ADVERTISEMENT

ನರಸಿಂಹರಾಜಪುರ: ಬತ್ತುತ್ತಿವೆ ಹಳ್ಳಕೊಳ್ಳ, ಕ್ಷೀಣಿಸುತ್ತಿದೆ ಕೊಳವೆಬಾವಿ ನೀರು

ಮಳೆ ಬರದಿದ್ದರೆ ಕುಡಿಯುವ ನೀರಿ ಸಮಸ್ಯೆ ಉದ್ಭವ ಸಾಧ್ಯತೆ

ಕೆ.ವಿ.ನಾಗರಾಜ್
Published 19 ಮಾರ್ಚ್ 2024, 5:44 IST
Last Updated 19 ಮಾರ್ಚ್ 2024, 5:44 IST
ನರಸಿಂಹರಾಜಪುರ ತಾಲ್ಲೂಕು ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಗಂಡಿ ಹಳ್ಳ ಬತ್ತಿರುವುದು
ನರಸಿಂಹರಾಜಪುರ ತಾಲ್ಲೂಕು ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಗಂಡಿ ಹಳ್ಳ ಬತ್ತಿರುವುದು   

ನರಸಿಂಹರಾಜಪುರ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಮಳೆಯ ಕೊರತೆಯಿಂದಾಗಿ , ಹಿಂದೆಂದೂ ಬತ್ತದ ಹಳ್ಳಕೊಳ್ಳಗಳು ಬತ್ತುತ್ತಿವೆ. ಕೊಳವೆಬಾವಿಯ ನೀರು ಕ್ಷೀಣಿಸುತ್ತಿದೆ. ಹದಿನೈದು ದಿನಗಳಲ್ಲಿ ಮಳೆ ಬರದಿದ್ದರೆ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೊರಲಿದೆ.

ತಾಲ್ಲೂಕಿನ ವ್ಯಾಪ್ತಿಯಲ್ಲಿ ಹಲವು ನದಿ ಮೂಲಗಳು ಇದ್ದರೂ ಸಹ ಕುಡಿಯುವ ನೀರಿಗೆ ಕೊಳವೆಬಾವಿಗಳನ್ನು ಅವಲಂಬಿಸಲಾಗಿದೆ. ಸದ್ಯಕ್ಕೆ ಕುಡಿಯುವ ನೀರಿನ ತೀವ್ರತರಹದ ಸಮಸ್ಯೆ ಉದ್ಭವಿಸಿಲ್ಲ. ತಾಲ್ಲೂಕಿನ 14 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತುರ್ತು ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದಾದ ಗ್ರಾಮಗಳು ಹಾಗೂ ಅದಕ್ಕೆ ಕಾರಣ ಸಹಿತ ಗ್ರಾಮ ಪಂಚಾಯಿತಿಗಳು ತಾಲ್ಲೂಕು ಪಂಚಾಯಿತಿ ಕಾರ್ಯಾನಿರ್ವಹಣಾಧಿಕಾರಿಗಳಿಗೆ ವರದಿಯನ್ನು ಸಲ್ಲಿಸಿವೆ.

ನಾಗಲಾಪುರ ಗ್ರಾ.ಪಂ ವ್ಯಾಪ್ತಿಯ ನಾಗಲಾಪುರ ಗ್ರಾಮ, ಮುತ್ತಿನಕೊಪ್ಪ ಗ್ರಾ.ಪಂ ವ್ಯಾಪ್ತಿಯ ಮರಾಠಿಕ್ಯಾಂಪ್, ಕಡಹಿನಬೈಲು ಗ್ರಾ.ಪಂ ವ್ಯಾಪ್ತಿಯ ಆಲಂದೂರು, ಕಾನೂರು ಗ್ರಾ.ಪಂ ಯ ಸಂಕ್ಸೆ ಗ್ರಾಮದ ವ್ಯಾಪ್ತಿಯ ನೇರಳೆ, ಗುಂಡುವಾನಿ, ಗೋಣಿಕೊಪ್ಪ, ಹರಾವರಿ ಗ್ರಾಮದ ವ್ಯಾಪ್ತಿಯ ಶಿವಪ್ಪನಗರ, ಕೋಣನಗುಡ್ಡ, ಕಟ್ಟಿನಮನೆ, ಮೂಡೊಡಿ, ಕಾನೂರು ಗ್ರಾಮದ ವ್ಯಾಪ್ತಿಯ ಮೂಲೆಮನೆ, ಸಾತುವಾನಿ, ದಾವಣ, ಮೆಣಸೂರು ಗ್ರಾ. ಪಂ ವ್ಯಾಪ್ತಿಯ ಸಿಂಸೆಯ ಕಳ್ಳಿಕೊಪ್ಪ, ಕರ್ಕೇಶ್ವರ ಗ್ರಾ.ಪಂ ವ್ಯಾಪ್ತಿಯ ಗುತ್ತಿನಗದ್ದೆ, ಗೋಣಿಕೊಪ್ಪ, ಕೊಡಿಗೆಹಡ್ಲು, ಜಕ್ಕಣಿಕೆ, ಹಾರೆಕೊಪ್ಪ, ಗಂಗೋಜಿ, ಗುಬ್ಬೂರು, ನೆಲ್ಲಿಮಕ್ಕಿ, ಬಾಳೆಹಿತ್ಲು, ನಡ್ಲುಮನೆ. ಬನ್ನೂರು ಗ್ರಾ.ಪಂ ವ್ಯಾಪ್ತಿಯ ಜಕ್ಕಣಕ್ಕಿ, ಸಂ.ನಂ95, ಜನತಾ ಕಾಲೊನಿ, ಕಬ್ಬಿನಮಣ್ಣು ಕುಂದಜ್ಜನ ಕಾಲೊನಿಯಲ್ಲಿ ನೀರಿನ ಕೊರತೆಯಾಗಬಹುದೆಂದು ಅಂದಾಜಿಸಲಾಗಿದೆ.

ADVERTISEMENT

ನೀರಿನ ಸಮಸ್ಯೆ ಉದ್ಭವಿಸಲು ಕೊಳವೆಬಾವಿ ವಿಫಲವಾಗಿರುವುದು, ಗ್ರಾವಿಟಿ ನೀರು ಕಡಿಮೆಯಾಗುತ್ತಿರುವುದು. ಕೊಳವೆಬಾವಿ ನೀರು ಕಡಿಮೆಯಾಗುತ್ತಿರುವುದು ಕಾರಣ ಎಂದು ವರದಿಯಲ್ಲಿ ತಿಳಿಸಲಾಗಿದೆ. ಕೊಳವೆಬಾವಿಯಲ್ಲಿ ನೀರು ಕಡಿಮೆಯಾಗಿರುವ ಕಡೆ ಕಡಿಮೆ ಪ್ರಮಾಣದಲ್ಲಿ ನೀರು ಪೂರೈಸಲಾಗುತ್ತಿದೆ. ಕೊಳವೆಬಾವಿ ವಿಫಲವಾಗಿರುವ ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿಗಳಿಂದ ನೀರು ಪೂರೈಸಲು ಕ್ರಮಕೈಗೊಳ್ಳಲಾಗಿದೆ.

ತಾಲ್ಲೂಕಿನ ಬಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 3 ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸಬೇಕಾಗಿದೆ. 4 ಕೊಳವೆಬಾವಿಗಳಿಗೆ ಫ್ಲಶಿಂಗ್ ಮಾಡಿಸಬೇಕಾಗಿದೆ. 5 ನೀರಿನ ಸ್ಥಾವರಗಳಿಗೆ ಪೈಪ್ ಲೈನ್ ಅಳವಡಿಸಬೇಕಾಗಿದೆ. ಬನ್ನೂರು ಗ್ರಾ.ಪಂಯಲ್ಲಿ 1 ಕೊಳವೆ ಬಾವಿಗೆ ಪ್ಲಶಿಂಗ್ ಮಾಡಿಸಬೇಕಾಗಿದೆ. ಕಡಹಿನಬೈಲು ಗ್ರಾ.ಪಂ ಒಂದು ಕೊಳವೆಬಾವಿಗೆ ವಿದ್ಯುತ್ ಸಂಪರ್ಕ, ಪ್ಲಶಿಂಗ್, ನೀರಿನ ಸ್ಥಾವರಕ್ಕೆ ಪೈಪ್ ಲೈನ್ ಅಳವಡಿಸಬೇಕಾಗಿದೆ. ಕಾನೂರು ಗ್ರಾ. ಪಂ ವ್ಯಾಪ್ತಿಯಲ್ಲಿ 5 ಕೊಳವೆಬಾವಿಗೆ ವಿದ್ಯುತ್ ಸಂಪರ್ಕ, ತಲಾ 1 ಕೊಳವೆಬಾವಿಗೆ ಫ್ಲಶಿಂಗ್ ಮತ್ತು ಪೈಪ್ ಲೈನ್ ಅಳವಡಿಸಬೇಕಾಗಿದೆ. ಮೆಣಸೂರ ಗ್ರಾ.ಪಂ 4ಕೊಳವೆಬಾವಿಗೆ ವಿದ್ಯುತ್ ಸಂಪರ್ಕಕಲ್ಪಿಸಬೇಕಾಗಿದೆ. ನಾಗಲಾಪುರ ಗ್ರಾ.ಪಂ ವ್ಯಾಪ್ತಿಯ 1ಕೊಳವೆಬಾವಿ ಪ್ಲಶಿಂಗ್ ಮತ್ತು ಪೈಪ್ ಲೈನ್ ಅಳವಡಿಸಬೇಕಾಗಿದೆ. ಬಿ.ಕಣಬೂರು ಗ್ರಾ.ಪಂ 1 ಕೊಳವೆಬಾವಿಗೆ ವಿದ್ಯುತ್ ಸಂಪರ್ಕ, 4 ಕೊಳವೆಬಾವಿಗೆ ಪ್ಲಶಿಂಗ್ ,2 ನೀರಿನ ಸ್ಥಾವರಗಳಿಗೆ ಪೈಪ್ ಲೈನ್ ಅಳವಡಿಸಬೇಕಾಗಿದೆ.

ಕಟ್ಟಿನಮನೆ ಗ್ರಾಮದ ವ್ಯಾಪ್ತಿಯಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆಯಿಲ್ಲ.ಹಳ್ಳಗಳು ಬತ್ತಿಹೋಗಿರುವುದರಿಂದ ಜಾನುವಾರುಗಳಿಗೆ ಸಮಸ್ಯೆಯಾಗಲಿದೆ ಎನ್ನುತ್ತಾರೆ ಗ್ರಾಮಸ್ಥ ನವೀನ್.

ನರಸಿಂಹರಾಜಪುರ ತಾಲ್ಲೂಕು ಕುದುರೆಗುಂಡಿ ಸಮೀಪದ ಹಳ್ಳ ಬತ್ತಿರುವುದು

ಬಹುತೇಕ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆ ಯಾಗಿದೆ. ಮುಂದಿನ ಹದಿನೈದು ದಿನಗಳಲ್ಲಿ ಮಳೆಬರದಿದ್ದರೆ ಕುಡಿಯುವ ನೀರಿನ ಸಮಸ್ಯೆಯಾಗುವ ಸಾಧ್ಯತೆಯಿದೆ

-ಎಚ್.ಡಿ.ನವೀನ್ ಕುಮಾರ್ ತಾಪಂ ಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.