ನರಸಿಂಹರಾಜಪುರ: ತಾಲ್ಲೂಕು ವ್ಯಾಪ್ತಿಯಲ್ಲಿ ಕಳೆದ ಏಳೆಂಟು ತಿಂಗಳಿನಿಂದ ಬಿಡುವು ನೀಡದೆ ಸುರಿಯುವ ಮಳೆಯಿಂದ ತಾಲ್ಲೂಕಿನಿಂದ ಹಾದು ಹೋಗಿರುವ ಪ್ರಮುಖ ನಗರ, ಪಟ್ಟಣದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಲವು ಭಾಗಗಳಲ್ಲಿ ಸಂಪೂರ್ಣ ಹದಗೆಟ್ಟಿದ್ದು ಸಂಚಾರಕ್ಕೆ ಸಂಚಕಾರವನ್ನುಂಟು ಮಾಡಿದೆ ಎಂಬ ಮಾತು ಸಾರ್ವಜನಿಕರಲ್ಲಿ ಕೇಳಿಬಂದಿದೆ.
ತಾಲ್ಲೂಕು ಕೇಂದ್ರದಿಂದ ಶಿವಮೊಗ್ಗಕ್ಕೆ ಹೋಗುವ ಮುಖ್ಯರಸ್ತೆಯಲ್ಲಿ ಅಲ್ಲಲ್ಲಿ ಭಾರಿ ಗುಂಡಿ ಬಿದ್ದಿದ್ದು ಪ್ರಯಾಣ ಪ್ರಯಾಸವಾಗಿ ಪರಿಣಮಿಸಿದೆ. ಪಟ್ಟಣದ ಮಿನಿ ವಿಧಾನ ಸೌಧದ ಮೂಲಕ ಹಾದು ಹೋಗಿರುವ ಬೈಪಾಸ್ ರಸ್ತೆಯಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಮುಂಭಾಗದ ರಸ್ತೆಯಲ್ಲಿ ಭಾರಿ ಗಾತ್ರದ ಗುಂಡಿ ಬಿದ್ದಿದ್ದು ದ್ವಿಚಕ್ರ ವಾಹನಗಳಲ್ಲಿ ಓಡಾಡದ ಸ್ಥಿತಿಯಿದೆ. ಒಂದೆರೆಡು ಕಿ.ಮೀ ಬೈಪಾಸ್ ರಸ್ತೆಯಲ್ಲಿ ಐದಾರು ಕಡೆ ರಸ್ತೆ ಸಂಪೂರ್ಣ ಹಾಳಾಗಿದೆ. ಗುಂಡಿ ಮುಚ್ಚುವ ಕೆಲಸ ಕೈಗೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಶಿವಮೊಗ್ಗಕ್ಕೆ ಹೋಗುವ ರಸ್ತೆ ತೋಟಗಾರಿಕೆ ಇಲಾಖೆಯ ಸಮೀಪ ಭಾರಿ ಗುಂಡಿ ಬಿದ್ದಿದೆ. ಕರಗುಂದ ಗ್ರಾಮದ ವ್ಯಾಪ್ತಿ, ಶೆಟ್ಟಿಕೊಪ್ಪ ಗ್ರಾಮದ ವ್ಯಾಪ್ತಿಯಲ್ಲಿ ರಸ್ತೆ ತುಂಬಾ ಗುಂಡಿ ಬಿದ್ದಿವೆ. ಮಡಬೂರು ಗ್ರಾಮದ ದೇವಸ್ಥಾನದ ಸಮೀಪ ಹೊಸದಾಗಿ ನಿರ್ಮಿಸಿರುವ ಸೇತುವೆ ಮೇಲಿನ ರಸ್ತೆ ತುಂಬಾ ಗುಂಡಿ ಬಿದ್ದಿದ್ದು ಕಳೆದ ಕೆಲವು ತಿಂಗಳ ಹಿಂದೆ ವಾಹನವೊಂದು ಗುಂಡಿ ತಪ್ಪಿಸಲು ಹೋಗಿ ಪಾದಚಾರಿಯೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟರು. ಈ ಘಟನೆಯ ನಂತರ ರಸ್ತೆಗೆ ವೆಟ್‌ಮಿಕ್ಸ್ ಹಾಕಲಾಗಿದ್ದರೂ ಭಾರಿ ಮಳೆಗೆ ಇದು ಕೊಚ್ಚಿಕೊಂಡು ಹೋಗಿ ಗುಂಡಿಗಳು ಹಾಗೆ ಉಳಿದಿವೆ.
ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ಕಚೇರಿ ಸಮೀಪ, ಚರ್ಚ್ ಸಮೀಪದ ಮುಖ್ಯರಸ್ತೆ ಗುಂಡಿಮಯವಾಗಿದೆ. ಇದೇ ಗ್ರಾಮದ ಸಂಜೀವಿನಿ ಶಾಲೆಯ ಮುಂಭಾಗದ ರಸ್ತೆ ಗುಂಡಿಗಳಿಂದಲೇ ತುಂಬಿದೆ. ಮಳೆ ಬಂದಾಗ ಗುಂಡಿ ತುಂಬಾ ನೀರು ತುಂಬಿಕೊಳ್ಳುವುದರಿಂದ ವಾಹನ ಚಾಲನೆ ಸವಾಲಾಗಿದೆ. ನರಸಿಂಹರಾಜಪುರದಿಂದ ಶಿವಮೊಗ್ಗ ಜಿಲ್ಲಾ ಕೇಂದ್ರಕ್ಕೆ 55 ಕಿ.ಮೀ ಇದ್ದು ಹಿಂದೆ ರಸ್ತೆ ಉತ್ತಮವಾಗಿದ್ದಾಗ 1 ಗಂಟೆಯಲ್ಲಿ ಶಿವಮೊಗ್ಗಕ್ಕೆ ಹೋಗಬಹುದಿತ್ತು. ಈಗ 1.30 ಗಂಟೆಗೂ ಅಧಿಕ ಅವಧಿ ತಗಲುತ್ತದೆ ಎನ್ನುತ್ತಾರೆ ವಾಹನ ಚಾಲಕರು.
ಯಾವುದೇ ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಶಿವಮೊಗ್ಗದ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗುವುದು ಸಾಮಾನ್ಯ. ಆದರೆ ರಸ್ತೆ ಹದಗೆಟ್ಟಿರುವುದು ವೇಗವಾಗಿ ಆಂಬುಲೆನ್ಸ್ ಚಾಲನೆ ಮಾಡಲು ಸಮಸ್ಯೆಯಾಗಿದೆ.
ತಾಲ್ಲೂಕು ಕೇಂದ್ರದಿಂದ ಕೊಪ್ಪಕ್ಕೆ ಹೋಗುವ ರಸ್ತೆ ಬಿ.ಎಚ್.ಕೈಮರದ ಅಯ್ಯಪ್ಪಸ್ವಾಮಿ ದೇವಸ್ಥಾನದ ಮುಂಭಾಗ, ಅರಣ್ಯ ಇಲಾಖೆಯ ತಪಾಸಣಾ ಗೇಟ್ ವ್ಯಾಪ್ತಿಯಲ್ಲಿ ಗುಂಡಿ ಬಿದ್ದಿದೆ. ಕುದುರೆಗುಂಡಿ ಸೇತುವೆ ವ್ಯಾಪ್ತಿ ಹಾಗೂ ಕುದುರೆಗುಂಡಿ ಗ್ರಾಮದ ವ್ಯಾಪ್ತಿಯಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಪ್ರಯಾಣ ಬೆಳೆಸುವುದೇ ಪ‍್ರಯಾಸವಾಗಿ ಪರಿಣಮಿಸಿದೆ.
ಕಳೆದ ಎರಡು ವರ್ಷಗಳ ಹಿಂದೆ ತಾಲ್ಲೂಕು ವ್ಯಾಪ್ತಿಯಲ್ಲಿ ರಸ್ತೆಗಳ ಗುಂಡಿ ಮುಚ್ಚುವ ಕಾಮಗಾರಿ ಕೈಗೊಳ್ಳಲಾಗಿತ್ತು. ಈ ಕಾಮಗಾರಿಯ ಗುತ್ತಿಗೆಯನ್ನು ಮೂಡಿಗೆರೆ ತಾಲ್ಲೂಕಿನ ಗುತ್ತಿಗೆದಾರರೊಬ್ಬರು ಕಳಪೆ ಕಾಮಗಾರಿ ನಿರ್ವಹಿಸಿದ್ದು ರಸ್ತೆ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಲು ಕಾರಣ ಎಂಬ ಆರೋಪವಿದೆ. ಕೆಲ ಗ್ರಾಮಗಳಲ್ಲಿ ಮಳೆಯ ನೀರು ರಸ್ತೆಯ ಚರಂಡಿಯಲ್ಲಿ ಹರಿಯಲು ವ್ಯವಸ್ಥೆಯಿಲ್ಲದೆ, ರಸ್ತೆಯ ಮೇಲೆ ಹರಿಯುವುದರಿಂದಲೂ ರಸ್ತೆ ಶಿಥಿಲವಾಗುತ್ತಿವೆ ಎಂದು ವಾಹನ ಸವಾರರು ತಿಳಿಸುತ್ತಾರೆ.
ರಸ್ತೆಯ ತುಂಬಾಗುಂಡಿ ಇರುವುದರಿಂದ ವಾಹನಗಳು ಪದೇಪದೇ ರಿಪೇರಿಗೆ ಬರುತ್ತಿವೆ. ಇದರಿಂದ ಸಾಕಷ್ಟು ನಷ್ಟವುಂಟಾಗುತ್ತಿದೆ. ಕನಿಷ್ಠ ಗುಂಡಿ ಮುಚ್ಚುವ ಕಡೆಯಾದರೂ ಸರ್ಕಾರ ಗಮನಹರಿಸಬೇಕೆಂದು ಜೈ ಭುವನೇಶ್ವರಿ ಆಟೋಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಮಧುಸೂದನ್ ಆಗ್ರಹಿಸುತ್ತಾರೆ.
ರಸ್ತೆಯ ಗುಂಡಿಗಳನ್ನು ಮುಚ್ಚಲು ಮತ್ತು ದುರಸ್ತಿಪಡಿಸಲು ಗುಣಮಟ್ಟದ ಕಾಮಗಾರಿ ಕೈಗೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಮುತ್ತಿನಕೊಪ್ಪ ಜನಜಾಗೃತಿ ವೇದಿಕೆ ಅಧ್ಯಕ್ಷ ಸಿ.ಎಲ್.ಮನೋಹರ್ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.