ADVERTISEMENT

‘ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ಸೂಚನೆ’

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2022, 2:17 IST
Last Updated 5 ಆಗಸ್ಟ್ 2022, 2:17 IST

ನರಸಿಂಹರಾಜಪುರ: ‘ಸಿದ್ದರಾಮಯ್ಯ ತಮ್ಮ ಅಧಿಕಾರದ ಅವಧಿಯಲ್ಲಿ ಭ್ರಷ್ಟಾಚಾರರಹಿತ ಆಡಳಿತ, ರೈತರು, ಕೂಲಿ ಕಾರ್ಮಿಕರ ಪರವಾಗಿ ಕಾರ್ಯಕ್ರಮಗಳನ್ನು ನೀಡಿದ್ದರ ಫಲವೇ ಅವರ 75ನೇ ಜನ್ಮ ದಿನಾಚರಣೆಗೆ ಜನಸಾಗರ ಹರಿದು ಬರಲು ಕಾರಣವಾಯಿತು. ಇದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ಸೂಚನೆಯಾಗಿದೆ’ ಎಂದು ಶಾಸಕ ಟಿ.ಡಿ.ರಾಜೇಗೌಡ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ದಾವಣಗೆರೆಯಲ್ಲಿ ಬುಧವಾರ ನಡೆದ ಕಾರ್ಯಕ್ರಮ ಯಶಸ್ಸು ಕಂಡಿದೆ. ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಇಷ್ಟು ಜನರು ಸೇರಿರುವುದು ನೋಡಿರಲಿಲ್ಲ’ ಎಂದರು.

‘ಬಿಜೆಪಿಯವರಿಗೆ ಅಭಿವೃದ್ಧಿ ಬಗ್ಗೆ ಚಿಂತನೆ ಇಲ್ಲ. ಕೇವಲ ರಾಜಕಾರಣ ಮಾಡುವುದೇ ಅಭಿವೃದ್ಧಿ ಅಂದುಕೊಂಡಿದ್ದಾರೆ. ಕಳೆದ ವರ್ಷ ತಾಲ್ಲೂಕಿನ ಮುತ್ತಿನಕೊಪ್ಪ, ಶೆಟ್ಟಿಕೊಪ್ಪ, ಆಡುವಳ್ಳಿ, ಸೀತೂರು, ಬಾಳೆಹೊನ್ನೂರು ಭಾಗದಲ್ಲಿ ಅತಿವೃಷ್ಟಿಯಿಂದ ತೀವ್ರ ಹಾನಿಯಾಗಿದ್ದು, ಸರ್ಕಾರ ನಯಾಪೈಸೆ ಅನುದಾನ ಬಿಡುಗಡೆ ಮಾಡಿಲ್ಲ’ ಎಂದರು.

ADVERTISEMENT

ಕಾಡು ಪ್ರಾಣಿಗಳ ಹಾವಳಿಯಿಂದ ರೈತರ ಬೆಳೆ ಹಾನಿಯಾಗುತ್ತಿದೆ. ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿಯಿಂದ 25ಕ್ಕೂ ಹೆಚ್ಚು ರೈತರು ಭತ್ತ ಬೆಳೆಯುವುದನ್ನೇ ಬಿಟ್ಟಿದ್ದಾರೆ. ಆನೆಗಳ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು. ರಸಗೊಬ್ಬರದ ಕೊರತೆ ಎದುರಾಗಿದೆ. ಸರ್ಕಾರಿ ಸ್ವಾಮ್ಯದ ಸಹಕಾರ ಸಂಘಗಳಲ್ಲಿ ಗೊಬ್ಬರ ಸಿಗುತ್ತಿಲ್ಲ. ಖಾಸಗಿ ಅಂಗಡಿಯವರಿಗೆ ಸಿಗುತ್ತಿದೆ ಎಂದರು.

ಕಾಂಗ್ರೆಸ್ ಮುಖಂಡರಾದ ಪಿ.ಆರ್.ಸದಾಶಿವ, ಕೆ.ಎಂ.ಸುಂದರೇಶ್, ಪ್ರಶಾಂತ್ ಶೆಟ್ಟಿ, ಜುಬೇದಾ, ಸಾಜು, ಶಿವಣ್ಣ, ಚಿತ್ರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.