ನರಸಿಂಹರಾಜಪುರ: ಪ್ರಮುಖ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಅನುದಾನ ನೀಡಿದ್ದರೂ ಅದನ್ನು ಸಮರ್ಪಕವಾಗಿ ನಿರ್ವಹಿಸದ ಲೋಕೋಪಯೋಗಿ ಇಲಾಖೆ ಎಂಜಿನಿಯರನ್ನು ಶಾಸಕ ಟಿ.ಡಿ.ರಾಜೇಗೌಡ ತರಾಟೆಗೆ ತೆಗೆದುಕೊಂಡರು.
ತಾಲ್ಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಶನಿವಾರ ನಡೆದ ಕೆಡಿಪಿ ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಸರದಿ ಬಂದಾಗ ಎಂಜಿನಿಯರ್ ವರದಿ ನೀಡಲು ಮುಂದಾದರು.
ಅನುಪಾಲನಾ ವರದಿಯಲ್ಲಿ ಈ ಹಿಂದಿನ ಸಭೆಯಲ್ಲಿ ಮೆಣಸೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ನ್ಯಾಯಾಲಯದ ಸಮೀಪದವರೆಗೆ ವಿದ್ಯಾರ್ಥಿಗಳು ನಡೆದುಕೊಂಡು ಬರುವುದರಿಂದ ರಸ್ತೆ ವಿಸ್ತರಣೆಗೆ ಕ್ರಮ ಕೈಗೊಳ್ಳಬೇಕು ಎಂಬ ವಿಷಯ ಪ್ರಸ್ತಾಪಿಸಿದ್ದು, ಕೈ ಬಿಡಲಾಗಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಭದ್ರಾ ಕಾಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಪಿ.ಅಂಶುಮಂತ್, ಇಲಾಖೆಯವರಿಗೆ ಜೀವದ ಬೆಲೆ ಗೊತ್ತಿಲ್ಲ ಪ್ರಮುಖ ವಿಷಯ ಪ್ರಸ್ತಾಪಿಸಿದ್ದರೂ ಕೈಬಿಟ್ಟಿರುವುದು ಏಕೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ವಿಸ್ತರಣೆಗೆ ₹1 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಎಂಜಿನಿಯರ್ ಉತ್ತರಿಸಿದರು.
ತಾಲ್ಲೂಕಿನ ಮಡಬೂರು ದೇವಸ್ಥಾನದ ಮುಂಭಾಗದಲ್ಲಿ ರಸ್ತೆಯ ಸಮರ್ಪಕ ಗುಂಡಿ ಮುಚ್ಚದೆ ಜೀವಹಾನಿಯಾಗಿದೆ. ಇದುವರೆಗೂ ಗುಂಡಿ ಮುಚ್ಚಲು ಕ್ರಮಕೈಗೊಂಡಿಲ್ಲ ಎಂದರು.
ಅನುದಾನ ನೀಡಿದ್ದರೂ ಸಮರ್ಪಕವಾಗಿ ರಸ್ತೆ ನಿರ್ವಹಣೆ ಮಾಡದೆ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಬೇಜವಾಬ್ದಾರಿಯಿಂದ ಕೆಲಸ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಅನುದಾನ ನೀಡಿದ್ದರೂ ಅನುದಾನ ಇಲ್ಲ ಎಂದು ಹೇಳುವುದು ಸರಿಯಲ್ಲ ಎಂದು ಅಂಶುಮಂತ್ ಹೇಳಿದರು.
ಈಗಾಗಲೇ ತಾಲ್ಲೂಕಿನ ವ್ಯಾಪ್ತಿಯ ವಿವಿಧ ರಸ್ತೆಗಳ ಅಭಿವೃದ್ಧಿಗೆ ₹62.25 ಕೋಟಿ ಅನುದಾನ ನೀಡಲಾಗಿದೆ. ಮಳೆಗಾಲ ಮುಗಿಯುವರೆಗೆ ಕ್ಷೇತ್ರದ ವ್ಯಾಪ್ತಿಯ ಎಲ್ಲ ರಸ್ತೆಗಳ ಗುಂಡಿಯನ್ನು ತಾತ್ಕಾಲಿಕವಾಗಿ ಮುಚ್ಚಿ ಸಮರ್ಪಕ ನಿರ್ವಹಣೆ ಮಾಡುವಂತೆ ಎಂಜಿನಿಯರ್‌ಗೆ ಶಾಸಕ ಸೂಚಿಸಿದರು.
ತಾಲ್ಲೂಕಿನ ವ್ಯಾಪ್ತಿಯಲ್ಲಿ 547 ಗ್ರಾಮೀಣ ರಸ್ತೆಗಳಿದ್ದು, ಇದರ ದುರಸ್ತಿಗೆ ₹13 ಕೋಟಿ ಅನುದಾನ ಅವಶ್ಯಕತೆಯಿದೆ ಎಂದು ವರದಿ ನೀಡಲಾಗಿತ್ತು ಎಂದು ಜಿಲ್ಲಾಪಂಚಾಯಿತಿ ಎಇಇ ಸಾಗರ್ ಮಾಹಿತಿ ನೀಡಿದರು. ಶೀಘ್ರದಲ್ಲಿ ₹7 ಕೋಟಿ ಅನುದಾನ ನೀಡಲಾಗುವುದು. ಇದರಲ್ಲಿ ಜನಸಂಖ್ಯೆ ಹೆಚ್ಚಿರುವ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸುವಂತೆ ಶಾಸಕ ಸೂಚಿಸಿದರು.
ಜಲಜೀವನ್ ಮಿಷನ್‌ನಡಿ ಕುಡಿಯುವ ನೀರಿನ ಕಾಮಗಾರಿ ಪೂರ್ಣಗೊಂಡು ಸಮರ್ಪಕ ನೀರು ಪೂರೈಕೆಯಾಗದಿದ್ದರೆ ಗ್ರಾಮ ಪಂಚಾಯಿತಿಯವರು ಅದನ್ನು ಹಸ್ತಾಂತರಿಸಿಕೊಳ್ಳಬಾರದು ಎಂದು ಶಾಸಕ ಹೇಳಿದರು.
ಕುಡಿಯುವ ನೀರಿನ ಯೋಜನೆಯಡಿ ಗುತ್ತಿಗೆದಾರ ಕೊಳವೆಬಾವಿಗಳನ್ನು ಕಡಿಮೆ ಆಳ ತೋಡಿ ಹೆಚ್ಚು ಆಳ ತೋಡಿದ್ದಾಗಿ ಬಿಲ್ ಮಾಡಿಸಿಕೊಂಡಿರುವ ಆರೋಪಗಳು ಕೇಳಿ ಬಂದಿದೆ. ಅಪಪ್ರಚಾರಕ್ಕೆ ಅವಕಾಶ ಕೊಡದೆ ಈ ಬಗ್ಗೆ ಇಒ ಸಮರ್ಪಕ ತನಿಖೆ ನಡೆಸಿ ಸಂಪೂರ್ಣ ವರದಿ ನೀಡಬೇಕೆಂದು ಅಂಶುಮಂತ್ ಹೇಳಿದರು.
ತಾಲ್ಲೂಕಿನ ವ್ಯಾಪ್ತಿಯ ಸೀತೂರು ಹಾಗೂ ಮೆಣಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂಟಿ ಸಲಗದ ಹಾವಳಿ ಹೆಚ್ಚಾಗಿದ್ದು, ಅದನ್ನು ಸೆರೆಹಿಡಿಯಲು ಕ್ರಮಕೈಗೊಳ್ಳುವಂತೆ ಪತ್ರಬರೆಯಲಾಗಿದೆ. ಈ ಭಾಗಕ್ಕೆ ಶಾಶ್ವತ ಆನೆ ಕಾರ್ಯಪಡೆ ತಂಡದ ಅವಶ್ಯಕತೆಯಿದೆ ಎಂದು ವಲಯ ಅರಣ್ಯಾಧಿಕಾರಿ ಪ್ರವೀಣ್ ಕುಮಾರ್ ಹೇಳಿದರು.
ಟೆಂಟಕಲ್ ಬೇಲಿ ನಿರ್ಮಾಣ ಮಾಡಿ ಕಾಡು ಪ್ರಾಣಿಗಳ ಹಾವಳಿ ಕಡಿಮೆಯಾಗಿರುವ ನಿದರ್ಶನ ಮೂಡಿಗೆರೆ ತಾಲ್ಲೂಕಿನ ವ್ಯಾಪ್ತಿಯಲ್ಲಿದ್ದು, ಇದರ ಬಗ್ಗೆ ಇಲಾಖೆಯವರು ಅಧ್ಯಯನ ಮಾಡಿ ಕಡಿಮೆ ಖರ್ಚಿನಲ್ಲಿ ಇದನ್ನು ನಿರ್ಮಿಸಲು ಸಾಧ್ಯವಿದ್ದು ಪರಿಶೀಲಿಸುವಂತೆ ಅಂಶುಮಂತ್ ಸಲಹೆ ನೀಡಿದರು.
ತಹಶೀಲ್ದಾರ್ ತನುಜಾ ಟಿ.ಸವದತ್ತಿ ಮಾಹಿತಿ ನೀಡಿ, 94ಸಿ ಅಡಿ 637, ಪೋಡಿಯ 350 ಅರ್ಜಿ ಅರಣ್ಯ ಇಲಾಖೆಯ ಒಪ್ಪಿಗೆ ಕಳುಹಿಸಲಾಗಿದೆ ಎಂದರು.
ಸರ್ಕಾರ ಪೋಡಿ ಮುಕ್ತ ಆಂದೋಲನ ಆರಂಭಿಸಿದ್ದು, ತಾಲ್ಲೂಕಿನ ಯಾವ ಯಾವ ಭಾಗದಲ್ಲಿ ಪೋಡಿ ಮಾಡಲಾಗಿದೆ ಎಂದು ಮಾಹಿತಿ ನೀಡುವಂತೆ ಅಂಶುಮಂತ್ ಸೂಚಿಸಿದರು.
3 ವರ್ಷಗಳಿಂದ ರೈತರೊಬ್ಬರ ದಾಖಲೆ ಸರಿ ಮಾಡಿಕೊಡದೆ ಸತಾಯಿಸಲಾಗುತ್ತಿದೆ ಎಂದು ಕೆಡಿಪಿ ಸದಸ್ಯ ಸಾಜು ದೂರಿದರು.
ಈ ವಿಚಾರದಲ್ಲಿ ಶಾಸಕ ತಹಶೀಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಶಾಸಕರು ಮತ್ತು ತಹಶೀಲ್ದಾರ್ ನಡುವೆ ಮಾತಿನ ಚಕಮಕಿ ನಡೆಯಿತು.
ಹೃದಯಾಘಾತದಂತಹ ತುರ್ತು ಸಂದರ್ಭದಲ್ಲಿ ಬರುವ ರೋಗಿಗಳಿಗೆ ತಕ್ಷಣ ಚಿಕಿತ್ಸೆ ನೀಡುವ ಕ್ರಮಕೈಗೊಳ್ಳಬೇಕು ಎಂದು ಅಂಶುಮಂತ್ ಸೂಚಿಸಿದರು. ಕೀಲು ಮತ್ತು ಮೂಳೆ ತಜ್ಞರು ಸಮರ್ಪಕ ಚಿಕಿತ್ಸೆ ನೀಡುತ್ತಿಲ್ಲ ಎಂದು ಈ.ಸಿ.ಜೋಯಿ ಆರೋಪಿಸಿದರು.
ಇಒ ಎಚ್.ಡಿ.ನವೀನ್ ಕುಮಾರ್, ಕೊಪ್ಪ ಡಿಎಫ್‌ಒ ಇ.ಶಿವಶಂಕರ್, ನೋಡಲ್ ಅಧಿಕಾರಿ ಚಂದ್ರಶೇಖರ್ ಭಾಗವಹಿಸಿದ್ದರು.
ಹಾವುಗೊಲ್ಲರು ಎಷ್ಟು ದಿನ ಬೀದಿ ಬದಿ ಟೆಂಟ್‌ನಲ್ಲಿರಲಿ...
ಹಾವುಗೊಲ್ಲರು ಐದಾರು ವರ್ಷದಿಂದ ಶಾಲೆಯ ಜಾಗದಲ್ಲಿ ಟೆಂಟ್‌ನಲ್ಲಿ ವಾಸವಾಗಿದ್ದಾರೆ. ಅವರಿಗೆ ನಿವೇಶನ ಗುರುತಿಸಲಾಗಿದೆ. ಜಾತಿ ಪ್ರಮಾಣ ಪತ್ರದ ಸಮಸ್ಯೆ ಬಗೆಹರಿದಿದೆ. ಆದರೂ ಹಕ್ಕುಪತ್ರ ಕೊಡಲು ಕಂದಾಯ ಇಲಾಖೆ ನಿರ್ಲಕ್ಷ್ಯ ಮಾಡುತ್ತಿರುವುದು ಏಕೆ? ಇನ್ನೂ ಎಷ್ಟು ದಿನ ಅವರು ಟೆಂಟ್‌ನಲ್ಲಿರುವುದು ಎಂದು ಅಂಶುಮಂತ್ ಪ್ರಶ್ನಿಸಿದರು. ಹಕ್ಕು ಪತ್ರಕ್ಕೆ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಕಳುಹಿಸಲಾಗಿದ್ದು ಶೀಘ್ರದಲ್ಲೇ ಬರಲಿದೆ. ಮನೆ ಬೇಕೆಂದು ಕೇಳುತ್ತಿದ್ದಾರೆ ಎಂದು ಇಒ ತಿಳಿಸಿದರು. ಎಷ್ಟು ಮನೆ ಬೇಕು ಎಂಬ ಪ್ರಸ್ತಾವನೆ ನೀಡಿದರೆ ಸರ್ಕಾರದಿಂದ ಮಂಜೂರು ಮಾಡಿಕೊಡಲಾಗುವುದು ಎಂದು ಶಾಸಕ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.