ADVERTISEMENT

ಜಿಲ್ಲೆಯಾದ್ಯಂತ ಶ್ರದ್ಧಾ ಭಕ್ತಿಯಿಂದ ಮೇರಿ ಹಬ್ಬ

ಕೋವಿಡ್–19 ನಿಮಿತ್ತ ಚರ್ಚ್‌ಗಳಲ್ಲಿ ತಂಡೋಪ ತಂಡವಾಗಿ ಪ್ರಾರ್ಥನೆಗೆ ಅವಕಾಶ– ಸರಳ ಆಚರಣೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 3:03 IST
Last Updated 9 ಸೆಪ್ಟೆಂಬರ್ 2020, 3:03 IST
ಚಿಕ್ಕಮಗಳೂರಿನ ಪ್ರಧಾನ ಚರ್ಚ್‌ನಲ್ಲಿ ಮೇರಿ ಮಾತೆ ಮೂರ್ತಿಗೆ ಭಕ್ತರು ಪುಷ್ಪ ಸಮರ್ಪಿಸಿದರು.
ಚಿಕ್ಕಮಗಳೂರಿನ ಪ್ರಧಾನ ಚರ್ಚ್‌ನಲ್ಲಿ ಮೇರಿ ಮಾತೆ ಮೂರ್ತಿಗೆ ಭಕ್ತರು ಪುಷ್ಪ ಸಮರ್ಪಿಸಿದರು.   

ಚಿಕ್ಕಮಗಳೂರು: ನಗರದಲ್ಲಿ ಕ್ಯಾಥೋಲಿಕ್ ಕ್ರಿಶ್ಚಿಯನ್ನರು ಮಂಗಳವಾರ ಶ್ರದ್ಧಾ ಭಕ್ತಿಯಿಂದ ಮೇರಿ ಹಬ್ಬ ಆಚರಿಸಿದರು.

ನಗರದ ಪ್ರಭು ರಸ್ತೆಯ ಕ್ರಿಶ್ಚಿಯನ್ನರ ಪ್ರಧಾನ ದೇಗುಲದಲ್ಲಿ ಪಾದ್ರಿಗಳಾದ ಅಂಥೋನಿ ಪಿಂಟೊ, ಟೋನಿ ವೇಲಾಂಗನಿ ನೇತೃತ್ವದಲ್ಲಿ ಬೆಳಿಗ್ಗೆ 6ರಿಂದ 11ಗಂಟೆವರೆಗೆ ಪ್ರಾರ್ಥನೆ ಕೈಂಕರ್ಯ ನಡೆಯಿತು. ಭತ್ತ, ರಾಗಿ, ಜೋಳ, ಸಹಿತ ಬಗೆಬಗೆಯ ದವಸ ಧಾನ್ಯಗಳ ತೆನೆಗಳನ್ನು ಇಟ್ಟು ಪೂಜಿಸಿ, ಭಕ್ತರಿಗೆ ವಿತರಿಸಲಾಯಿತು. .

ಹಾಸನ– ಚಿಕ್ಕಮಗಳೂರು ಕ್ಯಾಥೋಲಿಕ್ ಪಂಗಡದ ಧರ್ಮಾಧ್ಯಕ್ಷ ಅಂಥೋನಿ ಪಿಂಟೊ ‘ಪ್ರಜಾವಾಣಿ’ ಜತೆ ಮಾತನಾಡಿ, ‘ಸೆಪ್ಟೆಂಬರ್ 8ರಂದು ಏಸು ಕ್ರಿಸ್ತನ ತಾಯಿ ಮೇರಿ ಜನ್ಮ ದಿನವಾಗಿದೆ. ಕೋವಿಡ್‌–19ನಿಂದಾಗಿ ಈ ಬಾರಿ ಸರಳವಾಗಿ ಹಬ್ಬ ಆಚರಿಸಲಾಗುತ್ತಿದೆ. ಪ್ರತಿ ವರ್ಷ ಈ ಹಬ್ಬದಲ್ಲಿ ಬೆಳಿಗ್ಗೆ ಒಂದು ಪೂಜೆ ಮಾಡಲಾಗುತ್ತಿತ್ತು. ಆದರೆ ಸಾಮಾಜಿಕ ಅಂತರ ಕಾಪಾಡುವ ನಿಮಿತ್ತ ಮೂರು ತಂಡಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಭಕ್ತರಿಗೆ ಅವಕಾಶ ನೀಡಲಾಯಿತು’ ಎಂದು ತಿಳಿಸಿದರು.

ADVERTISEMENT

‘ದೇವರಿಗೆ ವಿಧೇಯರಾಗಿರಬೇಕು. ಮೇರಿ ಮಾತೆಯ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸರಳ ಜೀವನ ನಡೆಸಬೇಕು ಎನ್ನುವುದು ಹಬ್ಬದ ಸಂದೇಶವಾಗಿದೆ’ ಎಂದು ಹೇಳಿದರು.

ವಿಜಯಪುರ ನಿವಾಸಿ ಸಿಲ್ವರ್‌ಸ್ಟರ್ ಮಸ್ಕೆರೇನಾಸ್ ‘ಪ್ರಜಾವಾಣಿ’ ಜತೆ ಮಾತನಾಡಿ, ‘ಮೇರಿ ಹಬ್ಬ ಮಹಿಳೆಯರ ಹಬ್ಬವಾಗಿದೆ. ಒಂಭತ್ತು ದಿನಗಳು ಮನೆಯಲ್ಲಿ ಮೇರಿ ಮಾತೆ ಮೂರ್ತಿ ಇಟ್ಟು ಪೂಜಿಸುತ್ತೇವೆ. ಹಬ್ಬದಿನದಂದು ಕುಟುಂಬಸ್ಥರೆಲ್ಲ ಬೆಳಿಗ್ಗೆ ಚರ್ಚ್‌ಗೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತೇವೆ. ಚರ್ಚ್‌ನಲ್ಲಿ ನೀಡುವ ತೆನೆಗಳನ್ನು ಮನೆಗೆ ತಂದು, ತೆಂಗಿನ ಕಾಯಿಯ ಹಾಲಿನ ಜತೆ ಸೇರಿಸಿ ಮನೆಯೆ ಹಿರಿಯರೊಬ್ಬರಿಗೆ ನೀಡುತ್ತೇವೆ. ಅವರು ಪ್ರಾರ್ಥನೆ ಸಲ್ಲಿಸಿ, ತೆಂಗಿನ ಕಾಯಿ ಹಾಲು ಹಾಗೂ ತೆನೆ ಮಿಶ್ರಣವನ್ನು ಕುಟುಂಬದ ಸದಸ್ಯರೆಲ್ಲರ ಬಾಯಿಗೆ ನೀಡುತ್ತಾರೆ’ ಎಂದರು.

‘ಸಸ್ಯಾಹಾರ ಮೇರಿ ಹಬ್ಬದ ವಿಶೇಷ. ಶ್ಯಾವಿಗೆ, ಹೆಸರು ಬೇಳೆ ಪಾಯಸ ಸಹಿತ ಏಳೆಂಟು ಪಲ್ಯ, ತರಹೇವಾರಿ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಸಂಜೆ ಮನೆಮಂದಿಯೆಲ್ಲ ನೆಲದ ಮೇಲೆ ವೃತ್ತಾಕಾರದಲ್ಲಿ ಕುಳಿತು ಬಾಳೆ ಎಳೆಯಲ್ಲಿ ಆಹಾರ ಸೇವಿಸುತ್ತೇವೆ’ ಎಂದು ಅವರು ಹೇಳಿದರು.

ನರಸಿಂಹರಾಜಪುರ: ಇಲ್ಲಿನ ಲಿಟ್ಟಲ್ ಫ್ಲವರ್ ಚರ್ಚ್‌ನಲ್ಲಿ ಮೇರಿ ಮಾತೆಯ ಹಬ್ಬವನ್ನು ಮಂಗಳವಾರ ಸರಳವಾಗಿ ಆಚರಿಸಲಾಯಿತು.

ಕಳೆದ 1ರಿಂದ ಪ್ರತಿನಿತ್ಯ ಮೇರಿ ಮಾತೆಯ ವಿಗ್ರಹ ವಿಶೇಷ ಅಲಂಕಾರ ಮಾಡಲಾಗಿತ್ತು. ಮಂಗಳವಾರ ಬೆಳಿಗ್ಗೆಯಿಂದ ಸೀಮಿತ ಭಕ್ತರಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.