ADVERTISEMENT

‘ಚುನಾವಣಾ ಆಯೋಗದಿಂದ ಪ್ರಜಾಪ್ರಭುತ್ವ ಅವಸಾನದತ್ತ’

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 7:23 IST
Last Updated 17 ಆಗಸ್ಟ್ 2025, 7:23 IST
ಎಂ.ಪಿ. ಕುಮಾರಸ್ವಾಮಿ
ಎಂ.ಪಿ. ಕುಮಾರಸ್ವಾಮಿ   

‌‌ಮೂಡಿಗೆರೆ: ‘ಪಾರದರ್ಶಕವಾಗಿ ನಡೆಯಬೇಕಾಗಿರುವ ಚುನಾವಣೆಗಳು ಅಕ್ರಮವಾಗಿ ನಡೆಯುತ್ತಿವೆ. ದೇಶದಲ್ಲಿ ಪ್ರಜಾಪ್ರಭುತ್ವ ಅವಸಾನದತ್ತ ಸಾಗುತ್ತಿದೆ ಎಂಬ ಭಯ ದೇಶದ ಜನರಲ್ಲಿ ಕಾಡಲಾರಂಭಿಸಿದೆ’ ಎಂದು ಕಾಂಗ್ರೆಸ್ ಮುಖಂಡ ಎಂ.ಪಿ.ಕುಮಾರಸ್ವಾಮಿ ಹೇಳಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ಸಂಸತ್ ಚುನಾವಣೆಯಲ್ಲಿ ಬೆಂಗಳೂರಿನ ಮಹದೇವರಪುರ ವಿಧಾನಸಭಾ ಕ್ಷೇತ್ರದಲ್ಲಿ ವಿಳಾಸವಿಲ್ಲದ ಒಂದೇ ಕುಟುಂಬದ 50 ಮಂದಿಗೆ ಮತದಾನದ ಗುರುತಿನ ಚೀಟಿ ನೀಡಿರುವುದು ತಿಳಿದು ಬಂದಿತ್ತು. ಬಿಹಾರದಲ್ಲಿ 3 ಲಕ್ಷ ಮತದಾರರಿಗೆ ವಿಳಾಸವೇ ಇಲ್ಲ. ಅಲ್ಲದೆ, 65 ಲಕ್ಷ ಮತದಾರರನ್ನು ಕೈ ಬಿಡಲು ಚಿಂತನೆ ನಡೆಸಲಾಗಿದೆ. ಮಧ್ಯಪ್ರದೇಶದ ಸಮಾರು 100 ಪ್ರದೇಶಗಳಲ್ಲಿ 2,200 ಮತದಾರರಿಗೆ ವಿಳಾಸವಿಲ್ಲ’ ಎಂದರು.

‘ವಾರಾಣಸಿಯ ಕುಟುಂಬವೊಂದರ ಹಿರಿಯರಿಗೆ 28 ವರ್ಷ, ಕಿರಿಯರಿಗೆ 72 ವರ್ಷ, ತಂದೆಗೆ 57 ವರ್ಷ ಎಂದು ನಮೂದಿಸಲಾಗಿದೆ. ಈ ಬಗ್ಗೆ ಆರೋಪ ಮಾಡಿದ ನಮ್ಮ ನಾಯಕ ರಾಹುಲ್‌ಗಾಂಧಿ ಅವರಿಂದ ಚುನಾವಣಾ ಆಯೋಗ ಅಫಿಡವಿಟ್ ಕೇಳುತ್ತಿದೆ. ಆದರೆ, 1960 ಸೆಕ್ಷನ್ 20/ಪಿ ಪ್ರಕಾರ ಚುನಾವಣೆ ನಡೆದ ಬಳಿಕ ಅಫಿಡವಿಟ್ ನೀಡಲಾಗದು. ಆದರೆ, ರಾಹುಲ್ ಗಾಂಧಿ ಅವರು ಅಫಿಡವಿಟ್ ನೀಡುತ್ತಿಲ್ಲ ಎಂದು ಚುನಾವಣಾ ಆಯೋಗ ದೂರುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘ಚುನಾವಣಾ ಆಯೋಗವು ಅಕ್ರಮಕ್ಕೆ ಒತ್ತು ನೀಡುತ್ತಿರುವುದು ಬಹಿರಂಗವಾಗುತ್ತಿದೆ. ಚುನಾವಣಾ ಆಯೋಗದ ನಿರ್ಲಕ್ಷ್ಯದ ಬಗ್ಗೆ ಆಯೋಗದ ನಿವೃತ್ತ ಆಯುಕ್ತ ಒ.ಪಿ.ರಾವತ್ ದೂರಿದ್ದಾರೆ. ಇಷ್ಟೆಲ್ಲ ಪ್ರಕರಣ ಹೊರ ಬಂದ ಮೇಲೆ ಪ್ರಜಾಪ್ರಭುತ್ವ ದುರ್ಬಲವಾಗುತ್ತಿದ್ದು, ಸಂವಿಧಾನಕ್ಕೆ ಉಳಿಗಾಲವಿಲ್ಲದಂತಾಗುತ್ತದೆ. ಚುನಾವಣಾ ಆಯೋಗ ಯಾರ ಪರವಾಗಿ ಕೆಲಸ ಮಾಡುತ್ತಿದೆ ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಯಬೇಕು’ ಎಂದು ಒತ್ತಾಯಿಸಿದರು.

‘ಇವಿಎಂ ಕೂಡ ಸಮರ್ಪಕವಾಗಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಹರಿಯಾಣದ ಪಾಣಿಪತ್ ಜಿಲ್ಲೆಯ ಪುವನ್ ಗ್ರಾ.ಪಂ. ಚುನಾವಣೆಯಲ್ಲಿ ಮೋಹಿತ್ ವಿರುದ್ಧ ಕುಲ್‌ದೀಪ್‌ಸಿಂಗ್ ಗೆಲುವು ಸಾಧಿಸಿದ್ದ ಫಲಿತಾಂಶ ಬಂದಿತ್ತು. ಈ ಬಗ್ಗೆ ಮೋಹಿತ್ ಅವರು ಇವಿಎಂ ಬಗ್ಗೆ ಸಂದೇಹ ವ್ಯಕ್ತಪಡಿಸಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ, ಮರು ಎಣಿಕೆ ಮಾಡಿದಾಗ ಮೋಹಿತ್ ಗೆಲುವು ಸಾಧಿಸಿದ್ದರು. ಅಸ್ಸಾಂನಲ್ಲಿ ಅಭ್ಯರ್ಥಿಯೊಬ್ಬರ ಕಾರಿನಲ್ಲಿ ಇವಿಎಂ ಸಿಕ್ಕಿತ್ತು. ಮಹಾರಾಷ್ಟ್ರದ ಪುಣೆಯಲ್ಲಿ ಇವಿಎಂ ಕಂಟ್ರೋಲರನ್ನು ಕದ್ದಿರುವ ಸುದ್ದಿಯಾಗಿದೆ. ಈ ಅಂಶಗಳನ್ನು ಗಮನಿಸಿದಾಗ ಚುನಾವಣಾ ಆಯೋಗದ ಮೇಲೆ ಸಂಶಯ ಬರುತ್ತದೆ’ ಎಂದು ಹೇಳಿದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.