ಚಿಕ್ಕಮಗಳೂರು: ‘ಪ್ರಧಾನಿ ನರೇಂದ್ರ ಮೋದಿ ಆಧುನಿಕ ಔರಂಗಜೇಬ’ ಎಂದು ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಸಿದ್ಧನಗೌಡ ಪಾಟೀಲ ಹೇಳಿದರು.
ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಭಾರತೀಯ ಕಮ್ಯೂನಿಸ್ಟ್ ಪಕ್ಷದ 14ನೇ ಜಿಲ್ಲಾ ಸಮ್ಮೇಳನದ ಬೃಹತ್ ಬಹಿರಂಗ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
‘16ನೇ ಶತಮಾನದಲ್ಲಿ ದೆಹಲಿಯಲ್ಲಿ ಕುಳಿತು ಇಡೀ ಭಾರತವನ್ನು ನಿಯಂತ್ರಣ ಮಾಡಬೇಕು ಎಂದು ಔರಂಗಜೇಬ ಆಡಳಿತ ಮಾಡುತ್ತಿದ್ದ. ಕರ್ನಾಟಕದ ಮೇಲೆಯೂ ದಾಳಿ ಮಾಡಿದ್ದ. ಬಿಜಾಪುರದ ಸುಲ್ತಾನರ ಮೇಲೆಯೂ ಯುದ್ದ ಮಾಡಿದ್ದರು. ದೆಹಲಿಯಿಂದ ಆಡಳಿತ ನಡೆಸುವುದಷ್ಟೇ ಅವರ ಉದ್ದೇಶವಾಗಿತ್ತು. ಅದನ್ನೇ ಇಂದಿನ ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿದ್ದಾರೆ’ ಎಂದರು.
‘ಬೇಟಿ ಬಚಾವೋ ಬೇಟಿ ಪಡಾವೋ ಎಂದು ಪ್ರಧಾನಿ ಹೇಳುತ್ತಾರೆ. ಆದರೆ, ಧರ್ಮಸ್ಥಳದಲ್ಲಿ ದೊಡ್ಡ ಸಂಘರ್ಷ ನಡೆದಿದೆ. ಯುವತಿಯರ ಹತ್ಯೆಯಾಗಿದೆ. ಬಿಜೆಪಿಗ, ಕಾಂಗ್ರೆಸಿಗರು ಇಬ್ಬರೂ ಧ್ವನಿ ಎತ್ತುತ್ತಿಲ್ಲ. ಕಮ್ಯೂನಿಸ್ಟರು ಎಂದೂ ಧರ್ಮ ವಿರೋಧಿಗಳಲ್ಲ, ಎಲ್ಲರೂ ಕೂಡಿಬಾಳ ಬೇಕು ಎನ್ನುವ ಸೈದ್ಧಾಂತಿಕ ತಳಹದಿಯ ಮೇಲೆ ಕಟ್ಟಿರುವ ಪಕ್ಷ ನಮ್ಮದು’ ಎಂದು ಹೇಳಿದರು.
‘ಲಗ್ಗೆ ಇಟ್ಟಿರುವ ಕಾರ್ಪೋರೇಟ್ ಕಂಪನಿಗಳು, ಜಾತಿವಾದ, ಕೋಮುವಾದದ ನಡುವೆ ಕಮ್ಯೂನಿಸ್ಟ್ ಪಕ್ಷ ಕಟ್ಟುವುದು ಬಹಳ ಕಷ್ಟದ ಕೆಲಸ. ಏಕೆಂದರೆ ಈ ಪಕ್ಷದಲ್ಲಿ ಜಾತಿ ರಾಜಕಾರಣ ಇಲ್ಲ, ಕೋಮುವಾದಿ ರಾಜಕಾರಣ ಇಲ್ಲ, ಇನ್ನಬೊಬ್ಬರ ರಕ್ತ ಹರಿಸಿ ರಾಜಕಾರಣ ಮಾಡೋದಿಲ್ಲ’ ಎಂದು ಹೇಳಿದರು.
‘ಸ್ವಾತಂತ್ರ ಹೋರಾಟದಲ್ಲಿ ಕಮ್ಯುನಿಸ್ಟ್ ಪಕ್ಷದ ಪಾತ್ರ ದೊಡ್ಡದಿದೆ. ಬಿಜೆಪಿಗರು ಗಾಂಧೀಜಿಯನ್ನು ರಾಷ್ಟ್ರಪಿತ ಎನ್ನದೇ ಸಾವರ್ಕರ್ ರಾಷ್ಟ್ರಪಿತ ಎನ್ನುತ್ತಿದ್ದಾರೆ. ಗಾಂಧಿಯನ್ನು ಕೊಂದ ಗೋಡ್ಸೆಯನ್ನು ಸ್ವಾತಂತ್ರ ಹೋರಾಟಗಾರ ಎನ್ನುತ್ತಾರೆ. ನಮ್ಮ ಯುವ ಪೀಳಿಗೆಗೆ ಗೋಡ್ಸೆ ಮಾದರಿಯಾಗಬಾರದು, ಭಗತ್ ಸಿಂಗ್ ಮಾದರಿಯಾಗಬೇಕು’ ಎಂದು ಹೇಳಿದರು.
ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಮಾತನಾಡಿ, ‘ಒಂದು ರಾಜಕೀಯ ಪಕ್ಷ ನೂರು ವರ್ಷ ಹೋರಾಟ, ಚಳವಳಿಗಳ ಅಸ್ತಿತ್ವ ಉಳಿಸಿಕೊಂಡಿದ್ದರೆ ಅದು ಕಮ್ಯೂನಿಸ್ಟ್ ಪಕ್ಷ ಮಾತ್ರ. ಸರ್ವರಿಗೂ ಸಮಪಾಲು,ಸಮಬಾಳು ಎಂಬ ಸಿದ್ಧಾಂತ ಹೊಂದಿರುವ ಪಕ್ಷ ನಮ್ಮದು. ಸಂಪತ್ತಿನ ಸಮಾನ ಹಂಚಿಕೆ ಹೋರಾಟಕ್ಕೆ ಮುಂದಾಗಬೇಕಾಗಿದೆ’ ಎಂದು ತಿಳಿಸಿದರು.
ಆರ್‌ಎಸ್‌ಎಸ್ ಹಾಗೂ ಬಿಜೆಪಿ ಧರ್ಮಾಧರಿತ, ಹಿಂದೂ ರಾಷ್ಟ್ರದ ಕಲ್ಪನೆಯಲ್ಲಿ ಅಸಮಾನ ಶ್ರೇಣಿಕೃತ ಸಮಾಜ ನಿರ್ಮಾಣ ಮಾಡಲು ಹೊರಟಿವೆ. ಎಲ್ಲರೂ ಸಮಾನರು ಎಂದು ತೋರಿಸುವ ಪಕ್ಷ ಅಂದರೆ ಅದು ಕಮ್ಯೂನಿಸ್ಟ್ ಪಕ್ಷ ಎಂದರು.
ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಮೂಲಕ ಬಡವರಿಗೆ ಯೋಜನೆ ನೀಡುತ್ತಿದೆ. ಆದರೆ ಕಳೆದ ಚುನಾವಣೆಯಲ್ಲಿ ಕೃಷಿ ಕಾಯ್ದೆ ತಿದ್ದುಪಡಿ ಮಾಡುತ್ತೇವೆ ಎಂದು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನು ಜಾರಿಗೆ ತಂದಿಲ್ಲ. ಇದರ ವಿರುದ್ದ ಹೋರಾಟ ಮಾಡಬೇಕಾಗಿದೆ ಎಂದು ಹೇಳಿದರು.
ಬಹಿರಂಗ ಸಭೆಗೂ ಮೊದಲು ಭಾರತೀಯ ಕಮ್ಯೂನಿಸ್ಟ್ ಪಕ್ಷದ ಕಚೇರಿಯಿಂದ ನಗರದ ಆಜಾದ್ ಪಾರ್ಕ್ ತನಕ ಮೆರವಣಿಗೆ ನಡೆಯಿತು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಸ್.ಎಲ್.ರಾಧಾ ಸುಂದರೇಶ್, ರಾಜ್ಯ ಮುಖಂಡ ಪಿ.ವಿ.ಲೋಕೇಶ್, ವಿಜಯಕುಮಾರ್, ರೇಣುಕಾರಾಧ್ಯ, ರಘು, ಕುಮಾರ್, ಗೋಪಾಲಶೆಟ್ಟಿ ಉಪಸ್ಥಿತರಿದ್ದರು.
ದುಡಿಯುವ ಜನರ ಮೊದಲ ಪಕ್ಷ
‘ದೇಶದ ಮೊಟ್ಟಮೊದಲ ದುಡಿಯುವ ಜನರ ರಾಜಕೀಯ ಪಕ್ಷ ಅಂದರೆ ಅದು ಭಾರತೀಯ ಕಮ್ಯೂನಿಸ್ಟ್ ಪಕ್ಷ (ಸಿಪಿಐ). 1925ರಿಂದ ಚಳವಳಿ ಜೈಲುವಾಸ ನೇಣುಗಂಬ ಸೇರಿ ಎಲ್ಲವನ್ನು ಎದರಿಸಿ ಕೆಂಬಾವುಟ ಹಿಡಿದು ದುಡಿಯುವ ಜನರ ಧ್ವನಿಯಾಗಿದೆ. ಈಗ ನೂರು ವರ್ಷ ಪೂರೈಸಿದೆ’ ಎಂದು ಸಿದ್ದನಗೌಡ ಪಾಟೀಲ ಹೇಳಿದರು. 1920ರಲ್ಲಿ ಕಾರ್ಮಿಕ ಸಂಘಟನೆ ಕಟ್ಟಲು ಬ್ರಿಟಿಷರು ಅವಕಾಶ ಕೊಟ್ಟಿರಲಿಲ್ಲ. 1924ರಲ್ಲಿ ಬ್ರಿಟಿಷ್ ಸರ್ಕಾರ ಎಲ್ಲಾ ಕಮ್ಯೂನಿಸ್ಟ್ ನಾಯಕರನ್ನು ಜೈಲಿಗೆ ಹಾಕಿತ್ತು. 1925 ಡಿಸೆಂಬರ್‌ನಲ್ಲಿ ಎಲ್ಲಾ ನಾಯಕರು ಜೈಲಿನಲ್ಲಿ ಇರುವಾಗ ಸಾಮಾನ್ಯ ಕಾರ್ಯಕರ್ತರು ಪಕ್ಷ ಉದ್ಘಾಟನೆ ಮಾಡಿದರು. ಅಂದು ಇದ್ದ ಕೆಂಬಾವುಟ ಇಂದೂ ಇದೆ ಎಂದರು. 1919ರಲ್ಲಿ ಜಲಿಯನ್ ವಾಲಾಬಾಗ್‌ನಲ್ಲಿ ರೌಲತ್ ಕಾಯ್ದೆ ಜಾರಿಗೆ ತಂದರು. ಅದೇ ಮಾದರಿಯಲ್ಲಿ ಪ್ರಧಾನಿ ಮೋದಿ ಅವರು ಇಂದು ಕಾನೂನು ಜಾರಿಗೆ ತರುತ್ತಿದ್ದಾರೆ ಎಂದು ಆರೋಪಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.