ADVERTISEMENT

ಪಂಚಾಯಿತಿ ಕಣ; ಪ್ರತಿಷ್ಠೆಯೇ ಪಣ

ಗೆಲುವಿನ ಗೆರೆ ದಾಟಲು ಅಭ್ಯರ್ಥಿಗಳ ಕಸರತ್ತು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 3:38 IST
Last Updated 19 ಡಿಸೆಂಬರ್ 2020, 3:38 IST
ಸರಸ್ವತಿಪುರ ಗ್ರಾಮ ಪಂಚಾಯಿತಿ ಕಚೇರಿ
ಸರಸ್ವತಿಪುರ ಗ್ರಾಮ ಪಂಚಾಯಿತಿ ಕಚೇರಿ   

ಬೀರೂರು: ಗ್ರಾಮ ಪಂಚಾಯಿತಿ ಚುನಾವಣೆಯ ಮತದಾನದ ದಿನ ಹತ್ತಿರ ವಾಗುತ್ತಿರುವಂತೆ ಅಭ್ಯರ್ಥಿಗಳಿಂದ ಮತ ಬೇಟೆ ಬಿರುಸುಗೊಂಡಿದೆ. ವಿವಿಧ ಮಾರ್ಗಗಳ ಮೂಲಕ ಗೆಲುವಿನ ಗೆರೆ ದಾಟಲು ಕಸರತ್ತು ನಡೆಸಿರುವ ಅಭ್ಯರ್ಥಿಗಳು ಮತದಾರರ ಮನೆಮನೆಗೆ ಎಡತಾಕುವ ಜತೆಗೆ ಓಲೈಕೆ ಹೇಗೆ ಎನ್ನುವ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ.

ಅಧಿಕಾರದಲ್ಲಿ ಇದ್ದವರು, ಅಧಿಕಾರ ಹಿಡಿಯಲು ಬಯಸುವವರು ತಮ್ಮ ವಾರ್ಡಿನ ಪ್ರತಿ ಮತದಾರರನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ. ಬೀರೂರಿನಲ್ಲಿ ಹೊಸ ಬೆಳವಣಿಗೆ ಎಂದರೆ ಹಳ್ಳಿಗಳ ಸಾಕಷ್ಟು ‘ಸಮಾನ ಮನಸ್ಕರು’ ಪಟ್ಟಣಗಳಲ್ಲಿ ಗುಂಪಾಗಿ ಬಂದು, ಅಭ್ಯರ್ಥಿಗಳ, ಮುಖಂಡರ ಜತೆ ಚರ್ಚೆ ನಡೆಸುವ ಸನ್ನಿವೇಶಗಳು ಸಾಮಾನ್ಯವಾಗುತ್ತಿವೆ.

ರಾತ್ರಿ ವೇಳೆ ಕೂಡಾ ಕಡೂರು- ಬೀರೂರು ಸೇರಿದಂತೆ ಹಲವೆಡೆ ಚುನಾವಣೆ ವಿಷಯವಾಗಿ ಗುಂಪುಗೂಡಿ ಚರ್ಚಿಸುವವರ, ಕಾರ್ಯತಂತ್ರ ಹೆಣೆಯುವವರ ಚಟುವಟಿಕೆ ಬಿರುಸಾಗಿಯೇ ಸಾಗಿದೆ. ಪರಸ್ಥಳದಲ್ಲಿ ವಾಸವಿರುವವರನ್ನು ಸಂಬಂಧಿಕರ ಮೂಲಕ ಒಲಿಸಿಕೊಳ್ಳುವ, ‘ಬಂದು ಹೋಗುವ’ ವ್ಯವಸ್ಥೆ ಮಾಡಿಕೊಟ್ಟು ಮತಗಟ್ಟಿ ಮಾಡಿಕೊಳ್ಳುವ ಯತ್ನಗಳೂ ತೆರೆಮರೆಯಲ್ಲಿ ನಡೆಯುತ್ತಿದೆ.

ADVERTISEMENT

ಕಡೂರು ತಾಲ್ಲೂಕಿನ 49 ಗ್ರಾಮ ಪಂಚಾಯಿತಿಗಳಲ್ಲಿ ಸದ್ಯ ಇದೇ ವಾತಾವರಣ ಇದೆ. ನೀತಿ ಸಂಹಿತೆಯು ಸರ್ಕಾರ ಮತ್ತು ಜನಪ್ರತಿನಿಧಿಗಳಿಗೆ ಸೀಮಿತ ವಾಗಿದ್ದರೆ, ಹಿಂಬಾಲಕರ ಮೂಲಕ ಪರಿಸ್ಥಿತಿ ಹತೋಟಿಗೆ ತೆಗೆದು ಕೊಳ್ಳುವ ಎಲ್ಲ ರೀತಿಯ ತಂತ್ರಗಾರಿಕೆ ಎದ್ದು ಕಾಣುತ್ತಿದೆ.

ಈ ಬಾರಿಯ ಚುನಾವಣಾ ಅಖಾಢ ಸಾಕಷ್ಟು ಕುತೂಹಲಗಳಿಗೂ ಸಾಕ್ಷಿಯಾಗುತ್ತಿದೆ. ಬಾಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಬಾಸೂರು (ಎಸ್.ಸಿ ಮೀಸಲು) ಗ್ರಾಮದಲ್ಲಿ ಅತ್ತೆ- ಸೊಸೆ (ಮೈದುನನ ಮಗನ ಹೆಂಡತಿ) ಪರಸ್ಪರ ಎದುರಾಳಿಗಳು. ನಾಮಪತ್ರ ಸಲ್ಲಿಸುವ ಸಂದರ್ಭದಿಂದಲೂ ಯಾರು- ಯಾರನ್ನು ಬೆಂಬಲಿಸಬಹುದು ಎಂಬ ಚರ್ಚೆ ನಡೆಯುತ್ತಿದೆ.

ಸಾಮಾನ್ಯ ವರ್ಗಕ್ಕೆ ಮೀಸಲಿರುವ ಕ್ಷೇತ್ರದಲ್ಲಿ ಪರಿಶಿಷ್ಟ ಅಭ್ಯರ್ಥಿಯೂ (ಮಾಜಿ ಸದಸ್ಯ) ಕಣದಲ್ಲಿ ಪೈಪೋಟಿ ನೀಡುತ್ತಿದ್ದಾರೆ. ಸಾಮಾನ್ಯ ವರ್ಗಕ್ಕೆ ಮೀಸಲಿರುವ ಗಿರಿಯಾಪುರ ಗ್ರಾಮದಲ್ಲಿ ಲಿಂಗಾಯತರೇ ಹೆಚ್ಚು ಮತದಾರರು. ಇಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರೊಬ್ಬರು ಗ್ರಾಮ ಪಂಚಾಯಿತಿ ಚುನಾವಣೆ ಕಣಕ್ಕಿಳಿದು ಅಖಾಢ ರಂಗೇರಿದೆ.

‘ಸಮುದಾಯಗಳಿಗೆ ಹಣ ಹಂಚುವ ಬದಲು ದೇವಾಲಯಗಳ ಅಭಿವೃದ್ಧಿಗೆ ಇಂತಿಷ್ಟು ಎಂದು ‘ಮೀಸಲು’ ನೀಡುವ ಬುದ್ಧಿವಂತರಿಗೇನೂ ಕಡಿಮೆ ಇಲ್ಲ. ಹೀಗೆ ಮಾಡುವ ಮೂಲಕ ಮತದಾರರನ್ನು ಒಂದು ನಿರ್ಬಂಧಕ್ಕೆ ಸಿಲುಕಿಸಬಹುದು ಎನ್ನುವುದು ಅಭ್ಯರ್ಥಿಗಳ ಲೆಕ್ಕಾಚಾರ. ಪಕ್ಷಗಳ ಕಾರ್ಯಕರ್ತರ ಬದಲಾಗಿ ಸಂಬಂಧಿಕರು, ನೆಂಟರಿಷ್ಟರು ತಮಗೆ ಬೇಕಾದವರನ್ನು ಗೆಲ್ಲಿಸಿಕೊಳ್ಳಲು ಮುಂದೆ ನಿಲ್ಲುತ್ತಿರುವುದು ಪ್ರಜಾ ಪ್ರಭುತ್ವದ ಚಿತ್ರಣವನ್ನೇ ಬದಲಿಸಲಿದೆ. ಚುನಾವಣೆ ಹತ್ತಿರವಾದಂತೆ ಹಣ ಮತ್ತು
ಜಾತಿ ತೀವ್ರ ಪರಿಣಾಮ ಬೀರಲಿವೆ’ ಎನ್ನುತ್ತಾರೆ ಯಗಟಿಯ ಹಿರಿಯ ಮತದಾರ ಜೆ.ಎ. ನಾಗರಾಜ.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು ಎನ್ನುವುದು ಡಾ.ಅಂಬೇಡ್ಕರ್ ಆಶಯವಾಗಿತ್ತು. ಸಮಾಜವು ಹೆಚ್ಚು ಸುಶಿಕ್ಷಿತವಾಗಬೇಕು, ಹಳ್ಳಿಗಳ ನಗರೀಕರಣವಾಗಬೇಕು ಎನ್ನುವ ಅವರ ಕನಸೇನೋ ಈಡೇರಿದೆ. ಆದರೆ, ಪರಿಣಾಮವಾಗಿ ಸುಶಿಕ್ಷಿತರು ಆಮಿಷಕ್ಕೆ ಬಲಿಯಾಗದೆ ಒಮ್ಮಸ್ಸಿನಿಂದ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡುವರು ಎನ್ನುವ ನಿರೀಕ್ಷೆ ಹುಸಿಹೋಗಿದೆ’ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಸದಸ್ಯ ಮಹೇಶ್ ಒಡೆಯರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.