ADVERTISEMENT

ಆನ್‌ಲೈನ್‌ನಲ್ಲಿ ₹ 2.75 ಲಕ್ಷ ವಂಚನೆ: ದೂರು

ಪಾರ್ಟ್‌ ಟೈಂ ಜಾಬ್‌ ನೀಡುವುದಾಗಿ ನಂಬಿಸಿ ಮೋಸ

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 5:33 IST
Last Updated 26 ಜನವರಿ 2023, 5:33 IST

ಚಿಕ್ಕಮಗಳೂರು: ಪಾರ್ಟ್‌ ಟೈಂ ಜಾಬ್‌ ನೀಡುವುದಾಗಿ ನಂಬಿಸಿ ಆನ್‌ಲೈನ್‌ನಲ್ಲಿ ₹ 2.75 ಲಕ್ಷ ಪಾವತಿಸಿಕೊಂಡು ವಂಚನೆ ಮಾಡಿದ್ದಾರೆ ಎಂದು ಎಂಜಿನಿಯರ್‌ ಶಾಮ್‌ ಎಂ.ಜೇಮ್ಸ್‌ ಎಂಬವರು ದೂರು ದಾಖಲಿಸಿದ್ದಾರೆ.

ಎನ್‌.ಆರ್‌.ಪುರ ತಾಲ್ಲೂಕಿನ ಸುಟ್ಟಾ ಗ್ರಾಮದ ಶಾಮ್‌ ಅವರು ನಗರದ ಸಿಇಎನ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆ 66(ಸಿ)(ಡಿ),ಐಪಿಸಿ 420 (ವಂಚನೆ) ಪ್ರಕರಣ ದಾಖಲಾಗಿದೆ.

ದೂರಿನ ವಿವರ ಇಂತಿದೆ: ವರ್ಕ್‌ ಫ್ರಂ ಹೋಂ (ಮನೆಯಿಂದಲೇ ಕೆಲಸ) ನೌಕರಿ ಡಾಟ್‌ ಕಾಂನಲ್ಲಿ ನೋಂದಾಯಿಸಿದ್ದೆ. 9727863860 ನಂಬರ್‌ನಿಂದ ಪಾರ್ಟ್‌ ಟೈಂ ಜಾಬ್‌ ನೀಡುವುದಾಗಿ ವ್ಯಾಟ್ಸ್‌ ಅಪ್‌ನಲ್ಲಿ ಸಂದೇಶ ಬಂದಿತ್ತು.

ADVERTISEMENT

ಕಳಿಸುವ ವಿಡಿಯೊ ಲಿಂಕ್‌ ಲೈಕ್ ಮಾಡಿ ಸಬ್‌ಸ್ಕ್ರೈಬ್‌ ಮಾಡಬೇಕು, ಒಂದು ಲಿಂಕ್‌ಗೆ ₹ 50ನೀಡುವುದಾಗಿ ಸಂದೇಶದಲ್ಲಿ ತಿಳಿಸಿದ್ದರು. ಲಿಂಕ್‌ ಕ್ಲಿಕ್‌, ಸಬ್‌ಸ್ಕ್ರೈಬ್‌ ಮಾಡಿದ್ದಕ್ಕೆ ಖಾತೆಗೆ ₹ 10 ಸಾವಿರ ಪಾವತಿಸಿದ್ದರು.

ನಂತರ ಟೆಲಿಗ್ರಾಂನಲ್ಲಿ ಸಂದೇಶ ಕಳಿಸಿ ಬೇರೆ ಟಾಸ್ಕ್‌ ನೀಡಿದರು. ₹ 3 ಸಾವಿರ ಪಾವತಿಸಿದ್ದಕ್ಕೆ ₹ 3,900 ಹಣವನ್ನು ಖಾತೆಗೆ ಜಮೆ ಮಾಡಿದರು. ಬಳಿಕ ಹಂತಹಂತವಾಗಿ ಟಾಸ್ಕ್‌ ಹೆಸರಿನಲ್ಲಿ ವಿವಿಧ ಬ್ಯಾಂಕ್‌ ಖಾತೆಗೆ ₹ 2.75 ಲಕ್ಷ ಪಾವತಿಸಿಕೊಂಡು, ವಾಪಸ್‌ ಕೊಟ್ಟಿಲ್ಲ. ಮತ್ತೆ ₹ 1.80 ಲಕ್ಷ ಹಣ ಹಾಕುವಂತೆ ಸಂದೇಶ ಕಳಿಸಿದ್ದರು. ಪಾರ್ಟ್‌ ಟೈಂ ಜಾಬ್‌ ನೀಡುವುದಾಗಿ ನಂಬಿಸಿ ಆನ್‌ಲೈನ್‌ನಲ್ಲಿ ಹಣ ಪಾವತಿಸಿಕೊಂಡು ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.