ADVERTISEMENT

ಪೋಡಿ ಮುಕ್ತ ಗ್ರಾಮ| ಕಂದಾಯ ಇಲಾಖೆಯ ಪತ್ರವೇ ಅಡ್ಡಿ: ಮಂಜುನಾಥಗೌಡ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 5:00 IST
Last Updated 9 ಜನವರಿ 2026, 5:00 IST
ಮಂಜುನಾಥಗೌಡ
ಮಂಜುನಾಥಗೌಡ   

ಮೂಡಿಗೆರೆ: ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಕಚೇರಿಯು 2025ರ ಅಕ್ಟೋಬರ್ 10 ರಲ್ಲಿ ಹೊರಡಿಸಿರುವ ಪತ್ರವೇ ಪೋಡಿ ಮುಕ್ತ ಗ್ರಾಮದ ಪರಿಕಲ್ಪನೆಗೆ ಅಡ್ಡಿಯಾಗಿದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಂಜುನಾಥಗೌಡ ದೂರಿದರು.

ಪಟ್ಟಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಪೋಡಿ ವಿಚಾರವಾಗಿ ರೈತರೊಬ್ಬರು ಸಲ್ಲಿಸಿದ ಅರ್ಜಿಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಕಚೇರಿಯಿಂದ ಬಂದ ಉತ್ತರ ಮೇಲ್ನೋಟಕ್ಕೆ ಸರಿಯಾಗಿದೆ. ಏನೂ ದೋಷವಿಲ್ಲವೆಂದು ತೋರುತ್ತದೆ. ಆದರೆ ಕೆಲವು ಅಂಶಗಳು ಭೂ ಕಂದಾಯ ಕಾಯ್ದೆಯನ್ನು ಕಡೆಗಣಿಸಿರುವುದು ಕಂಡು ಬರುತ್ತಿದೆ. ಇದರಿಂದ ಲಕ್ಷಾಂತರ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಸರ್ವೆ ಇಲಾಖೆ ನಡೆಸುವ ಪ್ರತಿಯೊಂದು ಪೋಡಿ ನಡವಳಿಯನ್ನು ತಾಲ್ಲೂಕು ಕಚೇರಿಗೆ ಕಳುಹಿಸಿ, ರಾಜಸ್ವ ನಿರೀಕ್ಷಕರು 12ನೇ ನಮೂನೆಯಲ್ಲಿ ಅಂಗೀಕರಿಸಬೇಕು. ನಂತರ ಗ್ರಾಮ ಆಡಳಿತಾಧಿಕಾರಿಗಳು 16ನೇ ನಮೂನೆಯಲ್ಲಿ ದಾಖಲಿಸಿದರೆ, ಪೋಡಿ ನಡವಳಿ ಅಂತಿಮ ಹಂತಕ್ಕೆ ತಲುಪುತ್ತದೆ. ಆದರೆ ಜಿಲ್ಲಾಧಿಕಾರಿ, ಪ್ರಾದೇಶಿಕ ಆಯುಕ್ತರು ಹಾಗೂ ಪ್ರಧಾನ ಕಾರ್ಯದರ್ಶಿಗಳ ಕಾರ್ಯಾಲಯವು ಪಹಣಿಯಲ್ಲಿ ಬರೆದಿರುವ 40, 42, 58 ಹಾಗೂ 70ನೇ ನಿಯಮಗಳನ್ನು ಕಡೆಗಣಿಸಿದ್ದಾರೆ’ ಎಂದು ದೂರಿದರು.

‘ನಿಯಮ 70, 72, 5ನೇ ಅಧ್ಯಾಯ 49, ಇಂಡಿಯನ್ ಸಿವಿಲ್ ಪ್ರೊಸೀಜರ್ ಕೋಡ್ 1908 ರ ಕಲಂ 54, 11ನೇ ಅಧ್ಯಾಯದ 136, ಕಲಂ 129 ರ 4 ಹಾಗೂ 6ನೇ ಉಪಬಂಧ, ಈ ನಡಾವಳಿಯಂತೆ ಕಾರ್ಯ ರೂಪಿಸಿದರೆ ಪೋಡಿ ಪ್ರಕರಣದಲ್ಲಿ ಗೊಂದಲ ಉಂಟಾಗುವುದಿಲ್ಲ. ಪ್ರಧಾನ ಕಾರ್ಯದರ್ಶಿಗಳ ಕಾರ್ಯಾಲಯದ ಸಿಬ್ಬಂದಿ ಕಚೇರಿ ಟಿಪ್ಪಣಿ ತಯಾರಿಸುವಾಗ ಎಚ್ಚರಿಕೆ ವಹಿಸಿದರೆ, ಪೋಡಿ ಮುಕ್ತ ಗ್ರಾಮದ ರಚನೆಗೆ ಸಹಕಾರಿಯಾಗುತ್ತದೆ. ಆದ್ದರಿಂದ 2025ರ, ಅಕ್ಟೋಬರ್ 10ರ ಹೊರಡಿಸಿರುವ ಪತ್ರವನ್ನು ಮರು ಪರಿಶೀಲಿಸಬೇಕು’ ಎಂದು ಅವರು ಒತ್ತಾಯಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.