
ಮೂಡಿಗೆರೆ: ಸಾಧಕರಾದ ಮೇಲೆ ತಾವು ಕಲಿತ ಶಿಕ್ಷಣ ಸಂಸ್ಥೆಗಳನ್ನು ಮರೆಯಬಾರದು ಎಂದು ಧಾರ್ಮಿಕ ಉಪನ್ಯಾಸಕ ನವಾಜ್ ಮನ್ನಾಣಿ ಪಣವೂರು ಹೇಳಿದರು.
ತಾಲ್ಲೂಕಿನ ಚಕ್ಕಮಕ್ಕಿಯಲ್ಲಿರುವ ದಾರುಲ್ ಬಯಾನ್ ಖಲಂದರಿಯ ಶಿಕ್ಷಣ ಸಂಸ್ಥೆಯ ರಜತ ಮಹೋತ್ಸವದಲ್ಲಿ ಅವರು ಮಾತನಾಡಿದರು.
ಉನ್ನತ ಶಿಕ್ಷಣ ಹಾಗೂ ಸಾಂಸ್ಕೃತಿಕ ಬೆಳವಣಿಗೆಯಿಂದ ಶಿಕ್ಷಣ ಸಂಸ್ಥೆಗಳು ಮೇಲ್ಮಟ್ಟಕ್ಕೆ ಸಾಗಲು ಹಾದಿಯಾಗುತ್ತದೆ. ಶಿಕ್ಷಣ ನಮ್ಮ ಬದುಕಿಗೆ ಮುಖ್ಯ ಪಾತ್ರ ವಹಿಸುತ್ತದೆ. ನಾವು ಕಲಿತ ವಿದ್ಯಾ ಸಂಸ್ಥೆಗಳನ್ನು ಮರೆಯಬಾರದು. ಶಿಕ್ಷಣವು ಮಾನವನ ವ್ಯಕ್ತಿತ್ವ ವಿಕಸನಕ್ಕೆ ಮುಖ್ಯ ವಾಹಿನಿಯಾಗಿ ಕೆಲಸ ಮಾಡುತ್ತದೆ. ಶಿಕ್ಷಣವನ್ನು ಸಮರ್ಪಕವಾಗಿ ಬಳಸಿಕೊಂಡವರು ಬದುಕಿನಲ್ಲಿ ಎಂದಿಗೂ ಎದೆಗುಂದುವುದಿಲ್ಲ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಚುಂಗತರ ಉಸ್ತಾದ್ ಮಾತನಾಡಿ, ‘ವಿದ್ಯಾರ್ಥಿಗಳ ಏಳಿಗೆಗೆ, ಪಾಲಕರ ವಿಶ್ವಾಸಕ್ಕೆ ಹಾಗೂ ಶಿಕ್ಷಕರ ತ್ಯಾಗಕ್ಕೆ ಸಾಕ್ಷಿಯಾಗಿದೆ. ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಏಳಿಗೆಗೆ ದುಡಿದಾಗ ಮಾತ್ರ ಸಮಾಜಕ್ಕೆ ಉತ್ತಮ ವ್ಯಕ್ತಿಗಳನ್ನು ಕೊಡುಗೆ ನೀಡಲು ಸಾಧ್ಯವಾಗುತ್ತದೆ’ ಎಂದರು.
ಧಾರ್ಮಿಕ ಗುರು ಇರ್ಷಾದ್ ಧಾರೀಮಿ ಮಿತ್ತಬೈಲ್ ಮಾತನಾಡಿ, ಶಿಕ್ಷಣವು ಬರಿ ಅಕ್ಷರ ಕಲಿಯುವ ಗುರಿಯಲ್ಲ. ಶಿಕ್ಷಣವು ಮಾನವೀಯತೆ, ಶಿಸ್ತು ಹಾಗೂ ಜವಾಬ್ದಾರಿತನವನ್ನು ರೂಪಿಸುವ ಮಹಾ ಪ್ರಕ್ರಿಯೆಯಾಗಿದೆ. ಸಮುದಾಯದ ಬೆಳವಣಿಗೆಗೆ ದೀಪದಂತೆ ದಾರಿ ತೋರಿಸುವುದು ಸಂಸ್ಥೆಯ ನೈಜ ಶಕ್ತಿಯಾಗಿದೆ ಎಂದರು.
ಟ್ರಸ್ಟಿನ ಅಧ್ಯಕ್ಷ ನಾಸೀರ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಝೈದ್ ಫೈಝಿ ಖಲಂಧರಿ, ಸಿನಾನ್ ಉಸ್ತಾದ್, ಮೊಯ್ದು ಫೈಝಿ ಕೊಡಗು, ಶೈಕುನಾ ಉಸ್ಮಾನ್ ಫೈಝಿ ತೊಡಾರ್, ಸಲೀಂ ಅರ್ಷಾದೀ, ಸ್ಥಳೀಯ ಮುಖಂಡರಾದ ಸಿ.ಕೆ.ಇಬ್ರಾಹಿಂ, ಅಕ್ರಂ ಹಾಜಿ, ನಜೀರ್, ಉಮ್ಮರ್, ಎ.ಸಿ.ಅಯೂಬ್, ಆಸೀಫ್, ಮಜೀದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.