ಚಿಕ್ಕಮಗಳೂರು: ಜಿಲ್ಲೆಯ ಸೀಮೆಯಲ್ಲಿ ಈ ವರ್ಷ ಉತ್ತಮ ಮಳೆಯಾಗಿದ್ದು, ರಾಗಿ ಬಿತ್ತನೆ ಪ್ರಮಾಣ ಹೆಚ್ಚಾಗಿದೆ. ಅಡಿಕೆ ಬೆಳೆ ಆವರಿಸುತ್ತಿರುವ ಸಂದರ್ಭದಲ್ಲೇ ವರ್ಷದಿಂದ ವರ್ಷಕ್ಕೆ ರಾಗಿ ಬೆಳೆ ಕೂಡ ಹೆಚ್ಚಾಗುತ್ತಿದೆ.
ಬಯಲು ಸೀಮೆಯಲ್ಲಿ ರಾಗಿ, ಜೋಳ, ಹತ್ತಿ, ಕಡಲೆ, ತರಕಾರಿ ಬೆಳೆಯುತ್ತಿದ್ದ ಪ್ರದೇಶಗಳು ಈಗ ಅಡಿಮೆ ಮತ್ತು ತೆಂಗಿನ ತೋಟಗಳಾಗಿ ಮಾರ್ಪಟ್ಟಿವೆ. ಅದರಲ್ಲೂ ತರೀಕೆರೆ, ಅಜ್ಜಂಪುರ ಮತ್ತು ಕಡೂರು ತಾಲ್ಲೂಕಿನಲ್ಲಿ ಅಡಿಕೆ ಬೆಳೆ ಎಲ್ಲೆಡೆ ಹೆಚ್ಚಾಗುತ್ತಿದೆ.
ಜಿಲ್ಲೆಯಲ್ಲಿ 2019-20ರಲ್ಲಿ 65,589 ಹೆಕ್ಟೇರ್ ಪ್ರದೇಶದಲ್ಲಿದ್ದ ಅಡಿಕೆ ಬೆಳೆ 2020-21ರಲ್ಲಿ 72,999 ಕ್ಕೇರಿದೆ. 2021-22ರ ಅಂಕಿ-ಅಂಶಗಳ ಪ್ರಕಾರ 80 ಸಾವಿರ ಹೆಕ್ಟೇರ್ ದಾಟಿದೆ. ಇದರ ನಡುವೆ ನಾಲ್ಕು ವರ್ಷಗಳಲ್ಲಿ ರಾಗಿ ಬೆಳೆ ಕಡೆಯೂ ರೈತರು ಒಲವು ತೋರಿಸಿದ್ದಾರೆ.
ಕಡೂರು, ತರೀಕೆರೆ, ಚಿಕ್ಕಮಗಳೂರು ತಾಲ್ಲೂಕಿನಲ್ಲಿ 2021ರಿಂದ 2025 ರವರೆಗೆ ರಾಗಿ ಬಿತ್ತನೆ ಪ್ರಮಾಣ ಹೆಚ್ಚಳವಾಗಿದೆ. ಈ ವರ್ಷವೂ ಸಹ ಬಿತ್ತನೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ.
2021-22ರಲ್ಲಿ 53,749 ಹೆಕ್ಟೇರ್ ಬಿತ್ತನೆಯಾಗಿತ್ತು. 2022-23ರಲ್ಲಿ 54,492, 2023-24ರಲ್ಲಿ 55,459, 2024-25ರಲ್ಲಿ 52,186 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿದೆ. ಈ ವರ್ಷ ಈವರೆಗೆ 49 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು, ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಜಿಲ್ಲೆಯಲ್ಲಿ 45 ಸಾವಿರ ಹೆಕ್ಟೇರ್ ಪ್ರದೇಶವನ್ನು ರಾಗಿ ಬೆಳೆಯ ಪ್ರದೇಶ ಎಂದು ಗುರುತಿಸಲಾಗಿದೆ. ನಾಲ್ಕು ವರ್ಷಗಳಿಂದ 50 ಸಾವಿರ ಹೆಕ್ಟೇರ್ ತನಕ ಬಿತ್ತನೆಯಾಗುತ್ತಿದೆ. ಈ ವರ್ಷವೂ ಸಹ ಬಿತ್ತನೆ ಹೆಚ್ಚಾಗುವ ಸಾಧ್ಯತೆ ಇದೆ. ಬೆಂಬಲ ಬೆಲೆ ಘೋಷಣೆಯಾಗಿರುವುದು ಜತೆಗೆ ಉತ್ತಮ ದರ ಸಿಗುತ್ತಿರುವುದು ರೈತರನ್ನು ಮತ್ತೆ ರಾಗಿ ಬೆಳೆಯತ್ತ ಆಸಕ್ತಿ ತೋರಿಸಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಮಳೆ ಆಶ್ರಯದಲ್ಲೇ ಹೆಚ್ಚಿನದಾಗಿ ಬೆಳೆಯುವ ರಾಗಿ ಲಾಭದಾಯಕವಲ್ಲ ಎಂದು ರೈತರು ಹಿಂದೆ ಸರಿಯುತ್ತಿದ್ದರು. ಈಗ ಬೆಲೆ ಹೆಚ್ಚಳವಾಗಿರುವುದು ರೈತರಲ್ಲಿ ಆಸಕ್ತಿ ಹೆಚ್ಚುವಂತೆ ಮಾಡಿದೆ ಎಂದು ವಿವರಿಸುತ್ತಾರೆ.
ಕಡೂರು ತಾಲ್ಲೂಕಿನಲ್ಲಿ ಹೆಚ್ಚು ತರೀಕೆರೆ ಚಿಕ್ಕಮಗಳೂರು ಮತ್ತು ಕಡೂರು ತಾಲ್ಲೂಕಿನಲ್ಲಿ ರಾಗಿ ಬೆಳೆಯಲಾಗುತ್ತಿದೆ. ಈ ಪೈಕಿ ಕಡೂರು ತಾಲ್ಲೂಕಿನಲ್ಲಿ ಹೆಚ್ಚು ರಾಗಿ ಬಿತ್ತನೆಯಾಗುತ್ತಿದೆ. ರಾಗಿ ಬಿತ್ತನೆ ಮಾಡುವ ಪ್ರದೇಶಗಳಲ್ಲಿ ಒಟ್ಟು 3629 ಕ್ವಿಂಟಲ್ ಬಿತ್ತನೆ ಬೀಜವನ್ನು ಪೂರೈಕೆ ಮಾಡಿದೆ. ಚಿಕ್ಕಮಗಳೂರು ತಾಲ್ಲೂಕಿಗೆ 71.20 ಕ್ವಿಂಟಲ್ ತರೀಕೆರೆ ತಾಲ್ಲೂಕಿಗೆ 1041 ಕ್ವಿಂಟಲ್ ಹಾಗೂ ಕಡೂರು ತಾಲೂಕಿನಲ್ಲಿ 2597 ಕ್ವಿಂಟಲ್ ಬಿತ್ತನೆ ಬೀಜ ಪೂರೈಕೆ ಮಾಡಿದೆ.
ರಾಗಿ ಬೆಳೆಯ ವಿವರ ವರ್ಷ; ರಾಗಿ ಬೆಳೆ(ಹೆಕ್ಟೇರ್‌ನಲ್ಲಿ) 2021-22; 53749 2022-23; 54492 2023-24; 55459 2024-25; 52186 2025–26; 49000
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.