ADVERTISEMENT

ಪ.ಪಂ 3ರಲ್ಲಿ ಬಿಜೆಪಿ, 1ರಲ್ಲಿ ಕಾಂಗ್ರೆಸ್‌ ಪಾರಮ್ಯ; ಕಡೂರು ಪುರಸಭೆ ಅತಂತ್ರ

ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 31 ಮೇ 2019, 14:46 IST
Last Updated 31 ಮೇ 2019, 14:46 IST
ಜೀವರಾಜ್‌
ಜೀವರಾಜ್‌   

ಚಿಕ್ಕಮಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಜಿಲ್ಲೆಯ ನಾಲ್ಕು ಪಟ್ಟಣ ಪಂಚಾಯಿತಿಗಳ ಪೈಕಿ ಬಿಜೆಪಿ ಮೂರು, ಕಾಂಗ್ರೆಸ್‌ ಒಂದರಲ್ಲಿ ಪಾರಮ್ಯ ಸಾಧಿಸಿದೆ. ಕಡೂರು ಪುರಸಭೆಯಲ್ಲಿ ಯಾರಿಗೂ ಬಹುಮತ ಲಭ್ಯವಾಗದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಶೃಂಗೇರಿ, ಕೊಪ್ಪ, ಮೂಡಿಗೆರೆ ಪಟ್ಟಣ ಪಂಚಾಯಿತಿಗಳಲ್ಲಿ ಬಿಜೆಪಿ ಪಾರಮ್ಯ, ಎನ್‌.ಆರ್‌.ಪುರದಲ್ಲಿ ಕಾಂಗ್ರೆಸ್‌ ಪಾರುಪತ್ಯ ಸಾಧಿಸಿದೆ.
ಕಡೂರು ಪುರಸಭೆಯಲ್ಲಿ ಹಿಂದಿನ ಬಾರಿಗೆ ಹೋಲಿಸಿದರೆ ಕಾಂಗ್ರೆಸ್‌ ಬಲ ಕುಗ್ಗಿದೆ. ಬಿಜೆಪಿ ಬಲ ಕೊಂಚ ಹೆಚ್ಚಾಗಿದೆ. ಜೆಡಿಎಸ್‌ ಆರಕ್ಕೇರದೆ ಮೂರಕ್ಕಿಳಿಯದೆ ಯಥಾಸ್ಥಿತಿಯಲ್ಲಿದೆ. ನಾಲ್ವರು ಪಕ್ಷೇತರರು ಗೆಲುವು ಸಾಧಿಸಿದ್ದಾರೆ. ಇಲ್ಲಿ ಪಕ್ಷೇತರರೇ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಇದೆ.

ಮೂಡಿಗೆರೆ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಪಾರಮ್ಯ ಸಾಧಿಸಿದೆ. ಕಾಂಗ್ರೆಸ್‌ ಬಲ ಕುಸಿದಿದೆ. ಇಲ್ಲಿ ಜೆಡಿಎಸ್‌ ಖಾತೆ ತೆರೆದು, ಒಂದು ಸ್ಥಾನದಲ್ಲಿ ಜಯಗಳಿಸಿದೆ. ಜೆಡಿಎಸ್‌ ಜಿಲ್ಲಾಧ್ಯಕ್ಷ ರಂಜನ್‌ ಅವರ ಪತ್ನಿ ಇಲ್ಲಿ ಗೆದ್ದಿದ್ದಾರೆ.

ADVERTISEMENT

ಕೊಪ್ಪ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಪಾರುಪತ್ಯ ಸಾಧಿಸಿದೆ. ಕಾಂಗ್ರೆಸ್‌ ಯಥಾಸ್ಥಿತಿಯಲ್ಲಿದೆ. ಇನ್ನು ಪಕ್ಷೇತರರೊಬ್ಬರು ಗೆಲುವು ಸಾಧಿಸಿದ್ದಾರೆ. ಖಾತೆ ತೆರೆಯಲು ಜೆಡಿಎಸ್‌ಗೆ ಸಾಧ್ಯವಾಗಿಲ್ಲ.

ಎನ್.ಆರ್‌.ಪುರ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್‌ 9 ಸ್ಥಾನ ಪಡೆದು ಭರ್ಜರಿ ಜಯಭೇರಿ ಬಾರಿಸಿದೆ. ಬಿಜೆಪಿ ಎರಡು ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಗಿದೆ. ಜೆಡಿಎಸ್‌ ಮತ್ತು ಪಕ್ಷೇತರರು ಇಲ್ಲಿ ಮಕಾಡೆ ಮಲಗಿದ್ದಾರೆ.

ಶೃಂಗೇರಿ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಪಾರಮ್ಯ ಸಾಧಿಸಿದ್ದರೂ ಈ ಬಾರಿ ಕೊಂಚ ಬಲ ಕಡಿಮೆಯಾಗಿದೆ. ಕಾಂಗ್ರೆಸ್‌ ಮೂರು ಸ್ಥಾನ ಪಡೆದಿದೆ. ಪಕ್ಷೇತರ ಒಬ್ಬರು ಗೆಲುವು ಸಾಧಿಸಿದ್ದಾರೆ. ಹಿಂದಿನ ಬಾರಿ ಬಿಜೆಪಿ 11 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಇತರರನ್ನು ಕ್ಲೀನ್‌ ಸ್ವೀಪ್‌ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.