ADVERTISEMENT

ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆ ಮಂದಗತಿ

3 ಕಡೆ ಕಾಮಗಾರಿ ಶುರು; 4 ಕಡೆ ಆರಂಭಕ್ಕೆ ಮೀನಮೇಷ

ಬಿ.ಜೆ.ಧನ್ಯಪ್ರಸಾದ್
Published 31 ಜುಲೈ 2021, 16:38 IST
Last Updated 31 ಜುಲೈ 2021, 16:38 IST
ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಯಲ್ಲಿನ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆಗೆ ಕೊಠಡಿ ಸಜ್ಜುಗೊಳಿಸುವ ಕಾಮಗಾರಿ ನಡೆಯುತ್ತಿದೆ.
ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಯಲ್ಲಿನ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆಗೆ ಕೊಠಡಿ ಸಜ್ಜುಗೊಳಿಸುವ ಕಾಮಗಾರಿ ನಡೆಯುತ್ತಿದೆ.   

ಚಿಕ್ಕಮಗಳೂರು: ಜಿಲ್ಲೆಯಲ್ಲಿ ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕಗಳ ಸ್ಥಾಪನೆ ಪ್ರಕ್ರಿಯೆ ಮಂದಗತಿಯಲ್ಲಿ ಸಾಗಿದೆ. ಜಿಲ್ಲಾಸ್ಪತ್ರೆ, ಕಡೂರು, ಶೃಂಗೇರಿ ತಾಲ್ಲೂಕು ಆಸ್ಪತ್ರೆಗಳಲ್ಲಿ ಸಿವಿಲ್‌ ಕಾಮಗಾರಿ ಆರಂಭಿಸಲಾಗಿದೆ, ಇತರ ತಾಲ್ಲೂಕುಗಳಲ್ಲಿ ಪ್ರಕ್ರಿಯೆ ಶುರುವಾಗಿಲ್ಲ.

ಜಿಲ್ಲಾಸ್ಪತ್ರೆಯಲ್ಲಿ 1000 ಎಲ್‌ಪಿಎಂ, ತಾಲ್ಲೂಕು ಆಸ್ಪತ್ರೆಗಳಲ್ಲಿ 500 ಎಲ್‌ಪಿಎಂ ಉತ್ಪಾದನಾ ಸಾಮರ್ಥ್ಯದ ಘಟಕಗಳ ಸ್ಥಾಪನೆಗೆ ಉದ್ದೇಶಿಸಲಾಗಿದೆ. ಶೃಂಗೇರಿ ತಾಲ್ಲೂಕು ಆಸ್ಪತ್ರೆ ಘಟಕಕ್ಕೆ ‘ಪಿಎಂ (ಪ್ರಧಾನಮಂತ್ರಿ) ಕೇರ್‌’ ನಿಧಿ ಹಾಗೂ ಬಾಕಿ ಐದು ಘಟಕಗಳಿಗೆ ವಿವಿಧ ಸಂಸ್ಥೆಗಳ ಸಿಎಸ್‌ಆರ್ (ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆ) ನಿಧಿಯಿಂದ ಅನುದಾನ ಒದಗಿಸಲು ವ್ಯವಸ್ಥೆಯಾಗಿದೆ.

ಜಿಲ್ಲಾಸ್ಪತ್ರೆಯಲ್ಲಿ ಘಟಕ ನಿರ್ಮಾಣ ನಿಟ್ಟಿನಲ್ಲಿ ಸಿವಿಲ್‌ ಕಾಮಗಾರಿ ನಡೆಯುತ್ತಿದೆ. ಚೆನ್ನೈ ಆಯಿಲ್‌ ಕಾರ್ಪೊರೇಷನ್‌ ಸಂಸ್ಥೆಯ ಸಿಎಸ್ಆರ್‌ ನಿಧಿಯಿಂದ ಉಪಕರಣಗಳು ಪೂರೈಕೆಯಾಗಬೇಕಿದೆ. ಕಡೂರು, ಶೃಂಗೇರಿಯಲ್ಲಿ ಕಟ್ಟಡ ನಿರ್ಮಾಣ ಇನ್ನು ತಳಪಾಯದ ಹಂತದಲ್ಲಿದೆ.

ADVERTISEMENT

‘ಘಟಕದ ಸಿವಿಲ್‌ ಕಾಮಗಾರಿಗೆ ಸ್ಥಳೀಯ ಅನುದಾನದ ವ್ಯವಸ್ಥೆ ಮಾಡಿಕೊಳ್ಳಬೇಕು. ಉಪಕರಣಗಳನ್ನು ವಿವಿಧ ಸಂಸ್ಥೆಗಳ ಸಿಎಸ್‌ಆರ್‌ ನಿಧಿಯಿಂದ ಒದಗಿಸಲಾಗುತ್ತದೆ. ಒಂದು ಘಟಕದ ಸ್ಥಾಪನೆಗೆ ಅಂದಾಜು ಒಂದು ಕೋಟಿ ವೆಚ್ಚವಾಗಲಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಉಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ಜಿಲ್ಲಾಸ್ಪತ್ರೆ, ಹೋಲಿ ಕ್ರಾಸ್‌ ಆಸ್ಪತ್ರೆಗಳಲ್ಲಿ ಆರು ಸಾವಿರ ಲೀಟರ್‌ ಸಾಮರ್ಥ್ಯದ ಆಮ್ಲಜನಕ ಸಂಗ್ರಹ ಘಟಕಗಳು ಇವೆ. ಐದು ದಿನಗಳಿಗೊಮ್ಮೆ ತುಂಬಿಸಲಾಗುತ್ತಿದೆ. ಉತ್ಪಾದನಾ ಘಟಕದ ಸ್ಥಾಪಿಸಿದರೆ ವೈದ್ಯಕೀಯ ಆಮ್ಲಜನಕ ಖರೀದಿಸುವುದು ತಪ್ಪುತ್ತದೆ.
ಜಿಲ್ಲಾಸ್ಪತ್ರೆಯಲ್ಲಿ ಪ್ರಸ್ತುತ ಆಮ್ಲಜನಕ ಪೂರೈಕೆ ಸೌಕರ್ಯದ196 ಹಾಸಿಗೆಗಳ ವ್ಯವಸ್ಥೆ ಇದೆ. ಉತ್ಪಾದನಾ ಘಟಕ ಕಾರ್ಯಗತವಾದರೆ ಇನ್ನು 150 ಹಾಸಿಗೆಗಳಿಗೆ ಆಮ್ಲಜನಕ ಪೂರೈಕೆ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಲಿದೆ.

‘ಕೋವಿಡ್‌ ಮೂರನೇ ಅಲೆ ಎದುರಾಗುವ ಸಂಭವ ಇದೆ. ಹೀಗಾಗಿ, ಆಮ್ಲಜನಕ ಉತ್ಪಾದನಾ ಘಟಕಗಳ ಸ್ಥಾಪನೆ ಪ್ರಕ್ರಿಯೆ ಚುರುಕುಗೊಳಿಸಬೇಕು. ಕಳೆದ ಬಾರಿ ಆಮ್ಲಜನಕ ಸಮಸ್ಯೆಯಾಗಿತ್ತು, ಅಂಥ ಸಮಸ್ಯೆಗಳು ಮರುಕಳಿಸದಂತೆ ನಿರ್ವಹಿಸಲು ಈಗಲೇ ಸನ್ನದ್ಧರಾಗುವುದು ಒಳ್ಳೆಯದು’ ಎಂಬುದು ಸ್ಪಂದನ ಕ್ಲಿನಿಕ್‌ ವೈದ್ಯ ಡಾ.ಸಂತೋಷ್‌ ನೇತಾ ಸಲಹೆ.
‘ಉತ್ಪಾದನಾ ಘಟಕ ಸಜ್ಜುಗೊಳಿಸಿದ ನಂತರ ಕಾರ್ಯಾಚರಣೆಗೆ 15 ದಿನ ಹಿಡಿಯುತ್ತದೆ. ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುವುದು ಬೇಡ, ತ್ವರಿತವಾಗಿ ಕಾಮಗಾರಿ ಮುಗಿಸಬೇಕು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.