ADVERTISEMENT

ಮೂಡಿಗೆರೆ: ವಕ್ಫ್ ಮಸೂದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2025, 12:11 IST
Last Updated 24 ಮಾರ್ಚ್ 2025, 12:11 IST
ಮೂಡಿಗೆರೆ ಪಟ್ಟಣದಲ್ಲಿ ವಕ್ಫ್ ಸಂರಕ್ಷಣಾ ಸಮಿತಿ ವತಿಯಿಂದ ಸೋಮವಾರ ವಕ್ಫ್ ಮಸೂದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ನಡೆಯಿತು
ಮೂಡಿಗೆರೆ ಪಟ್ಟಣದಲ್ಲಿ ವಕ್ಫ್ ಸಂರಕ್ಷಣಾ ಸಮಿತಿ ವತಿಯಿಂದ ಸೋಮವಾರ ವಕ್ಫ್ ಮಸೂದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ನಡೆಯಿತು   

ಮೂಡಿಗೆರೆ: ‘ಕೇಂದ್ರ ಸರ್ಕಾರದಿಂದ ದೇಶದ ಮುಸ್ಲಿಂ ಸಮುದಾಯಕ್ಕೆ ದ್ರೋಹ ಮಾಡಲಾಗುತ್ತಿದೆ’ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಘಟಕದ ಕಾರ್ಯದರ್ಶಿ ಝಾಕೀರ್‌ ಹುಸೇನ್‌ ಆರೋಪಿಸಿದರು.

ಪಟ್ಟಣದ ಲಯನ್ಸ್‌ ವೃತ್ತದಲ್ಲಿ ಸೋಮವಾರ ವಕ್ಫ್‌ ಸಂರಕ್ಷಣಾ ಸಮಿತಿ ವತಿಯಿಂದ,  ವಕ್ಫ್ ಮಸೂದೆ ತಿದ್ದುಪಡಿ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ  ಅವರು ಮಾತನಾಡಿದರು.

‘ಕೇಂದ್ರ ಸರ್ಕಾರವು ವಕ್ಫ್ ಮಸೂದೆ ತಿದ್ದುಪಡಿ ಮೂಲಕ ಮುಸ್ಲಿಮರಿಗೆ ದ್ರೋಹ ಮಾಡುತ್ತಿದೆ. ಕೂಡಲೇ ತಿದ್ದುಪಡಿಯನ್ನು ಹಿಂಪಡೆಯಬೇಕು. ಮುಸ್ಲಿಮರು ಎಲ್ಲ ಧರ್ಮದ ಜನರೊಂದಿಗೆ ಸಾಮರಸ್ಯದಿಂದ ಬದುಕುತ್ತಿದ್ದಾರೆ. ಆದರೆ, ನಮ್ಮ ಹಕ್ಕನ್ನು ಉದ್ದೇಶಪೂರ್ವಕವಾಗಿ ಕಸಿದುಕೊಳ್ಳುವ ಪ್ರಯತ್ನ ನಡೆಸಿದರೆ ಇದಕ್ಕೆ ಮುಸ್ಲಿಂ ಸಮುದಾಯ ಬಗ್ಗುವುದಿಲ್ಲ. ವಕ್ಫ್ ಮಸೂದೆ ತಿದ್ದುಪಡಿಯನ್ನು ಹಿಂಪಡೆಯದಿದ್ದರೆ ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆʼ ಎಂದು ಎಚ್ಚರಿಸಿದರು.

ADVERTISEMENT

ಜದೀದ್ ಮಸೀದಿ ಮೌಲಾನ ವಾಜೀದ್ ಅಲಿ ಮಾತನಾಡಿ, ‘ಮುಸ್ಲಿಂ ಸಮುದಾಯದ ಪೂರ್ವಿಕರು ನಮ್ಮ ಸಮುದಾಯವು ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕುವ ಉದ್ದೇಶ ಹಾಗೂ ಧರ್ಮದ ಆಚಾರ,  ಅವಶ್ಯಕತೆಗೆ ದೇವರ ಹೆಸರಿನಲ್ಲಿ ಕೊಟ್ಟ ಜಾಗಕ್ಕೆ ವಕ್ಫ್ ಆಸ್ತಿ ಎನ್ನುತ್ತಾರೆ. ಈ ಸಂಸ್ಕೃತಿ ಕೇವಲ ಮುಸ್ಲಿಮರಲ್ಲಿ ಮಾತ್ರವಲ್ಲ,  ಹಿಂದೂ, ಕ್ರಿಶ್ಚಿಯನ್, ಭೌದ ಧರ್ಮದಲ್ಲೂ ನಡೆದುಕೊಂಡು ಬಂದಿದೆ. ಆದರೆ, ಶತಮಾನಗಳಿಂದಲೂ ತಮ್ಮ ಧರ್ಮ, ಆಚಾರ, ವಿಚಾರಗಳ ಮೂಲಕ ಜೀವನ ನಡೆಸುತ್ತಿರುವ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸುತ್ತಿರುವುದು ಸರಿಯಲ್ಲ. ನಮ್ಮ ಆಸ್ತಿ ಕಿತ್ತುಕೊಳ್ಳುವ ಪ್ರಯತ್ನ ಕೈ ಬಿಡಬೇಕು. ಯಾವುದೇ ಧರ್ಮಕ್ಕೆ ಧಕ್ಕೆ ತರುವ ಕೆಲಸವು ಯಾರಿಂದಲೂ ನಡೆಯಬಾರದುʼ ಎಂದರು.

ತಾಲ್ಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಜಾಮಿಯಾ ಮಸೀದಿ ಮೌಲಾನ ಸೈಯದ್ ಇಜಾಝ್ ಅಹಮ್ಮದ್, ಚಕಮಕ್ಕಿ ಖಲಂದರಿಯಾ ಸಂಸ್ಥೆಯ ಸಿನಾನ್ ಫೈಝಿ, ಇಕ್ಬಾಲ್ ಮೌಲಾನ ಕಿತ್ತಲೆಗಂಡಿ, ವಕೀಲ ರಿಜ್ವಾನ್ ಅಲಿ, ಜಿಯಾವುಲ್ಲಾ, ಅಲ್ತಾಫ್ ಬಿಳಗುಳ, ಅಬ್ರಾರ್‌ ಅಹಮದ್‌, ಷರೀಫ್‌, ಸಿ.ಕೆ. ಇಬ್ರಾಹಿಂ, ಹುಸೈನ್‌ ಬಿಳಗುಳ, ಮಹಮ್ಮದ್‌ ಬಾವಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.