ADVERTISEMENT

ತಿರುಪತಿ ರೈಲಿಗೆ ದತ್ತಾತ್ರೇಯರ ಹೆಸರು: ಶೀಘ್ರ ತೀರ್ಮಾನ

ಚಿಕ್ಕಮಗಳೂರು–ತಿರುಪತಿ ಎಕ್ಸ್‌ಪ್ರೆಸ್‌ಗೆ ಹಸಿರು ನಿಶಾನೆ ತೋರಿದ ವಿ.ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 6:30 IST
Last Updated 12 ಜುಲೈ 2025, 6:30 IST
ಚಿಕ್ಕಮಗಳೂರು–ತಿರುಪತಿ ರೈಲಿಗೆ ಸಚಿವ ವಿ.ಸೋಮಣ್ಣ ಚಾಲನೆ ನೀಡಿದರು. ಸಿ.ಟಿ.ರವಿ, ಕೋಟ ಶ್ರೀನಿವಾಸ ಪೂಜಾರಿ, ಎಂ.ಕೆ.ಪ್ರಾಣೇಶ್ ಭಾಗವಹಿಸಿದ್ದರು
ಚಿಕ್ಕಮಗಳೂರು–ತಿರುಪತಿ ರೈಲಿಗೆ ಸಚಿವ ವಿ.ಸೋಮಣ್ಣ ಚಾಲನೆ ನೀಡಿದರು. ಸಿ.ಟಿ.ರವಿ, ಕೋಟ ಶ್ರೀನಿವಾಸ ಪೂಜಾರಿ, ಎಂ.ಕೆ.ಪ್ರಾಣೇಶ್ ಭಾಗವಹಿಸಿದ್ದರು   

ಚಿಕ್ಕಮಗಳೂರು: ತಿರುಪತಿ-ಚಿಕ್ಕಮಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲಿಗೆ ದತ್ತಾತ್ರೇಯ ಎಕ್ಸ್‌ಪ್ರೆಸ್ ಎಂದು ನಾಮಕರಣ ಮಾಡುವ ಕುರಿತು ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.

ಶುಕ್ರವಾರ ಚಿಕ್ಕಮಗಳೂರಿನಿಂದ ಹೊರಟ ತಿರುಪತಿ ರೈಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ರೈಲಿಗೆ ದತ್ತಾತ್ರೇಯ ಎಕ್ಸ್‌ಪ್ರೆಸ್, ದತ್ತಪೀಠ ಎಕ್ಸ್‌ಪ್ರೆಸ್ ಅಥವಾ ದತ್ತಾತ್ರೇಯ-ಶ್ರೀನಿವಾಸ ಎಕ್ಸ್‌ಪ್ರೆಸ್ ಇವುಗಳಲ್ಲಿ ಯಾವ ಹೆಸರಿಡಬೇಕು ಎಂಬುದನ್ನು ಸಿ.ಟಿ.ರವಿ, ಎಂ.ಕೆ.ಪ್ರಾಣೇಶ್, ಕೋಟ ಶ್ರೀನಿವಾಸ ಪೂಜಾರಿ ಅವರು ಜತೆಗೂಡಿ ಚರ್ಚಿಸಿ, ಮನವಿ ಸಲ್ಲಿಸಿದರೆ ರೈಲ್ವೆ ಮಂಡಳಿ ಮುಂದೆ ಮಂಡಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.

ಚಿಕ್ಕಮಗಳೂರಿನಿಂದ-ತಿರುಪತಿಗೆ ಹೋದ ರೈಲು ಮತ್ತೆ ವಾಪಾಸ್ 48 ಗಂಟೆಗಳಲ್ಲಿ ಚಿಕ್ಕಮಗಳೂರಿಗೆ ಬರುವ ದೃಷ್ಟಿಯಿಂದಲೂ ಯೋಚಿಸಲಾಗುತ್ತಿದೆ. ಚಿಕ್ಕಮಗಳೂರು ರೈಲು ನಿಲ್ದಾಣವನ್ನು ₹22 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಸಕಲೇಶಪುರ ರೈಲು ನಿಲ್ದಾಣವನ್ನು ₹26 ಕೋಟಿ, ಹಾಸನ ರೈಲು ನಿಲ್ದಾಣವನ್ನು ₹23 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಹೇಳಿದರು.

ADVERTISEMENT

ಅಜ್ಜಂಪುರ ರೈಲು ನಿಲ್ದಾಣದ ಮೇಲ್ಸೇತುವೆ ಕಾಮಗಾರಿ ಹಾಗೂ ಬೀರೂರು- ಶಿವಮೊಗ್ಗ ಜೋಡಿ ಮಾರ್ಗಕ್ಕೆ ಹಣ ಮೀಸಲಿಡಲಾಗಿದೆ. ಶಿವಮೊಗ್ಗ-ಶೃಂಗೇರಿ-ಮಂಗಳೂರು ಹೊಸ ಮಾರ್ಗದ ಸರ್ವೆ ಕಾರ್ಯವನ್ನು ಆರಂಭಿಸಲಾಗುತ್ತಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ‘ಚಿಕ್ಕಮಗಳೂರು-ತಿರುಪತಿಗೆ ರೈಲು ಸಂಪರ್ಕ ಕಲ್ಪಿಸಬೇಕು ಎಂಬ ಹಲವು ವರ್ಷಗಳ ಬೇಡಿಕೆ ಈಡೇರಿದೆ. ಹಿಂದೆ ಆಡಳಿತ ನಡೆಸಿದವರು ಕಂಬಿ ಇಲ್ಲದ ರೈಲು ಬಿಡುತ್ತಿದ್ದರು. ಬಿಜೆಪಿ ಸರ್ಕಾರ ಜನರ ಕನಸು ಸಾಕಾರಗೊಳಿಸಿದೆ’ ಎಂದರು.

ಇಂದಿರಾ ಗಾಂಧಿ ಅವರು ಚಿಕ್ಕಮಗಳೂರಿನಿಂದ ಸ್ಪರ್ಧೆ ಮಾಡಿ ಗೆದ್ದಿದ್ದರು. ಆಗ ಚಿಕ್ಕಮಗಳೂರಿಗೆ ರೈಲು ಮಾರ್ಗ ಬರಲಿದೆ ಎಂದುಕೊಂಡಿದ್ದೆವು. ಆದರೆ, ವಾಜಿಪೇಯಿ ಅವರ ಕಾಲದಲ್ಲಿ ಅನುಮೋದನೆ ಸಿಕ್ಕಿತು. ಮಲ್ಲಿಕಾರ್ಜುನ ಖರ್ಗೆ ಅವರು ರೈಲ್ವೆ ಸಚಿವರಾಗಿದ್ದಾಗ ಬಂದು ಉದ್ಘಾಟನೆ ಮಾಡಿದ್ದರು ಎಂದು ಹೇಳಿದರು.

ದೇವನೂರು ರೈಲು ನಿಲ್ದಾಣದಲ್ಲಿ ಈ ಹಿಂದೆ 13 ರೈಲು ನಿಲುಗಡೆಯಾಗುತ್ತಿತ್ತು. ಕೋವಿಡ್ ನಂತರ ನಿಲುಗಡೆಯಾಗುತ್ತಿಲ್ಲ. ಎಲ್ಲಾ ರೈಲುಗಳನ್ನು ಮತ್ತೆ ನಿಲುಗಡೆ ಮಾಡಿಸಲು ಕ್ರಮ ಕೈಗೊಳ್ಳಬೇಕು. ಕಣಿವೆಹಳ್ಳಿ ಬಳಿ ಕೆಳ ಸೇತುವೆಯಲ್ಲಿ ವಾಹನ ಸಂಚಾರ ಕಷ್ಟವಾಗಿದೆ. ಆದ್ದರಿಂದ ಮೇಲ್ಸೇತುವೆ ನಿರ್ಮಿಸಬೇಕು ಎಂಬ ಬೇಡಿಕೆ ಇದೆ. ಈಡೇರಿಸಬೇಕು ಎಂದು ಮನವಿ ಮಾಡಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ‘ಚಿಕ್ಕಮಗಳೂರಿನಿಂದ ತಿರುಪತಿಗೆ ಹೋಗುವ ರೈಲು ಮತ್ತೆ 48 ಗಂಟೆಗಳಲ್ಲಿ ವಾಪಸ್ ಬರಲು ಅವಕಾಶ ಮಾಡಬೇಕು. ಚಿಕ್ಕಮಗಳೂರು- ಶೃಂಗೇರಿ- ಉಡುಪಿ- ಕೊಲ್ಲೂರು ಹೊಸ ಮಾರ್ಗದ ಬಗ್ಗೆ ಸಮೀಕ್ಷೆ ನಡೆಸಬೇಕು. ಒಂದೇ ಭಾರತ್ ರೈಲು ಕಡೂರು ಅಥವಾ ಬೀರೂರಿನಲ್ಲಿ ನಿಲುಗಡೆಗೆ ಅವಕಾಶ ನೀಡಬೇಕು’ ಎಂದು ಮನವಿ ಮಾಡಿದರು.

ಶಾಸಕ ಟ.ಡಿ.ರಾಜೇಗೌಡ, ನಗರಸಭೆ ಅಧ್ಯಕ್ಷ ಶಿಲಾ ದಿನೇಶ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಎಸ್.ಸುರೇಶ್, ಕಾಂಗ್ರೆಸ್ ಮುಖಂಡರಾದ ಗಾಯಿತ್ರಿ ಶಾಂತೇಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ದಿಶಾ ಸಮಿತಿ ಸದಸ್ಯ ಎಚ್.ಸಿ.ಕಲ್ಮರುಡಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜಶೆಟ್ಟಿ ಇದ್ದರು.

ಹಾಸನ–ಚಿಕ್ಕಮಗಳೂರು ಎರಡು ವರ್ಷದಲ್ಲಿ ರೈಲು

ಹಾಸನ-ಬೇಲೂರು-ಚಿಕ್ಕಮಗಳೂರು ನಡುವಿನ ಹೊಸ ಮಾರ್ಗದಲ್ಲಿ ಇನ್ನು ಎರಡು ವರ್ಷಗಳಲ್ಲಿ ರೈಲು ಸಂಚಾರ ಆರಂಭವಾಗಲಿದೆ ಎಂದು ವಿ. ಸೋಮಣ್ಣ ಹೇಳಿದರು. ಭೂಸ್ವಾಧೀನ ಪ್ರಕ್ರಿಯೆ ಇನ್ನೊಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಹಾಸನ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಭೂಮಿ ಹಸ್ತಾಂತರವಾದ ಕೂಡಲೇ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು. ಹಾಸನ-ಚಿಕ್ಕಮಗಳೂರು ರೈಲು ಸಂಚಾರ ಆರಂಭವಾದರೆ ಒಂದೇ ಭಾರತ್ ರೈಲು ಸಹ ನಿಮ್ಮ ಜಿಲ್ಲೆಗೆ ಬರಲು ಅವಕಾಶ ಇದೆ. ಅದರ ಜತೆಗೆ 25ಕ್ಕೂ ಹೆಚ್ಚು ರೈಲುಗಳು ಚಿಕ್ಕಮಗಳೂರಿಗೆ ಬಂದು ಹೋಗಲಿವೆ ಎಂದು ಹೇಳಿದರು.

ಒಂದೇ ಸೋಲಿಗೆ ಭಯವೇಕೆ: ಸಿ.ಟಿ. ರವಿಗೆ ಸಮಾಧಾನ

‘ಒಂದೇ ಒಂದು ಸೋಲಿಗೆ ಏಕೆ ಭಯಪಡುವೆ ನಾನು ಐದು ಬಾರಿ ಸೋತಿದ್ದೇನೆ’ ಎಂದು ವಿ.ಸೋಮಣ್ಣ ಅವರು ಸಿ.ಟಿ.ರವಿ ಅವರಿಗೆ ಸಮಾಧಾನ ಮಾಡಿದರು. ‘ನಾನು ನಿನ್ನನ್ನು ತುಂಬಾ ವರ್ಷದಿಂದ ನೋಡುತ್ತಿದ್ದೇನೆ. ಗುರು ದತ್ತಾತ್ರೇಯನ ಆಶೀರ್ವಾದ ಪಡೆದಿದ್ದೀಯ. ಒಂದೊಂದು ಬಾರಿ ಜಾಸ್ತಿ ಬುದ್ಧಿವಂತರಿಗೆ ತೊಂದರೆಯಾಗುತ್ತದೆ. ಅದರಲ್ಲಿ ನಾನೂ ಒಬ್ಬ ನೀನು ಒಬ್ಬ’ ಎಂದು ನಗುತ್ತಲೇ ತಮಾಷೆ ಮಾಡಿದರು. ‘ನನ್ನಷ್ಟು ತೊಂದರೆಯಾಗಿದ್ದರೆ ನೀನು ಊರು ಬಿಟ್ಟು ಹೋಡಿ ಹೋಗುತ್ತಿದ್ದೆ. ತಂದೆ-ತಾಯಿ ಆಶೀರ್ವಾದ ಸಂಸ್ಕಾರ ಇದ್ದರೆ ಎಂತಹ ಸಂದರ್ಭದಲ್ಲೂ ಭಗವಂತ ನಮ್ಮನ್ನು ಕಾಪಾಡುತ್ತಾನೆ. ಒಂದು ಸೋಲಿಗೆ ಬೇಸರವಾಗಬೇಡ ನಾವಿಬ್ಬರು ಕೋಟ ಶ್ರೀನಿವಾಸ ಪೂಜಾರಿಯಾಗಲು ಸಾಧ್ಯವಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.