ಮೂಡಿಗೆರೆ: ತಾಲ್ಲೂಕಿನಾದ್ಯಂತ ಭಾನುವಾರ ಅಬ್ಬರಿಸಿದ ಮಳೆಗೆ ಜನಜೀವನ ಅಕ್ಷರಶಃ ತತ್ತರಿಸಿ ಹೋಯಿತು.
ಮಳೆಯಿಂದಾಗಿ ಹೇಮಾವತಿ ಸೇರಿದಂತೆ ಜಪಾವತಿ, ಊರುಬಗೆ ಹಳ್ಳ, ಚಿಕ್ಕಳ್ಳ, ದೊಡ್ಡಳ್ಳ, ಸುಣ್ಣದ ಹೊಳೆಯಲ್ಲಿ ನೀರಿನ ಮಟ್ಟ ಗಣನೀಯವಾಗಿ ಹೆಚ್ಚಳವಾಗಿದೆ. ಹೇಮಾವತಿ ನದಿಯು ಉಗ್ಗೆಹಳ್ಳಿ ಗ್ರಾಮದ ಬಳಿ ಗದ್ದೆ ಬಯಲಿನ ಮಟ್ಟಕ್ಕೆ ಏರಿಕೆಯಾಗಿದ್ದು, ಮಳೆ ಮುಂದುವರೆದರೆ ಗ್ರಾಮದ ಕಾಲೊನಿ ಬಳಿ ನಿರ್ಮಿಸಿರುವ ತಡೆಗೋಡೆಯ ಬಳಿಗೇ ವ್ಯಾಪಿಸುವ ಆತಂಕ ಎದುರಾಗಿದೆ. ಬಂಕೇನಹಳ್ಳಿ, ಮುಗ್ರಹಳ್ಳಿ, ಕಿತ್ತಲೆಗಂಡಿ, ಬೆಟ್ಟದಮನೆ ಗ್ರಾಮಗಳಲ್ಲಿರುವ ಹೇಮಾವತಿ ನದಿ ಸೇತುವೆ ಬಳಿ ನದಿಯು ಬೋರ್ಗೆರೆದು ಹರಿಯುತ್ತಿದೆ.
ಬಣಕಲ್ ಸಮೀಪದ ರಾಮಣ್ಣನ ಗಂಡಿಯಲ್ಲಿ ಒಂದೇ ಸ್ಥಳದಲ್ಲಿ ಎರಡು ಕಾರುಗಳು ನಿಯಂತ್ರಣ ತಪ್ಪಿ ಹೇಮಾವತಿ ನದಿಗೆ ಉರುಳಿದ್ದು, ಅದೃಷ್ಟವಶಾತ್ ಯಾವುದೇ ಜೀವಾಪಾಯ ಉಂಟಾಗಿಲ್ಲ. ಅಲ್ಲದೇ ಇದೇ ರಸ್ತೆಯಲ್ಲಿ ಅರ್ಧ ಕಿ.ಮೀ. ದೂರದಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಮತ್ತೊಂದು ಕಾರು ಹೆದ್ದಾರಿಯ ರಸ್ತೆ ಪಕ್ಕಕ್ಕೆ ಉರುಳಿದ್ದು, ಮಳೆಯಿಂದ ಒಂದುವರೆ ಕಿ.ಮೀ ದೂರದಲ್ಲಿ ಮೂರು ಕಾರುಗಳು ಅಪಘಾತಕ್ಕೀತಡಾದಂತಾಗಿದೆ.
ಘಾಟಿಯಲ್ಲಿ ಮಂಜು ಮುಸುಕಿದ ವಾತಾವರಣವಿದ್ದು, ಹೆದ್ದಾರಿಯಲ್ಲಿ ವಾಹನ ಸವಾರರು ಪರದಾಡುವಂತಾಗಿತ್ತು. ಸಂಜೆ ಬಳಿಕ ಹತ್ತಿರದ ವಾಹನಗಳು ಕಾಣದಷ್ಟು ದಟ್ಟವಾಗಿ ಮಂಜು ಮುಸುಕಿದೆ.
ಹೆದ್ದಾರಿಯ ಕಸ್ಕೇಬೈಲ್ ಬಳಿ ನಸುಕಿನಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದರಿಂದ ಬೇಲೂರು–ಚೀಕನಹಳ್ಳಿ–ಮೂಡಿಗೆರೆ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದ್ದು, ಬೆಳಿಗ್ಗೆ ಸ್ಥಳೀಯರು ಮರವನ್ನು ತೆರವುಗೊಳಿಸುವವರೆಗೂ ವಾಹನಗಳು ಹೆದ್ದಾರಿಯಲ್ಲಿಯೇ ಸಾಲುಗಟ್ಟಿ ನಿಂತಿದ್ದವು.
ಮಳೆಯಿಂದ ಮನೆ ಹಾನಿ ಮುಂದುವರೆದಿದ್ದು, ಬಣಕಲ್ ಗ್ರಾಮದ ಸಬ್ಲಿ ಸರ್ಕಾರಿ ಶಾಲೆಯ ರಂಗಮಂದಿರದ ಚಾವಣಿ ಕೊಚ್ಚಿ ಹೋಗಿದೆ. ಹೆಸ್ಗಲ್ ಗ್ರಾ.ಪಂ. ವ್ಯಾಪ್ತಿಯ ರಾಮೇಶ್ವರ ನಗರದಲ್ಲಿ ಗಂಗಮ್ಮ ಎಂಬುವವರ ಮನೆ ಕುಸಿದಿದ್ದು, ಮನೆಯಲ್ಲಿದ್ದ ವಸ್ತುಗಳು ಹಾನಿಯಾಗಿವೆ. ಇದೇ ಗ್ರಾಮದ ಶಕ್ತಿನಗರ ಕಮಲ ಎಂಬುವವರ ಮನೆಯ ಶೀಟುಗಳು ಗಾಳಿಗೆ ಹಾರಿ ಹೋಗಿ ನಷ್ಟ ಉಂಟಾಗಿದೆ. ಮಾಕೋನಹಳ್ಳಿ ಕಲ್ಲುಹೊಲ ಬಾಬುಕುಂಜಿರ ಎಂಬುವರ ಮನೆಯು ಕುಸಿದಿದೆ. ಕನ್ನಾಪುರದ ಹೊಂಕದಳ್ಳಿ ಜಾನಕಿ ಎಂಬುವರ ಮನೆ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.