ಬೀರೂರು: ಪಟ್ಟಣದ ಕೋಡಿಹಳ್ಳಿ ರಸ್ತೆ ಮಾರ್ಗವಾಗಿ ಸಂಚರಿಸುವವರಿಗೆ ರೈಲ್ವೆ ಅಂಡರ್ ಪಾಸ್ ಬಳಿ ನಿಂತಿರುವ ಕೊಳಚೆ ನೀರು ಸಮಸ್ಯೆಯಾಗಿದೆ.
ಈ ರಸ್ತೆಯು ಬಿ.ಕೋಡಿಹಳ್ಳಿ, ಹೂವಿನಹಳ್ಳಿ, ಮುಂಡ್ರೆಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ರೈಲ್ವೆ ಅಂಡರ್ ಪಾಸ್ ಬಳಿ ಇರುವ ಮಠದಗುಂಡಿಗೆ ಪಟ್ಟಣದ ಮಾರ್ಗದ ಕ್ಯಾಂಪ್, ಸಜ್ಜನ್‍ರಾವ್ ಬಡಾವಣೆ, ಪುರಿಭಟ್ಟಿ, ಉಪ್ಪಾರ ಕ್ಯಾಂಪ್ ಬಡಾವಣೆಗಳ ಚರಂಡಿ ನೀರು ಯುಜಿಡಿ ಮೂಲಕ ಹರಿದು ಬರುತ್ತದೆ. ಅಂಡರ್ ಪಾಸ್‌ನ ಎರಡೂ ಬದಿ ಇಳಿಜಾರು ಇರುವ ಕಾರಣ ಇಲ್ಲಿ ಸಂಗ್ರಹವಾಗುತ್ತಿದೆ. ರಸ್ತೆ ಪಕ್ಕದಲ್ಲಿ ಡಕ್ ನಿರ್ಮಿಸಿ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲದ ಕಾರಣ ಈ ಸಮಸ್ಯೆ ಸೃಷ್ಟಿಯಾಗಿದೆ ಎಂಬುದು ನಿತ್ಯ ಸಂಚರಿಸುವವರ ಆರೋಪ.
ಕೋಡಿಹಳ್ಳಿ ಗ್ರಾಮದ ಕುಮಾರ್ ಮಾತನಾಡಿ, ‘ಪುರಸಭೆಗೆ ಹಲವಾರು ಬಾರಿ ಮನವಿ ಮಾಡಿದ್ದು, ಬೀರೂರಿನಿಂದ ಈ ರಸ್ತೆ ಹೊರತುಪಡಿಸಿ ನಮ್ಮ ಗ್ರಾಮಗಳಿಗೆ ತೆರಳಲು ಬೇರೆ ಯಾವುದೇ ರಸ್ತೆಯಿಲ್ಲ. ಅಂಡರ್ ಬ್ರಿಜ್ ಸಣ್ಣದಾಗಿ ಇರುವುದರಿಂದ ಬಳ್ಳಿಗನೂರು ಗ್ರಾಮದ ಮಾರ್ಗವಾಗಿ 10. ಕಿಮೀ. ಸುತ್ತಿ ನಮ್ಮ ಗ್ರಾಮ ತಲುಪಬೇಕಿದೆ. ರೈಲ್ವೆ ಇಲಾಖೆಗೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದರು.
ಅಂಡರ್ ಪಾಸ್ ಒಳಗೆ ಪಟ್ಟಣದ ಕ್ಯಾಂಪ್ ಭಾಗಕ್ಕೆ ಭದ್ರಾ ಕುಡಿಯುವ ನೀರು ಪೂರೈಸುವ ಪೈಪ್‍ಲೈನ್ ಇದೆ. ಅದು ಹಾನಿಯಾದರೆ ಕೊಳಚೆ ಹಾಗೂ ಕುಡಿಯುವ ನೀರು ಮಿಶ್ರಣಗೊಂಡು ಸಾಂಕ್ರಾಮಿಕ ರೋಗ ತಗಲುವ ಭೀತಿಯೂ ಇದೆ.
ಈ ಕುರಿತು ಮುಖ್ಯಾಧಿಕಾರಿ ವಿ.ಡಿ.ಶಾಂತಲಾ ಪ್ರತಿಕಿಯಿಸಿ, ‘ಮಳೆಯ ನೀರು ಮತ್ತು ಯುಜಿಡಿ ಸಂಪರ್ಕ ಒಡೆದು ಹೋಗಿರುವುದರಿಂದ ಇಲ್ಲಿ ಕೊಳಚೆ ನೀರು ಸಂಗ್ರಹವಾಗುತ್ತಿತ್ತು. ಸದ್ಯ ಯುಜಿಡಿ ಲೈನ್‍ನ್ನು ಸರಿಪಡಿಸಲಾಗಿದೆ. ಮಾರ್ಗದ ಕ್ಯಾಂಪ್‍ನಲ್ಲಿರುವ ಓವರ್‌ಹೆಡ್ ಟ್ಯಾಂಕ್‍ಗೆ ನೀರು ಸರಬರಾಜು ಮಾಡುವ ಪೈಪ್ ಅನ್ನು ದುಷ್ಕರ್ಮಿಗಳು ಒಡೆದಿದ್ದರು. ಆ ಬಗ್ಗೆ ಪೊಲೀಸ್ ಇಲಾಖೆಗೆ ದೂರು ದಾಖಲಿಸಿ, ಕೂಡಲೇ ಸರಿಪಡಿಸಲು ಕ್ರಮವಹಿಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.