ಮೂಡಿಗೆರೆ: ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಮಳೆಯು ಶನಿವಾರವೂ ಮುಂದುವರೆದಿದ್ದು, ಅಪಾರ ಪ್ರಮಾಣದ ಹಾನಿ ಉಂಟಾಗಿದೆ.
ಶುಕ್ರವಾರ ತಡರಾತ್ರಿಯಿಂದಲೂ ಆರ್ಭಟಿಸಿದ ಮಳೆಯು, ನದಿಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಹೆಚ್ಚಳವಾಗುವಂತೆ ಮಾಡಿತ್ತು. ಜೊತೆಗೆ ತಾಲ್ಲೂಕಿನಾದ್ಯಂತ ಅಪಾರ ಪ್ರಮಾಣದ ಹಾನಿಯುಂಟಾಯಿತು.
ಬಣಕಲ್ ಸಮೀಪದ ಚಕ್ಕಮಕ್ಕಿ ಗ್ರಾಮದಲ್ಲಿ ಮಹಮ್ಮದ್ ಎಂಬುವವರ ಕುರಿಶೆಡ್ ಕುಸಿದಿದ್ದರಿಂದ, ಅದರ ಒಳಗಿದ್ದ ಒಂದು ಕುರಿ ಸಾವನ್ನಪ್ಪಿದ್ದು, ಹಲವು ಕುರಿಗಳಿಗೆ ಗಂಭೀರವಾಗಿ ಗಾಯಗಳಾಗಿವೆ.
ತ್ರಿಪುರ ಗ್ರಾ.ಪಂ. ವ್ಯಾಪ್ತಿಯ ಜಾರಗಲ್ ಗ್ರಾಮದ ಜಯಂತಿ ಅವರ ಮನೆಯ ಕಾಂಪೌಂಡ್ ಸಂಪೂರ್ಣವಾಗಿ ಕುಸಿದಿದ್ದು, ಮನೆಯು ಕುಸಿತವಾಗುವ ಭೀತಿ ಎದುರಾಗಿದೆ. ಅದೇ ಗ್ರಾಮದ ಸುಶೀಲಾ ಎಂಬುವರ ಮನೆ ಮೇಲೆ ಮರ ಬಿದ್ದು, ಮನೆ ಹಾಗೂ ಶೆಡ್‌ನಲ್ಲಿ ನಿಲ್ಲಿಸಿದ್ದ ಕಾರಿಗೆ ಹಾನಿಯಾಗಿ ನಷ್ಟ ಉಂಟಾಗಿದೆ.
ಮಳೆಯೊಂದಿಗೆ ಗಾಳಿಯೂ ಹೆಚ್ಚಾಗಿದ್ದರಿಂದ ಹಾನಿಯ ಪ್ರಮಾಣ ಹೆಚ್ಚಾಗಿದ್ದು, 60ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿರುವುದರಿಂದ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಪೂರೈಕೆ ಸಂಪೂರ್ಣ ಸ್ಥಗಿತವಾಗಿದೆ. ಮೆಸ್ಕಾಂ ಸಿಬ್ಬಂದಿ ಹಗಲಿರುಳು ಕಾರ್ಯನಿರ್ವಹಿಸುತ್ತಿದ್ದು, ಅರಣ್ಯ ಪ್ರದೇಶದಲ್ಲಿ ಕಂಬಗಳು ಬಿದ್ದಿರುವುದರಿಂದ ವಿದ್ಯುತ್ ಪೂರೈಕೆ ಸವಾಲಾಗಿದೆ. ನೀರುಗಂಡಿ ಗ್ರಾಮದ ಬಳಿ ಹೆದ್ದಾರಿ ಬದಿಯಲ್ಲಿದ್ದ ವಿದ್ಯುತ್ ಕಂಬಗಳು ಧರೆಗುರುಳಿದ್ದರಿಂದ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡ್ಡಿಯಾಗಿತ್ತು.
ತರುವೆ ಗ್ರಾಮ ಪಂಚಾಯಿತಿ ಹಳೆ ಕಚೇರಿಯ ಚಾವಣಿಗೆ ಹಾನಿಯಾಗಿದ್ದು, ಬಿನ್ನಾಡಿ ಗ್ರಾಮದ ರಾಧಾ ದಿನೇಶ್ ಎಂಬುವವರ ಮನೆಗೂ ಹಾನಿಯಾಗಿದೆ. ಗೋಣಿಬೀಡು ಗ್ರಾ.ಪಂ. ವ್ಯಾಪ್ತಿಯ ಪಡಿಯಾ ಕಾಲೊನಿಯಲ್ಲಿ ಮರ ಬಿದಿದ್ದು, ರಾಜು ಎಂಬುವರ ಮನೆಗೂ ಹಾನಿಯಾಗಿದೆ.
ಮಳೆಯಿಂದ ಪಟ್ಟಣದಲ್ಲಿ ಆರ್ಥಿಕ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತವಾಗಿದ್ದವು. ಕಾಫಿ ತೋಟಗಳಲ್ಲಿ ಕೃಷಿ ಚಟುವಟಿಕೆಗಳು ಸ್ಥಬ್ಧವಾಗಿದ್ದು, ಬಹುತೇಕ ತೋಟಗಳಲ್ಲಿ ಕಾರ್ಮಿಕರಿಗೆ ರಜೆ ನೀಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.