ADVERTISEMENT

ಸಂಭ್ರಮದ ವಿಜಯದಶಮಿ: ಶರನ್ನವರಾತ್ರಿ ಸಂಪನ್ನ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 5:22 IST
Last Updated 3 ಅಕ್ಟೋಬರ್ 2025, 5:22 IST
ಚಿಕ್ಕಮಗಳೂರು ತಾಲ್ಲೂಕಿನ ಆರದಹಳ್ಳಿಯಲ್ಲಿ ಅಂಬು ಹೊಡೆಯುವ ಕಾರ್ಯಕ್ರಮ ಗುರುವಾರ ನಡೆಯಿತು
ಚಿಕ್ಕಮಗಳೂರು ತಾಲ್ಲೂಕಿನ ಆರದಹಳ್ಳಿಯಲ್ಲಿ ಅಂಬು ಹೊಡೆಯುವ ಕಾರ್ಯಕ್ರಮ ಗುರುವಾರ ನಡೆಯಿತು   

ಚಿಕ್ಕಮಗಳೂರು: ಶರನ್ನವರಾತ್ರಿ ಅಂಗವಾಗಿ ಜಿಲ್ಲೆಯಾದ್ಯಂತ ಆಯುಧ ಪೂಜೆ ಮತ್ತು ದಸರಾ ಉತ್ಸವಗಳು ವಿಜೃಂಭಣೆಯಿಂದ ನಡೆದವು. ವಿವಿಧ ದೇವಾಲಯದಲ್ಲಿ 9 ದಿನಗಳಿಂದ ನಡೆದ ನವರಾತ್ರಿ ಉತ್ಸವ ಗುರುವಾರ ಸಂಪನ್ನಗೊಂಡಿತು.

ಪ್ರಮುಖ ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ ಶಾರದ ಪೀಠ, ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ ಹಾಗೂ ಕಳಸೇಶ್ವರ ದೇವಸ್ಥಾನ, ಬಿಂಡಿಗ ದೇವಿರಮ್ಮ ದೇವಸ್ಥಾನದಲ್ಲಿ ವಿಜಯ ದಶಮಿ ದಿನ ವಿಶೇಷ ಪೂಜಾ ಕಾರ್ಯಗಳು ನಡೆದವು. ರಾಜ್ಯದ ಎಲ್ಲೆಡೆಯಿಂದ ಬಂದಿದ್ದ ಭಕ್ತರು ದೇವರ ದರ್ಶನ ಪಡೆದು ಸಂಭ್ರಮಿಸಿದರು.

ನವರಾತ್ರಿ ಅಂಗವಾಗಿ 9 ದಿನಗಳ ಕಾಲ ಬೀಕನಹಳ್ಳಿ ಚಾಮುಂಡೇಶ್ವರಿ ದೇವಸ್ಥಾನ, ಐಡಿಎಸ್‌ಜಿ ಮಹಾಲಕ್ಷ್ಮಿ ದೇವಸ್ಥಾನ, ಬಸವನಹಳ್ಳಿ ಮುಖ್ಯರಸ್ತೆಯ ಶಾರದಾಂಬೆ ದೇವಾಲಯ, ವಿಜಯಪುರ ಬಡಾವಣೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ದುರ್ಗಾದೇವಿ, ಪ್ಲೇಗಿನಮ್ಮ ದೇವಸ್ಥಾನ, ಕುಂಬಾರಬೀದಿ ವೀರಭದ್ರೇಶ್ವರ ದೇವಸ್ಥಾನ, ಶಂಕರಪುರ ಮುತ್ತಿನಮ್ಮ ದೇವಸ್ಥಾನದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು.

ADVERTISEMENT

ಗುರುವಾರ ವಿಜಯ ದಶಮಿ ದಿನ ನವರಾತ್ರಿ ಉತ್ಸವ ಸಂಪನ್ನವಾಯಿತು. ಕೊನೆಯ ದಿನ ವಿಶೇಷ ಪೂಜೆಗಳು ನಡೆದವು. ಅಲಂಕೃತ ದೇವಿ ಮೂರ್ತಿಗಳನ್ನು ನೋಡಲು ಭಕ್ತರು ಜಮಾಯಿಸಿದ್ದರು. ಅದರಲ್ಲೂ ಮಹಿಳಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಿ ಆಶೀರ್ವಾದ ಕೋರಿದರು.

ವಿಜಯದಶಮಿ ಮುನ್ನ ದಿನ ಬುಧವಾರ ಎಲ್ಲೆಡೆ ಆಯುಧ ಪೂಜೆ ಆಚರಿಸಲಾಯಿತು. ಅಂಗಡಿ-ಮುಂಗಟ್ಟು, ಕೈಗಾರಿಕಾ ಕೇಂದ್ರಗಳು ಸೇರಿದಂತೆ ಮನೆಗಳಲ್ಲಿ ಆಯುಧ ಪೂಜೆ ಸಂಭ್ರಮ ಕಳೆಗಟ್ಟಿತ್ತು. ಕೆಎಸ್‌ಆರ್‌ಟಿಸಿ ಡಿಪೊಗಳು, ಪೊಲೀಸ್ ಠಾಣೆ, ಅಗ್ನಿಶಾಮಕ ದಳ ಸೇರಿ ಎಲ್ಲಾ ಇಲಾಖೆಗಳಲ್ಲೂ ಆಯುಧ ಪೂಜೆ ನೆರವೇರಿತು. ಇಲಾಖೆ ವಾಹನಗಳನ್ನು ಬಗೆ ಬಗೆಯ ಹೂಗಳಿಂದ ಸಿಂಗರಿಸಿ ಪೂಜೆ ಮಾಡಲಾಯಿತು.

- ಆರದಹಳ್ಳಿಯಲ್ಲಿ ಅಂಬು ಒಡೆಯುವ ಉತ್ಸವ

ದಸರಾ ನವರಾತ್ರಿ ನಾಡಹಬ್ಬದ ಅಂಗವಾಗಿ ತಾಲ್ಲೂಕಿನ ಅಂಬಳೆ ಹೋಬಳಿಯ ಆರದವಳ್ಳಿ ಗ್ರಾಮದಲ್ಲಿ 28ನೇ ವರ್ಷದ ಅಂಬು ಹೊಡೆಯುವ ಕಾರ್ಯಕ್ರಮ ಗುರುವಾರ ನಡೆಯಿತು. ಗ್ರಾಮಸ್ಥರು ಉತ್ಸವ ಮೂರ್ತಿಯನ್ನು ಹೊತ್ತು ಊರಿನ ಸುತ್ತ ಮೆರವಣಿಗೆ ನಡೆಸಿ ಅಂಬು ಹೊಡೆಯುವ ಸ್ಥಳಕ್ಕೆ ಸಾಗಿದರು.   ಗ್ರಾಮ ದೇವತೆಗಳಿಗೆ ಪೂಜೆ ಸಲ್ಲಿಸಿ ಬನ್ನಿ ಮರದ ಬಳಿ ದಶಮಿ ಪೂಜೆ ನೆರವರಿಸಿದ ನಂತರ ಊರಿನ ದೊಡ್ಡಕೆರೆ ಬಳಿ ಏರ್ಪಡಿಸಿದ್ದ ಅಂಬು ಹೊಡೆಯುವ ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ಪಟೇಲ ವಂಶಸ್ಥ ಎ.ಎನ್.ಮಹೇಶ್ ಬಾಳೆಗೊನೆಗೆ ಬಿಲ್ಲು ಹೊಡೆದು ಬಂದೂಕಿನಿಂದ ಬಾಳೆ ದಿಂಡನ್ನು ತುಂಡರಿಸಿದರು. ಈ ಸಂದರ್ಭದಲ್ಲಿ ಹಾಜರಿದ್ದ ಗ್ರಾಮಸ್ಥರು ಸಂಭ್ರಮಿಸಿದರು. ಈ ವೇಳೆ ಮಾತನಾಡಿದ ಎ.ಎನ್.ಮಹೇಶ್ ‘ವಿಜಯ ದಶಮಿ ಒಂದು ಐತಿಹಾಸಿಕ ಕಾರ್ಯಕ್ರಮ. ವಿಜಯನಗರದ ಅರಸರ ಕಾಲದಿಂದಲೂ ದಸರಾ ಉತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದೆ. ಮೈಸೂರು ಅರಸರ ಕಾಲದಲ್ಲಿ  ಮತ್ತಷ್ಟು ಮಹತ್ವ ಬಂದಿದೆ’ ಎಂದರು. ‘ಸುಮಾರು 100 ವರ್ಷಗಳ ಹಿಂದೆ ಆರದವಳ್ಳಿಯಲ್ಲಿ ಪಟೇಲರಾಗಿದ್ದ ದೊಡ್ಡಪುಟ್ಟೇಗೌಡ ಅವರು ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಅವರ ಮೃತಪಟ್ಟ ನಂತರ ಸ್ಥಗಿತಗೊಂಡಿದ್ದ ದಸರಾ 27 ವರ್ಷಗಳ ಹಿಂದೆ ಮತ್ತೆ ಚಾಲನೆ ನೀಡಲಾಗಿದೆ. ನಿರಂತರವಾಗಿ ನಡೆಯುತ್ತಿದೆ’ ಎಂದರು. ಶಾಸಕ ಎಚ್.ಡಿ.ತಮ್ಮಯ್ಯ ಗ್ರಾಮಸ್ಥರಾದ ಸುರೇಂದ್ರ ಜಗದೀಶ್ ಎ.ಪಿ. ಜಯಣ್ಣ ಕುಮಾರ್ ಲಲಿತಾ‌ ಶಿವಾನಂದ್ ಎಂ. ನಿಂಗೇಗೌಡ ಪಾಪೇಗೌಡ ಷಡಾಕ್ಷರಿ ಚಂದ್ರೇಗೌಡ ಯೋಗೀಶ್ ಸಣ್ಣೇಗೌಡ ವೀರಭದ್ರಚಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.