ADVERTISEMENT

ವ್ಯಕ್ತಿ, ಜಾತಿಗಿಂತ ದೇಶ ಮೊದಲು: ಸಂಸದ ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 4:28 IST
Last Updated 1 ಸೆಪ್ಟೆಂಬರ್ 2025, 4:28 IST
ಬಾಳೆಹೊನ್ನೂರು ಸಮೀಪದ ಸೀಗೋಡಿನ ಜವಾಹರ ನವೋದಯ ವಿದ್ಯಾಲಯದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು
ಬಾಳೆಹೊನ್ನೂರು ಸಮೀಪದ ಸೀಗೋಡಿನ ಜವಾಹರ ನವೋದಯ ವಿದ್ಯಾಲಯದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು   

ಬಾಳೆಹೊನ್ನೂರು: ವ್ಯಕ್ತಿ , ಜಾತಿಗಿಂತ ದೇಶ ಮೊದಲು ಎಂಬುದನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಜವಾಹರ್ ನವೋದಯ ವಿದ್ಯಾಲಯಕ್ಕೆ ಪರಿಶೀಲನಾ ಭೇಟಿ ನೀಡಿದ ಬಳಿಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಹಾವಾಡಿಗರ ದೇಶ ಭಿಕ್ಷುಕರ ದೇಶ ಎಂದು ಕರೆಯುತ್ತಿದ್ದ ರಾಷ್ಟ್ರ ಇಂದು ಜಾಗತಿಕವಾಗಿ ಇತರೆ ದೇಶಗಳಿಗೆ ಸಾಲ ನೀಡುವ ಹಾಗೂ ಬ್ರಹ್ಮೋಸ್ ನಂತಹ ಸಶಸ್ತ್ರಗಳನ್ನು ಪೂರೈಸುವ ದೇಶವಾಗಿ ಬೆಳೆದಿದೆ. ಎಲ್ಲದಕ್ಕಿಂತ ದೇಶವೇ ಮೊದಲು ಎನ್ನುವ ವಿಚಾರದೊಂದಿಗೆ ಸಾಗಿದಾಗ ಮಾತ್ರ ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ವಿದ್ಯಾರ್ಥಿ ಜೀವನದಿಂದಲೇ ನಾವು ಅದನ್ನು ಮೈಗೂಡಿಸಿಕೊಳ್ಳಬೇಕು. ರಾಷ್ಟ್ರದ ಅತ್ಯುತ್ತಮ ವಿದ್ಯಾಕೇಂದ್ರಗಳಲ್ಲಿ ಒಂದಾಗಿರುವ ನವೋದಯ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತಿದೆ ಎಂದರು.

ಪೋಷಕರ ಮತ್ತು ಶಿಕ್ಷಕರ ಪರಿಷತ್ತಿನ ಸದಸ್ಯರು ಕೆಲವು ಮೂಲ ಸೌಕರ್ಯಗಳನ್ನು ಇನ್ನೂ ವಿಸ್ತರಿಸುವಂತೆ ಮನವಿ ಜತೆಗೆ ಹೊಸ ಹೆಚ್ಚುವರಿ ಬಾಲಕರ ವಸತಿ ನಿಲಯವನ್ನು ಆರಂಭಿಸಬೇಕು ಎಂಬ ಬೇಡಿಕೆಗೆ ಪ್ರತಿಕ್ರಿಯಿಸಿದ ಸಂಸದರು, ಬೇಡಿಕೆ ಈಡೇರಿಕೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ADVERTISEMENT

ವಿದ್ಯಾರ್ಥಿಗಳ ಆನ್‌ಲೈನ್ ಕೋಚಿಂಗ್ ವ್ಯವಸ್ಥೆಗೆ ಸಂಬಂಧಿಸಿದಂತೆ ಇಂಟರ್‌ನೆಟ್ ಸೌಲಭ್ಯವನ್ನು ಹೆಚ್ಚಿಸಲು ಸ್ಥಳದಲ್ಲೇ ಬಿಎಸ್ಎನ್ಎಲ್ ಅಧಿಕಾರಿಗಳಿಗೆ ಸೂಚಿಸಿದ ಸಂಸದರು, ವಿದ್ಯುತ್ ಪೂರೈಕೆಯ ಸಮಸ್ಯೆಯನ್ನು ಕೂಡಲೇ ಸರಿಪಡಿಸಲು ಅಧಿಕಾರಿಯೊಬ್ಬರಿಗೆ ಸೂಚಿಸಿದರು.

ಜವಾಹರ ನವೋದಯ ವಿದ್ಯಾಲಯದ ಪ್ರಾಂಶುಪಾಲ ಡೇನಿಯಲ್, ಆಡಳಿತ ಮಂಡಳಿಯ ಕೆ.ಟಿ.ವೆಂಕಟೇಶ್, ನವೋದಯ ಪಿಟಿಸಿ ಸದಸ್ಯ ಪ್ರಭಾಕರ, ಉದಯಕುಮಾರ್, ಜಿಲ್ಲಾ ದಿಶಾ ಸಮಿತಿ ಸದಸ್ಯ ಮಣಿಕಂಠನ್ ಕಂದಸ್ವಾಮಿ ,ಬಿಎಸ್ಎನ್ಎಲ್ ಸಲಹಾ ಸಮಿತಿ ಸದಸ್ಯ ವಿನೋದ್ ಬೊಗಸೆ, ಬಿಜೆಪಿ ತಾಲ್ಲೂಕು ರೈತ ಮೋರ್ಚಾ ಅಧ್ಯಕ್ಷ ಸಂತೋಷ್ ಅರೇನೂರ, ಹೋಬಳಿ ಅಧ್ಯಕ್ಷ ಕಾರ್ತಿಕ್, ಪ್ರವೀಣ್, ಸಂಜಯ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.