ADVERTISEMENT

ನಿರಂತರ ಮಳೆ- ತಾಲ್ಲೂಕಿನಾದ್ಯಂತ 50 ಮನೆಗಳಿಗೆ ಹಾನಿ

ಎಡೆಬಿಡದೆ ಸುರಿದ ಮಳೆಗೆ ಹಲವೆಡೆ ಹಾನಿ, ವಿಷ್ಣು ಸಮುದ್ರ ಕೆರೆಗೆ ನೀರು-

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2022, 7:23 IST
Last Updated 7 ಆಗಸ್ಟ್ 2022, 7:23 IST
ಕಡೂರು ತಾಲ್ಲೂಕಿನ ನಿಡುವಳ್ಳಿಯಲ್ಲಿ ಮಳೆ ನೀರು ನುಗ್ಗಿ ಹಾನಿಗೊಳಗಾದ ಮನೆಗಳಿಗೆ ತಹಶೀಲ್ದಾರ್ ಜೆ.ಉಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಡೂರು ತಾಲ್ಲೂಕಿನ ನಿಡುವಳ್ಳಿಯಲ್ಲಿ ಮಳೆ ನೀರು ನುಗ್ಗಿ ಹಾನಿಗೊಳಗಾದ ಮನೆಗಳಿಗೆ ತಹಶೀಲ್ದಾರ್ ಜೆ.ಉಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.   

ಕಡೂರು: ತಾಲ್ಲೂಕಿನ ಗಡಿಗ್ರಾಮ ನಿಡುವಳ್ಳಿಯಲ್ಲಿ ಗುರುವಾರ ಭಾರಿ ಮಳೆ ಸುರಿದಿದ್ದು, 14 ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಗ್ರಾಮವಿಡೀ ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿತು. ನಿಡುವಳ್ಳಿ ಕೆರೆಯು ತುಂಬಿ ಕೆರೆ ಒಡೆಯುವ ಹಂತಕ್ಕೆ ತಲುಪಿತ್ತು. ಪಂಚನಹಳ್ಳಿ-ಬೆಲಗೂರು ಮಾರ್ಗದ ರಸ್ತೆಯನ್ನು ತುಂಡರಿಸಿ ಗಂಗನಹಳ್ಳಿ ಕೆರೆಗೆ ನೀರನ್ನು ಹರಿಸಲಾಯಿತು.

ಗ್ರಾಮದ ಮುದಿಯಪ್ಪನ ಕಟ್ಟೆಯಲ್ಲಿ ನೀರಿನ ಮಟ್ಟ ಹೆಚ್ಚಾಗಿ, 12ಕ್ಕೂ ಹೆಚ್ಚಿನ ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿದ್ದ ದವಸಧಾನ್ಯಗಳು ನೀರು ಪಾಲಾದವು. ಇಡೀ ರಾತ್ರಿ ಸುರಿವ ಮಳೆಯಲ್ಲಿಯೇ ಕಳೆಯುವಂತಾಯಿತು. ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮದ ಶಾಲೆ ಮತ್ತು ಅಂಗನವಾಡಿ ಕೇಂದ್ರಕ್ಕೆ ಸಂತ್ರಸ್ತರನ್ನು ಸ್ಥಳಾಂತರಿಸಿದರು. ಮಳೆಯಿಂದಾಗಿ ಹಾನಿಗೊಳಗಾದ ಮನೆಗಳಿಗೆ ಗುರುವಾರ ರಾತ್ರಿ ತಹಶೀಲ್ದಾರ್ ಜೆ. ಉಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಾಸಕ ಬೆಳ್ಳಿಪ್ರಕಾಶ್ ಮತ್ತು ಅಧಿಕಾರಿಗಳ ತಂಡ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿ ಹಾನಿಗೊಂಡ ಮನೆಗಳನ್ನು ಪರಿಶೀಲಿಸಿದರು. ಹಾನಿಗೊಳಗಾದ 12 ಮನೆಗಳಿಗೆ ಕಂದಾಯ ಇಲಾಖೆ ಮೂಲಕ ತಲಾ ₹10 ಸಾವಿರ ಮೊತ್ತದ ತಾತ್ಕಲಿಕ ಪರಿಹಾರದ ಚೆಕ್‌ ಅನ್ನು ಶಾಸಕರು ವಿತರಿಸಿದರು. ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು. ತಾಲ್ಲೂಕು ಪಂಚಾಯಿತಿ ಇಒ ಡಾ. ಟಿ.ಎಂ. ದೇವರಾಜ್‌ನಾಯ್ಕ, ಎಇಇಗಳಾದ ದಯಾನಂದ್, ತಮ್ಮಯ್ಯ, ಮತ್ತು ಕಂದಾಯ ವಿಭಾಗದ ಅಧಿಕಾರಿಗಳು ಇದ್ದರು.

ADVERTISEMENT

ವಿಷ್ಣು ಸಮುದ್ರ ಕೆರೆಗೆ ನೀರು-ರೈತರ ಹರ್ಷ:

ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಕೆರೆಗಳಿಗೆ ಹೆಚ್ಚಿನ ಪ್ರಮಾಣದ ನೀರು ಹರಿದುಬರಲಾರಂಭಿಸಿದೆ. ತಾಲ್ಲೂಕಿನ ಇತಿಹಾಸ ಪ್ರಸಿದ್ಧ ವಿಷ್ಣುಸಮುದ್ರ ಕೆರೆಗೆ ಶಾಣೆಗೆರೆ ಕೆರೆಯಿಂದ ನೀರು ಹರಿಯಲಾರಂಭಿಸಿದೆ. ದಶಕಗಳ ನಂತರ ವಿಷ್ಣು ಸಮುದ್ರ ಕೆರೆಗೆ ನೀರು ಹರಿಯಲಾರಂಭಿಸಿರುವುದು ರೈತಾಪಿ ವರ್ಗ ಹರ್ಷಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.