ಹೊಸರಸ್ತೆ (ನರಸಿಂಹರಾಜಪುರ): ‘ಆರ್ಥಿಕ ಸಮಸ್ಯೆಯಿಂದ ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು ಮತ್ತು ಎಲ್ಲರಿಗೂ ಉತ್ತಮ ಆರೋಗ್ಯ ಸೌಲಭ್ಯ ಒದಗಿಸಬೇಕೆಂಬ ಉದ್ದೇಶವನ್ನು ಜಿನಿ ವಿಶ್ವನಾಥ್ ಸೇವಾ ಕೇಂದ್ರದ ಹೊಂದಿದೆ’ ಎಂದು ಜಿನಿವಿಶ್ವನಾಥ್ ಸೇವಾ ಕೇಂದ್ರದ ಸ್ಥಾಪಕ ಅಧ್ಯಕ್ಷ ವಿಶ್ವನಾಥ್ ಗದ್ದೆಮನೆ ಹೇಳಿದರು.
ಕಡಹಿನಬೈಲು ಗ್ರಾ.ಪಂ. ವ್ಯಾಪ್ತಿಯ ಹೊಸರಸ್ತೆ ಬಳಿ ಜಿನಿ ವಿಶ್ವನಾಥ್ ಸೇವಾ ಕೇಂದ್ರ ಹಾಗೂ ತಾಲ್ಲೂಕು ಆರೋಗ್ಯ ಇಲಾಖೆಯಿಂದ ಭಾನುವಾರ ಹಾವುಗೊಲ್ಲರ ಕುಟುಂಬಕ್ಕೆ ಆಯೋಜಿಸಿದ್ದ ಆರೋಗ್ಯ, ನೈರ್ಮಲ್ಯ ಮತ್ತು ಸ್ವಚ್ಛತಾ ಜಾಗೃತಿ ಅಭಿಯಾನದಲ್ಲಿ ಹಾವುಗೊಲ್ಲ ಕುಟುಂಬಗಳಿಗೆ ನೀರಿನ ಫೀಲ್ಟರ್ ವಿತರಿಸಿ ಅವರು ಮಾತನಾಡಿದರು.
‘ಶಿಕ್ಷಣಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ನರಸಿಂಹರಾಜಪುರ, ಕೊಪ್ಪ, ಶೃಂಗೇರಿ ತಾಲ್ಲೂಕಿನ ಆಯ್ದ ಸರ್ಕಾರಿ ಶಾಲೆಯ 8,500 ಮಕ್ಕಳಿಗೆ ಸಮವಸ್ತ್ರ, ಬ್ಯಾಗ್, ಟ್ರ್ಯಾಕ್ ಸೂಟ್, ಪುಸ್ತಕ ಮತ್ತು ಶಿಕ್ಷಣಕ್ಕೆ ಪೂರಕವಾದ ಪರಿಕರಗಳನ್ನು ವಿತರಿಸಲಾಗಿದೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಸ್ವಚ್ಛತೆಯಿಂದ ಆರೋಗ್ಯ ಕಾಪಾಡಬೇಕೆಂಬ ನಿಟ್ಟಿನಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಪಟ್ಟಣ, ಗ್ರಾಮಗಳು ಹಾಗೂ ಜನವಸತಿ ಪ್ರದೇಶಗಳಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಶಿಕ್ಷಣದಿಂದ ಸ್ವಚ್ಛತೆ, ಸ್ವಚ್ಛತೆಯಿಂದ ಆರೋಗ್ಯದ ಬಗ್ಗೆ ಅರಿವು ಹೊಂದಲು ಸಾಧ್ಯವಾಗುತ್ತದೆ. ಶಿಕ್ಷಣಕ್ಕಾಗಿ ಎಲ್ಲಾ ರೀತಿಯ ನೆರವನ್ನು ನೀಡಲಾಗುವುದು’ ಎಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ನರಸಿಂಹಮೂರ್ತಿ ಮಾತನಾಡಿ, ‘ಅತಿಸಾರ ಭೇದಿ, ಟೈಪಾಡ್, ಜಾಂಡೀಸ್‌ನಂತಹ ಸಾಂಕ್ರಾಮಿಕ ಕಾಯಿಲೆಗಳು ಅಶುದ್ಧ ನೀರಿನ ಸೇವನೆಯಿಂದ ಬರುತ್ತವೆ. ಪ್ರತಿಯೊಬ್ಬರು ಕಾಯಿಸಿ ಆರಿಸಿದ ನೀರನ್ನು ಕುಡಿಯಬೇಕು. ವೈಯಕ್ತಿಕ ಸ್ವಚ್ಛತೆ, ಶೌಚಾಲಯ ಬಳಸಿದಾಗ ಸೋಪಿನಿಂದ ಕೈತೊಳೆದುಕೊಳ್ಳಬೇಕು. ಶುಚಿತ್ವ ಕಾಪಾಡಿದರೆ ಸಾಂಕ್ರಾಮಿಕ ಕಾಯಿಲೆ ತಡೆಗಟ್ಟಬಹುದು. ಅಸಾಂಕ್ರಾಮಿಕ ಕಾಯಿಲೆಗಳಾದ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳನ್ನು ನಿಯಮಿತ ತಪಾಸಣೆಯಿಂದ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಯಾವುದೇ ರೀತಿ ಅನಾರೋಗ್ಯ ಉಂಟಾದಾಗ ಮನೆ ಔಷಧಿ ಮಾಡದೆ ಸಮೀಪದ ಆಸ್ಪತ್ರೆಗೆ ಬಂದು ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು ಎಂದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ ಮಾತನಾಡಿ, ‘ಪರಿಸರ ಸ್ವಚ್ಛತೆ, ವೈಯಕ್ತಿಕ ಸ್ವಚ್ಛತೆ, ಪೌಷ್ಟಿಕ ಆಹಾರ ಸೇವನೆ, ಯೋಗ, ಧ್ಯಾನದ ಮೂಲಕ ಉತ್ತಮ ಆರೋಗ್ಯ ವೃದ್ಧಿಸಿಕೊಳ್ಳಲು ಸಾಧ್ಯವಾಗುತ್ತದೆ. ಮಾದಕ ವಸ್ತುಗಳ ಸೇವನೆಯನ್ನು ತ್ಯಜಿಸುವುದರ ಮೂಲಕ ವ್ಯಸನ ಮುಕ್ತ ಸಮಾಜದ ನಿರ್ಮಾಣಕ್ಕೆ ಸಹಕರಿಸಬೇಕು’ ಎಂದರು.
ವಕೀಲ ಎಚ್.ಎ.ಸಾಜು, ಕಡಹಿನಬೈಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಿಲ್ಲಿ ಮಾತುಕುಟ್ಟಿ, ಉಪಾಧ್ಯಕ್ಷ ಸುನಿಲ್ ಕುಮಾರ್ ಮಾತನಾಡಿದರು. ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ.ಚಂದ್ರಪ್ರಭ, ಸಮುದಾಯ ಆರೋಗ್ಯ ಅಧಿಕಾರಿ ರಾಹೀಲಾ, ಜೀನಿ ವಿಶ್ವನಾಥ್ ಸೇವಾ ಸಂಸ್ಥೆಯ ಸಾಜು, ಏಲಿಯಾಸ್, ಮನು ಅಬ್ರಾಹಾಂ ಇದ್ದರು. ಆರೋಗ್ಯ ತಪಾಸಣೆ ನಡೆಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.