ADVERTISEMENT

ಕೊಲೆ ‍ಪ್ರಕರಣ: ಜೀವಾವಧಿ ಶಿಕ್ಷೆ, ದಂಡ

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 16:20 IST
Last Updated 28 ಜುಲೈ 2020, 16:20 IST

ಚಿಕ್ಕಮಗಳೂರು: ಕೊಲೆ ಪ್ರಕರಣದಲ್ಲಿ ತರೀಕೆರೆ ತಾಲ್ಲೂಕಿನ ತುದಿಪೇಟೆಯ ಟಿ.ಡಿ.ಶಿವರಾಜ್ ಅಲಿಯಾಸ್ ಶಿವುಗೆ ಜೀವಾವಧಿ ಶಿಕ್ಷೆ, ₹ 10,000 ದಂಡವನ್ನುಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್‌ ಕೋರ್ಟ್‌ ವಿಧಿಸಿದೆ.

ನ್ಯಾಯಾಧೀಶರಾದ ಉಮೇಶ್ ಎಂ.ಅಡಿಗ ಈ ಆದೇಶ ನೀಡಿದ್ದಾರೆ. ದಂಡ ಪಾವತಿಸದಿದ್ದರೆ ಹೆಚ್ಚುವರಿಯಾಗಿ ಆರು ತಿಂಗಳು ಜೈಲು ಅನುಭವಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಏನಿದು ಪ್ರಕರಣ: 2018ರ ಅ. 5ರಂದು ಕೊಲೆ ನಡೆದಿತ್ತು. ಬಿ.ಕೋಡಿಹಳ್ಳಿ–ನಾಗದೇವನಹಳ್ಳಿ ರಸ್ತೆಯಲ್ಲಿ ಮೋಹನ ಎಂಬಾತ ದ್ವಿಚಕ್ರ ವಾಹನದಲ್ಲಿ(ಟಿವಿಎಸ್–ಎಕ್ಸೆಲ್‌) ಸಾಗುವಾಗ ಮಾರ್ಗದಲ್ಲಿ ಎದುರಾದ ಶಿವರಾಜ ಡ್ರಾಪ್‌ ಕೇಳಿ ಬೈಕ್‌ ಹತ್ತಿದ್ದ.

ADVERTISEMENT

ಸ್ವಲ್ಪ ದೂರ ಸಾಗಿದ ಮೋಹನ ವಾಹನ ನಿಲ್ಲಿಸಿ, ಬೇವಿನ ಸೊಪ್ಪು ಕೊಯ್ಯಲು ಮರ ಹತ್ತಿದರು. ಶಿವರಾಜ ದೊಣ್ಣೆಯಿಂದ ಅವರ ತಲೆಗೆ ಹೊಡೆದಿದ್ದ. ರಕ್ತ ಸ್ರಾವದಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಶವವನ್ನು ಪೊದೆಯೊಳಕ್ಕೆ ಹಾಕಿದ್ದ. ಮೋಹನ ಅವರ ಮೊಬೈಲ್, ದ್ವಿಚಕ್ರವಾಹನ ಕದ್ದೊಯ್ದಿದ್ದ.

ತರೀಕೆರೆಯ ರೈಲು ನಿಲ್ದಾಣ ಬಳಿ ಆಲಿ ಎಂಬವರಿಗೆ ವಾಹನ ಮಾರಲು ಮುಂದಾಗಿದ್ದ. ಭದ್ರಾವತಿಯ ಓಲ್ಡ್ ಟೌನ್ ಪೊಲೀಸ್ ಠಾಣೆ ಸಿಬ್ಬಂದಿಗೆ ವಿಷಯ ಗೊತ್ತಾಗಿ, ವಿಚಾರಣೆ ಮಾಡಿದಾಗ ಕೊಲೆ ಮಾಡಿದ್ದನ್ನು ಶಿವರಾಜ ಬಾಯಿಬಿಟ್ಟಿದ್ದ.

ಬೀರೂರು ಠಾಣೆ ಪೊಲೀಸರು ದಾಖಲಿಸಿಕೊಂಡು, ಕೋರ್ಟ್‌ಗೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ಪಬ್ಲಿಕ್‌ ಪ್ರಾಸಿಕ್ಯುಟರ್‌ ವಿ.ಜಿ.ಯಳಗೇರಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.