಲಿ ಬೆಲೆ ಏರಿಕೆ, ನಿರುದ್ಯೋಗ ತಾಂಡವವಾಡುತ್ತಿದೆ. ಬಿಜೆಪಿ ಕೈಗೆ ದೇಶವನ್ನು ಆಳಲು ಕೊಟ್ಟರೆ ಮುಂದಿನ ದಿನಗಳಲ್ಲಿ ಸರ್ಕಾರಿ ಸ್ವಾಮ್ಯದ ಸ್ವತ್ತುಗಳ ಜೊತೆಯಲ್ಲಿ ಮೌಲ್ಯಗಳೂ ಮಾರಾಟವಾಗಲಿವೆ’ ಎಂದರು.

ಕಾಂಗ್ರೆಸ್‌ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಮಾತನಾಡಿ, ‘ಗ್ರಾಮ ಪಂಚಾಯತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿಗೆ ಗೌರವ ಧನ ಹೆಚ್ಚಳವಾಗಬೇಕು. ಈ ವೆಚ್ಚವನ್ನು ಸರ್ಕಾರವೇ ಭರಿಸುವಂತಾಗಬೇಕು. ಪ್ರತಿ ಪಂಚಾಯಿತಿಗೂ ಆರೋಗ್ಯ ಕಾರಣ ಗಳಿಗಾಗಿ ಪ್ರತ್ಯೇಕ ವಾಹನ ವ್ಯವಸ್ಥೆ ಇರಬೇಕು ಎಂಬುದು ತಮ್ಮ ನಿಲುವಾಗಿದೆ. ಬಿಜೆಪಿ ಅಭ್ಯರ್ಥಿಯಾಗಿ ರುವ ಪ್ರಾಣೇಶ್ ತಮ್ಮ ಅವಧಿಯಲ್ಲಿ ಅನುದಾನವನ್ನು ಸಮರ್ಪಕವಾಗಿ ಬಳಸಿಲ್ಲ’ ಎಂದು ದೂರಿದರು.

ಮಾಜಿ ಶಾಸಕರಾದ ಎಸ್.ಎಂ.ನಾಗರಾಜ್, ಟಿ.ಎಚ್.ಶಿವಶಂಕರಪ್ಪ, ಜಿ.ಎಚ್.ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರಪ್ಪ, ಮುಖಂಡ ಅಜ್ಜಂಪುರ ಕೃಷ್ಣಮೂರ್ತಿ, ಪರಮೇಶ್, ಸಮಿಉಲ್ಲಾ ಶರೀಫ್, ಕೆ.ಪಿ.ಕುಮಾರ್, ಉಮ್ಮರ್ ಫಾರೂಕ್, ಪುರಸಭೆ ಅಧ್ಯಕ್ಷ ರಂಗನಾಥ, ಉಪಾಧ್ಯಕ್ಷೆ ಯಶೋದಮ್ಮ, ಪುರಸಭೆ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.