ADVERTISEMENT

ಹಣ ದುರುಪಯೋಗ, ಕರ್ತವ್ಯ ಲೋಪ ಆರೋಪ: ಪಿಡಿಒ ಅಮಾನತು

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 6:21 IST
Last Updated 19 ಜುಲೈ 2025, 6:21 IST
<div class="paragraphs"><p>ಅಮಾನತು</p></div>

ಅಮಾನತು

   

ಕಡೂರು: ಹಣ ದುರುಪಯೋಗ ಮತ್ತು ಕರ್ತವ್ಯ ಲೋಪ ಆರೋಪದ ಹಿನ್ನೆಲೆ ತಾಲ್ಲೂಕು ಪುರ ಗ್ರಾಮ ಪಂಚಾಯಿತಿ ಪಿಡಿಒ ಆಗಿ ಕರ್ತವ್ಯ ನಿರ್ವಹಿಸಿದ್ದ ಬಿ.ಎಸ್.ಶುಭಲಕ್ಷ್ಮಿ ಅವರನ್ನು ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್‌.ಎಸ್‌.ಕೀರ್ತನಾ ಅಮಾನತು ಮಾಡಿ ಆದೇಶಿಸಿದ್ದಾರೆ.

ಪ್ರಸ್ತುತ ಕುಂಕಾನಾಡು ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶುಭಲಕ್ಷ್ಮಿ ಅವರು, ಪುರ ಗ್ರಾ.ಪಂ. ವರ್ಗ-1ರ ಖಾತೆಯಲ್ಲಿನ ಹಣವನ್ನು ಕಾನೂನು ಬಾಹಿರವಾಗಿ ವ್ಯಯಮಾಡಿದ್ದಾರೆ ಎಂದು ಕುಂಕನಾಡು ಆರ್.ಮಂಜುನಾಥ್ ಎಂಬುವರು ನೀಡಿದ ದೂರಿನ ಅನ್ವಯ ತನಿಖೆ ನಡೆದಿದೆ.

ADVERTISEMENT

ಈ ಹಿಂದೆ ಪುರ ಗ್ರಾ.ಪಂ.ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ 2023-24ನೇ ಸಾಲಿನಲ್ಲಿ ವರ್ಗ-1ರಲ್ಲಿ ನೀರುಗಂಟಿಗಳಿಗೆ ನಿಯಮ ಬಾಹಿರವಾಗಿ ಚೆಕ್‌ ಮೂಲಕ ₹4.62 ಲಕ್ಷ ಹಣ ಪಾವತಿಸಿದ್ದಲ್ಲದೇ, ಚುನಾವಣಾ ವೆಚ್ಚದ ಹಣವನ್ನು ಪಾವತಿಸಿ ಹಣಸಂದ ರಶೀದಿಗೆ ಸಹಿ ಪಡೆದಿರಲಿಲ್ಲ. ಖರೀದಿ ಪುಸ್ತಕ, ಸಾಮಗ್ರಿಗಳ ದಾಸ್ತಾನು ಮತ್ತು ವಿತರಣಾ ವಹಿಯನ್ನು ಸಮರ್ಪಕವಾಗಿ ನಿರ್ವಹಿಸದೇ, ಕರ್ತವ್ಯ ಲೋಪವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಅವರ ವಿರುದ್ಧ ಕ್ರಮ ಜರುಗಿಸಲು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಜಿಲ್ಲಾ ಪಂಚಾಯಿತಿ ಸಿಇಒಗೆ ವರದಿ ಸಲ್ಲಿಸಿದ್ದರು.

ಪಿಡಿಒ ವಿರುದ್ಧ ಇಲಾಖೆ ವಿಚಾರಣೆಯನ್ನು ಕಾಯ್ದಿರಿಸಿ, ಕರ್ನಾಟಕ ನಾಗರಿಕ ಸೇವಾ ನಿಯಮದಡಿ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತು ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.