ADVERTISEMENT

‘ಕ್ಯೂ–ನೆಟ್‌’ ವಂಚನೆ; ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2019, 20:24 IST
Last Updated 9 ಸೆಪ್ಟೆಂಬರ್ 2019, 20:24 IST

ಚಿಕ್ಕಮಗಳೂರು: ಜನರಿಗೆ ಕಮಿಷನ್‌ ಗಳಿಕೆ ಆಮಿಷವೊಡ್ಡಿ ‘ಕ್ಯೂ–ನೆಟ್‌’ ಹೆಸರಿನಲ್ಲಿ ಹಣ ಲಪಟಾಯಿಸುವ ದಂಧೆಯಲ್ಲಿ ತೊಡಗಿದ್ದ ಜಾಲವನ್ನು ಭೇದಿಸಿ, ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಪ್ರಶಾಂತ್‌ (32), ಸಖರಾಯಪಟ್ಟಣದ ಮಲ್ಲಿಕಾರ್ಜುನ್‌ (23), ಕೀರ್ತಿರಾಜ್‌ (23) ಹಾಗೂ ಉಂಡೇದಾಸರಹಳ್ಳಿಯ ಕಾರ್ತಿಕ್‌ (20) ಬಂಧಿತರು. ಕೃತ್ಯಕ್ಕೆ ಬಳಸುತ್ತಿದ್ದ ‘ಸ್ವೈಪಿಂಗ್’ ಉಪಕರಣ ವಶಪಡಿಸಿಕೊಂಡಿದ್ದಾರೆ.

‘ಇದೊಂದು ಚೈನ್‌ಲಿಂಕ್‌ ದಂಧೆ. ಒಬ್ಬರು, ಮತ್ತೊಬ್ಬರನ್ನು ನೋಂದಾಯಿಸಿದರೆ ಕಮಿಷನ್‌ ಹಣ ಖಾತೆಗೆ ಜಮೆಯಾಗುತ್ತದೆ. ನೋಂದಣಿ ಹೆಚ್ಚಿದಷ್ಟು ಕಮಿಷನ್‌ ಹಣ ಜಾಸ್ತಿ ಸಿಗುತ್ತದೆ ಎಂದು ನಂಬಿಸಿದ್ದಾರೆ’ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರೀಶ್‌ಪಾಂಡೆ ತಿಳಿಸಿದರು.
‘ಇದು ಆನ್‌ಲೈನ್‌ ವಂಚನೆ ಜಾಲ. ನಗರದಲ್ಲಿ ಸುಮಾರು 8 ಲಕ್ಷದವರೆಗೆ ಹಣ ಪೀಕಿದ್ದಾರೆ. ಸ್ವೈಪಿಂಗ್‌ ಮೆಷಿನ್‌ ಬಳಸಿ ಯಾಮರಿಸಿದ್ದಾರೆ. ನೋಂದಣಿ ಹೆಚ್ಚುತ್ತಿದ್ದಂತೆ ಕಮಿಷನ್‌ ಖಾತೆಗೆ ಜಮೆಯಾಗುತ್ತದೆ ಎಂದು ಆಮಿಷವೊಡ್ಡಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಜಾಲವು ಹಣ ಪೀಕಲು ಗಾಳ ಹಾಕಿದ್ದ ಇಬ್ಬರು ಪೊಲೀಸರಿಗೆ ಸುಳಿವು ನೀಡಿದ್ದಾರೆ. ಸುಳಿವು ಆಧರಿಸಿ ನಗರ ಠಾಣೆ ಪೊಲೀಸರು ಕಾರ್ಯಾಚರಣೆ ಮಾಡಿದ್ದಾರೆ. ದಂಧೆಯಲ್ಲಿ ಇನ್ನು ಕೆಲವರು ಶಾಮೀಲಾಗಿದ್ದು, ಪೊಲೀಸರು ಬಲೆ ಬೀಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.