ADVERTISEMENT

ಕಡೂರು | ಹಕ್ಕುಪತ್ರದ ನಿರೀಕ್ಷೆಯಲ್ಲಿ ಗ್ರಾಮಸ್ಥರು

94ಸಿ, 94ಸಿಸಿಯಲ್ಲಿ ಅರ್ಜಿ ಸಲ್ಲಿಕೆ, ಇಲಾಖೆಗಳ ನಡುವಿನ ಸಮನ್ವಯದ ಕೊರತೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 6:41 IST
Last Updated 20 ಜೂನ್ 2025, 6:41 IST
 ದಾಸರಹಟ್ಟಿ ಭಾಗದಲ್ಲಿ ಹಕ್ಕುಪತ್ರಕ್ಕಾಗಿ ಕಾದಿರುವ ಮಹಿಳೆ
 ದಾಸರಹಟ್ಟಿ ಭಾಗದಲ್ಲಿ ಹಕ್ಕುಪತ್ರಕ್ಕಾಗಿ ಕಾದಿರುವ ಮಹಿಳೆ   

ಕಡೂರು: ತಾಲ್ಲೂಕಿನ ಸಾವಿರಾರು ಕುಟುಂಬಗಳು 94ಸಿಯಲ್ಲಿ ಮನೆಗಳ ಹಕ್ಕುಪತ್ರ ಪಡೆಯಲು ಕಾಯುತ್ತಿವೆ. ಯಗಟಿ, ಪಂಚನಹಳ್ಳಿ, ಬೀರೂರು ಮತ್ತು ಕಸಬಾ ಹೋಬಳಿಗಳಲ್ಲಿ 6 ಗ್ರಾಮಗಳು ಸ್ಮಶಾನ ಭೂಮಿಗಾಗಿ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ಸಮನ್ವಯಕ್ಕಾಗಿ ಕಾದಿವೆ.

ತಾಲ್ಲೂಕಿನಲ್ಲಿ 2019ರಿಂದ ಈಚೆಗೆ 94ಸಿಯಲ್ಲಿ 2,933 ಅರ್ಜಿಗಳು ಸ್ವೀಕೃತಗೊಂಡಿದ್ದರೆ, 94ಸಿಸಿಯಲ್ಲಿ 201 ಅರ್ಜಿಗಳು ಕಂದಾಯ ಇಲಾಖೆಗೆ ಸಲ್ಲಿಕೆಯಾಗಿವೆ. ಈ ಪೈಕಿ 94ಸಿಯ 1,171 ಪ್ರಕರಣಗಳು ಮಂಜೂರಾತಿ ಪಡೆದರೆ, 1,688 ಅರ್ಜಿಗಳು ಹಲವು ಕಾರಣಗಳಿಂದ ತಿರಸ್ಕೃತಗೊಂಡಿವೆ. 74 ಪ್ರಕರಣಗಳು ಬಾಕಿ ಇವೆ. 94 ಸಿಸಿಯಲ್ಲಿ 46 ಪ್ರಕರಣಗಳು ಮಂಜೂರಾತಿ ಪಡೆದರೆ, 145 ಪ್ರಕರಣಗಳು ತಿರಸ್ಕೃತಗೊಂಡಿವೆ. 10 ಅರ್ಜಿಗಳು ಬಾಕಿ ಉಳಿದಿವೆ. ತುರುಮಂದೆ ಭೂಮಿ ಎನ್ನುವ ಕಾರಣಕ್ಕೆ 4 ಹೋಬಳಿಯ 78 ಅರ್ಜಿಗಳು ಬಾಕಿ ಇದ್ದರೆ, 94 ಸಿಸಿರಲ್ಲಿ 10 ಅರ್ಜಿಗಳು ಉಳಿಕೆಯಾಗಿವೆ.

ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸದೆ, ದಾಖಲೆಗಳನ್ನು ಹಾಜರು ಪಡಿಸದಿದ್ದರೆ ಅರ್ಜಿಗಳು ತಿರಸ್ಕೃತಗೊಂಡಿರುತ್ತವೆ. ನೋಟಿಫಿಕೇಷನ್ ಹೊರಡಿಸಿದಾಗ ಸೂಕ್ತ ದಾಖಲೆಗಳೊಡನೆ ಮತ್ತೆ ಅರ್ಜಿ ಸಲ್ಲಿಸಿ ಮಂಜೂರಾತಿ ಪಡೆಯಬಹುದು ಎನ್ನುತ್ತವೆ ಕಂದಾಯ ಇಲಾಖೆ ಮೂಲಗಳು.

ADVERTISEMENT

ತುರುಮಂದೆ ಭೂಮಿಯ ವರ್ಗೀಕರಣಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಅನುಮೋದನೆ ದೊರೆತರೆ ಹಕ್ಕುಪತ್ರ ವಿತರಿಸಲಾಗುವುದು. ಭೂಮಿಯ ಮಾಲೀಕತ್ವ ಮತ್ತು ಹಕ್ಕುಗಳನ್ನು ಸ್ಪಷ್ಟಪಡಿಸುವ ಸಲುವಾಗಿ, ಪೋಡಿಗಾಗಿ 28 ಅರ್ಜಿಗಳು ಬಾಕಿ ಇವೆ. ಸ್ಮಶಾನ ಭೂಮಿಗಾಗಿ ಯಗಟಿ ಹೋಬಳಿಯ ಪಿ.ಮಲ್ಲೇನಹಳ್ಳಿ, ಪಂಚನಹಳ್ಳಿ ಹೋಬಳಿಯ ಬಿ.ಮಲ್ಲೇನಹಳ್ಳಿ, ಬೀರೂರು ಹೋಬಳಿಯ ದೇವರಹಳ್ಳಿ, ಕಸಬಾದ ಸೇವಾಪುರ, ಕಾನುಗೊಂಡನಹಳ್ಳಿ, ಬಿಳುವಾಲ ಗ್ರಾಮಗಳಲ್ಲಿ ಅರಣ್ಯ ಇಲಾಖೆಯ ವತಿಯಿಂದ ಈವರೆಗೆ ಅನುಮೋದನೆ ದೊರೆತಿಲ್ಲ ಎನ್ನುತ್ತಾರೆ ತಹಶೀಲ್ದಾರ್ ಸಿ.ಎಸ್.ಪೂರ್ಣಿಮಾ.

ಈ ಕುರಿತು ಪ್ರತಿಕ್ರಿಯಿಸಿದ ವಲಯ ಅರಣ್ಯಾಧಿಕಾರಿ ಹರೀಶ್, 94ಸಿಯಲ್ಲಿ ಮನೆಗಳ ಹಕ್ಕುಪತ್ರಕ್ಕಾಗಿ ಅರಣ್ಯ ಇಲಾಖೆಗೆ ಯಾವುದೇ ಅರ್ಜಿ ಸಲ್ಲಿಕೆಯಾಗಿಲ್ಲ. ಇನ್ನು ತಿರಸ್ಕೃತ ಪ್ರಕರಣಗಳಲ್ಲಿ ಸಂಪೂರ್ಣ ಜಾಗ ಅರಣ್ಯಭೂಮಿ ಎಂದು ನಮೂದಾಗಿದ್ದರೆ ಮಂಜೂರಾತಿ ದೊರೆಯುವುದಿಲ್ಲ. ಅದರಲ್ಲಿ ಕಂದಾಯ, ಬಂಜರು ಅಥವಾ ಸರ್ಕಾರಿ ಭೂಮಿಯ ಭಾಗವಿದ್ದರೆ ಅದನ್ನು ಜಂಟಿ ಸರ್ವೆ ಮೂಲಕ ಇತ್ಯರ್ಥ ಪಡಿಸಲಾಗುವುದು ಎನ್ನುತ್ತಾರೆ.

‘ನಾವು ಎಮ್ಮೆದೊಡ್ಡಿ ಪ್ರದೇಶದಲ್ಲಿ ವಾಸವಿದ್ದೇವೆ. 2023ರ ಮಾರ್ಚ್ ತಿಂಗಳಿನಲ್ಲಿ ಅಂದಿನ ಶಾಸಕರ ಸಮ್ಮುಖದಲ್ಲಿ ನಮಗೆ ಹಕ್ಕುಪತ್ರ ವಿತರಿಸಲಾಗಿತ್ತು. ಆದರೆ, ಅದನ್ನು ಹಾಜರು ಪಡಿಸಿ ಸೌಲಭ್ಯ ಪಡೆಯಲು ಮುಂದಾದರೆ ಈ ಹಕ್ಕುಪತ್ರಕ್ಕೆ ಕಿಮ್ಮತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು. ಹಾಗಾದರೆ ನಾವು ಏನು ಮಾಡಬೇಕು’ ಎಂದು ಪ್ರಶ್ನಿಸುತ್ತಾರೆ ಮುಸ್ಲಾಪುರದ ಮಂಜುನಾಥ.

 ಎಮ್ಮೆದೊಡ್ಡಿ ಭಾಗದ ಮುಸ್ಲಾಪುರದ ಗ್ರಾಮಸ್ಥರಿಗೆ ವಿತರಿಸಿರುವ ಹಕ್ಕುಪತ್ರ
ನಮಗೆ ನೀಡಿರುವ ಹಕ್ಕುಪತ್ರವನ್ನು ಖಾತೆ ಮಾಡಲು ಪಂಚಾಯಿತಿಗೆ ಸಲ್ಲಿಸಿದರೆ ಖಾತೆ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ ಅಧಿಕಾರಿಗಳು.
ಕುಮಾರ್ ಎಮ್ಮೆದೊಡ್ಡಿ ನಿವಾಸಿ

- ‘ನಮ್ಮ ಅರ್ಜಿ ತಿರಸ್ಕೃತ’ ‘ನಾವು ಕಡೂರು ಸಮೀಪದ ದಾಸರಹಟ್ಟಿಯಲ್ಲಿ 30-40 ವರ್ಷಗಳಿಂದ ವಾಸವಿದ್ದೇವೆ. ನಮಗೆ ಹಕ್ಕುಪತ್ರ ದೊರೆತಿಲ್ಲ. ನಾವು 94ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದೆವು. ವಿಳಂಬವಾಗಿದೆ ಎನ್ನುವ ಕಾರಣ ನೀಡಿ ನಮ್ಮ ಅರ್ಜಿಗಳನ್ನು ತಿರಸ್ಕೃರಿಸಲಾಗಿದೆ. ನಮ್ಮ ಇಡೀ ಗ್ರಾಮದಲ್ಲಿ 50-60 ಮನೆಗಳಿದ್ದು ಯಾರಿಗೂ ಹಕ್ಕುಪತ್ರ ದೊರೆತಿಲ್ಲ ಕಚೇರಿಯಲ್ಲಿ ವಿಚಾರಿಸಿದರೆ ಮತ್ತೆ ನೋಟಿಫಿಕೇಷನ್ ಹೊರಡಿಸಿದಾಗ ಅರ್ಜಿ ಸಲ್ಲಿಸುವಂತೆ ತಿಳಿಸಿದ್ದಾರೆ’ ಎನ್ನುತ್ತಾರೆ ಭಾಗ್ಯಮ್ಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.