ADVERTISEMENT

ಸಖರಾಯಪಟ್ಟಣ: ಪತ್ನಿಯಿಂದಲೇ ಪತಿಯ ಕೊಲೆ, ಬಂಧನ

ಪ್ರಿಯಕರನೊಂದಿಗೆ ಸೇರಿ ಕೃತ್ಯ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2020, 3:25 IST
Last Updated 25 ನವೆಂಬರ್ 2020, 3:25 IST
ಪ್ರದೀಪ
ಪ್ರದೀಪ   

ಕಡೂರು: ತಾಲ್ಲೂಕಿನ ಸಖರಾಯಪಟ್ಟಣ ಬಳಿಯ ದೊಡ್ಡಹಟ್ಟಿಯ ಪ್ರದೀಪ ಎಂಬ ವ್ಯಕ್ತಿಯನ್ನು ಆತನ ಹೆಂಡತಿ ಮತ್ತು ಪ್ರಿಯಕರ ಸೇರಿ ಕೊಲೆ ಮಾಡಿರುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.

ಭಾನುವಾರ ರಾತ್ರಿ ಪ್ರದೀಪ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ. ಆದರೆ, ಆತನನ್ನು ಕೊಲೆ ಮಾಡಿರುವ ಸಾಧ್ಯತೆಗಳಿವೆ ಎಂದು ಮನೆಯ ಮಾಲೀಕ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಪೊಲೀಸರು ಪ್ರದೀಪನ ಪತ್ನಿ ರಾಗಿಣಿಯನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಆಕೆಯೇ ತನ್ನ ಪ್ರಿಯಕರ ಶ್ರೀನಿವಾಸ್ ಎಂಬಾತನ ಜೊತೆಗೂಡಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.

10 ವರ್ಷಗಳ ಹಿಂದೆ ಹುಲಿಕೆರೆಯ ಪ್ರದೀಪ ಹಾಗೂ ಹಳೆಬೀಡಿನ ರಾಗಿಣಿ ಮದುವೆಯಾಗಿದ್ದರು. ಈ ದಂಪತಿಗೆ 9 ವರ್ಷದ ಮಗಳು ಹಾಗೂ 7 ವರ್ಷದ ಮಗ ಇದ್ದಾರೆ. ದೊಡ್ಡಹಟ್ಟಿ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿದ್ದುಕೊಂಡು ಗಾರೆ ಕೆಲಸ ಮಾಡಿಕೊಂಡಿದ್ದ ಪ್ರದೀಪ ಮದ್ಯವ್ಯಸನಿ ಆಗಿದ್ದ. ಗಂಡ- ಹೆಂಡತಿಯರ ಮಧ್ಯೆ ಆಗ ಜಗಳ ನಡೆಯುತ್ತಿತ್ತು. ಪ್ರದೀಪನ ವೃತ್ತಿ ಮಿತ್ರನಾಗಿದ್ದ ಶ್ರೀನಿವಾಸ್ ಆಗಾಗ ಈತನ ಮನೆಗೆ ಬರುತ್ತಿದ್ದುದರಿಂದ ರಾಗಿಣಿ ಮತ್ತು ಆತನ ನಡುವೆ ಸಲುಗೆ ಏರ್ಪಟ್ಟಿತ್ತು.

ADVERTISEMENT

ಭಾನುವಾರ ರಾತ್ರಿ ರಾಗಿಣಿ ಮತ್ತು ಶ್ರೀನಿವಾಸ್ ಇಬ್ಬರು ಜೊತೆಗಿದ್ದಾಗ ಪ್ರದೀಪ ಮನೆಗೆ ಬಂದಾಗ ಗಲಾಟೆ ನಡೆದಿದೆ. ಈ ವೇಳೆ ರಾಗಿಣಿ ಹಾಗೂ ಶ್ರೀನಿವಾಸ್ ಇಬ್ಬರೂ ಸೇರಿ ಪ್ರದೀಪನ ಕುತ್ತಿಗೆಗೆವೇಲ್‍ನಿಂದ ಬಿಗಿದು ಕೊಲೆ ಮಾಡಿದ್ದಾರೆ.

ಇದಕ್ಕೂ ರಾಗಿಣಿ ತನ್ನ ಇಬ್ಬರು ಮಕ್ಕಳನ್ನು ಟಿವಿ ನೋಡಲು ಪಕ್ಕದ ಮನೆಗೆ ಕಳುಹಿಸಿದ್ದಳು. ನಂತರ ರಾತ್ರಿಯಿಡೀ ಮೃತದೇಹ ಮನೆಯಲ್ಲಿದ್ದಂತೆಯೇ ರಾಗಿಣಿ ಮಕ್ಕಳೊಂದಿಗೆ ಮನೆಯಲ್ಲಿಯೇ ಮಲಗಿದ್ದಾಳೆ. ಸಹಜ ಸಾವೆಂದು ಬಿಂಬಿಸುವ ಯತ್ನ ಆಕೆಯದಾಗಿತ್ತು.

ಸೋಮವಾರ ಬೆಳಿಗ್ಗೆ ಏಳುವಷ್ಟರಲ್ಲಿ ಪ್ರದೀಪನ ಮೃತದೇಹದಿಂದ ರಕ್ತ ಸ್ರಾವವಾಗಿತ್ತು. ಗ್ರಾಮಸ್ಥರು ಬಂದು ನೋಡಿದಾಗ ಕುತ್ತಿಗೆಯಲ್ಲಿ ಹಲವು ಗಾಯದ ಗುರುತುಗಳಿದ್ದವು. ಈ ಬಗ್ಗೆ ದೂರು ದಾಖಲಿಸಿಕೊಂಡ ಸಖರಾಯಪಟ್ಟಣ ಪೊಲೀಸರು, ಮಕ್ಕಳನ್ನು ವಿಚಾರಿಸಿದಾಗ ರಾತ್ರಿ ಶ್ರೀನಿವಾಸ್ ಎಂಬಾತ ಮನೆಗೆ ಬಂದಿದ್ದ ವಿಷಯ ಗೊತ್ತಾಗಿದೆ. ಕೂಡಲೇ ಪೊಲೀಸರು ರಾಗಿಣಿ ಮತ್ತು ಪ್ರಿಯಕರ ಶ್ರೀನಿವಾಸ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಸಂಗತಿ ಹೊರಬಂದಿದೆ.

ಇಬ್ಬರು ಆರೋಪಿಗಳನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಕೆ. ಮಚ್ಚೇಂದ್ರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರುತಿ, ಕಡೂರು ಇನ್‌ಸ್ಪೆಕ್ಟರ್ ಮಂಜುನಾಥ್ ಮತ್ತು ಸಖರಾಯಪಟ್ಟಣ ಪಿಎಸ್‌ಐ ಹರೀಶ್ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.