ADVERTISEMENT

‘ಕಷ್ಟಗಳನ್ನು ಧೃತಿಗೆಡದೆ ಎದುರಿಸಿ’

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 4:04 IST
Last Updated 15 ಜೂನ್ 2022, 4:04 IST
ಚಿಕ್ಕಮಗಳೂರಿನ ಯೂನಿಯನ್ ಆರ್‌ಸೆಟಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಸಿ.ಟಿ. ರವಿ ಮಾತನಾಡಿದರು.
ಚಿಕ್ಕಮಗಳೂರಿನ ಯೂನಿಯನ್ ಆರ್‌ಸೆಟಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಸಿ.ಟಿ. ರವಿ ಮಾತನಾಡಿದರು.   

ಚಿಕ್ಕಮಗಳೂರು: ಅಸಾಧ್ಯವಾದದು ಯಾವುದೂ ಇಲ್ಲ. ಕಷ್ಟಗಳು ಎದುರಾದಾಗ ಧೃತಿಗೆಡದೆ ಎದುರಿಸಬೇಕು ಎಂದು ಶಾಸಕ ಸಿ.ಟಿ.ರವಿ ಕಿವಿಮಾತು ಹೇಳಿದರು. ‌

ಜಿಲ್ಲಾ ಪಂಚಾಯಿತಿ ಮತ್ತು ಯೂನಿಯನ್‌ ಆರ್‌ಸೆಟಿ ವತಿಯಿಂದ ಎನ್‌ಆರ್‌ಎಲ್‌ಎಂ ಸಂಜೀವಿನಿ ಯೋಜನೆಯಡಿ ಮಹಿಳೆಯರಿಗೆ ಏರ್ಪಡಿಸಿದ್ದ ಸ್ವಚ್ಛವಾಹಿನಿ ಚಾಲನಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಮಹಿಳೆಯರು ಪುರುಷರಿಗೆ ಸಮಾನವಾಗಿ ಎಲ್ಲ ಕ್ಷೇತ್ರಗಳಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.

ಕಾರ್ಯನಿರ್ವಹಣೆಯಲ್ಲಿ ಮಹಿಳೆಯರು ಹೆಚ್ಚು ಬದ್ಧತೆ ತೋರುತ್ತಾರೆ. ಈ ನಿಟ್ಟಿನಲ್ಲಿ ಸ್ವಚ್ಛ ವಾಹಿನಿ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿದೆ. ಚಾಲನಾ ತರಬೇತಿ ಪಡೆದ ಮಹಿಳೆಯರು ಯಶಸ್ವಿಯಾಗಿ ಕಾರ್ಯನಿರ್ವಹಿಸಬೇಕು. ವಿಘ್ನಗಳು ಎದುರಾದರೆ ಅವುಗಳನ್ನು ಎದುರಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ಆತ್ಮವಿಶ್ವಾಸ ಇರಬೇಕು. ಎಲ್ಲರೂ ಆತ್ವವಿಶ್ವಾಸದಿಂದ ಸಾಧನೆಯ ಹಾದಿಯಲ್ಲಿ ಹೆಜ್ಜೆ ಇಟ್ಟರೆ ಆತ್ಮನಿರ್ಭರ ಭಾರತ ಸಾಕಾರಗೊಳಿಸಲು ಸಾಧ್ಯ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಜಿಲ್ಲೆಯಲ್ಲಿ 3200 ಕ್ಕೂ ಮಹಿಳಾ ಸ್ವಸಹಾಯ ಸಂಘಗಳಿದ್ದು, 88 ಸಾವಿರ ಮಹಿಳೆಯರು ಈ ಸಂಘಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸರ್ಕಾರದ ವತಿಯಿಂದ ಸವಲತ್ತು ಕಲ್ಪಿಸಿ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಮೊದಲ ಹಂತದಲ್ಲಿ 30 ಮಹಿಳೆಯರಿಗೆ ಸ್ವಚ್ಛ ವಾಹಿನಿ ಚಾಲನಾ ತರಬೇತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ತರಬೇತಿ ಇನ್ನಷ್ಟು ಮಹಿಳೆಯರಿಗೆ ತರಬೇತಿ ಕೊಡಿಸಲಾಗುವುದು. ಜಿಲ್ಲೆಯ ಎಲ್ಲ 227 ಗ್ರಾಮ ಪಂಚಾಯಿತಿಗಳ ಸ್ವಚ್ಛ ವಾಹಿನಿಗಳಿಗೂ ಚಾಲಕಿಯರನ್ನು ನೇಮಿಸಲಾಗುವುದು ಎಂದು ತಿಳಿಸಿದರು.

ಚಾಲನಾ ತರಬೇತಿ ಪಡೆದ ದೀಪಿಕಾ ಮಾತನಾಡಿ, ಚಾಲಕಿ ಆಗುತ್ತೇನೆ ವಾಹನ ಚಲಾಯಿಸುತ್ತೇನೆ ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಚಾಲನೆ ಕಲಿತಿರುವುದು ಬಹಳ ಖುಷಿಯಾಗಿದೆ. ಶಿಬಿರದಲ್ಲಿ ಶಿಸ್ತು, ಸಮಯಪಾಲನೆ, ಉದ್ಯಶೀಲ ಗುಣಗಳು ಮೈಗೂಡಿವೆ ಎಂದು ಹೇಳಿದರು.

ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ವೈ.ಸೋಮಶೇಖರ್‌, ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಇ।.ಪ್ರತಾಪ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಕೆ.ತಾರನಾಥ್‌, ಯೂನಿಯನ್ ಆರ್‌ಸೆಟಿ ನಿರ್ದೇಶಕ ಜಿ.ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.