ADVERTISEMENT

ಗದ್ದೆ, ತೋಟಗಳಿಗೆ ನುಗ್ಗಿದ ನೀರು

ಮುಂದುವರೆದ ಮಳೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2021, 3:11 IST
Last Updated 25 ಜುಲೈ 2021, 3:11 IST
ನರಸಿಂಹರಾಜಪುರ ತಾಲ್ಲೂಕು ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೊಪ್ಪದಲ್ಲಿ ಕೆರೆ ಕೋಡಿ ಒಡೆದು ಭತ್ತ ನಾಟಿ ಮಾಡಿದ್ದ ಗದ್ದೆಗೆ ಹಾನಿಯಾಗಿದೆ
ನರಸಿಂಹರಾಜಪುರ ತಾಲ್ಲೂಕು ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೊಪ್ಪದಲ್ಲಿ ಕೆರೆ ಕೋಡಿ ಒಡೆದು ಭತ್ತ ನಾಟಿ ಮಾಡಿದ್ದ ಗದ್ದೆಗೆ ಹಾನಿಯಾಗಿದೆ   

ನರಸಿಂಹರಾಜಪುರ: ತಾಲ್ಲೂಕಿನಾದ್ಯಂತ ಶನಿವಾರವೂ ಮಳೆ ಮುಂದುವ ರಿದಿದೆ. ಶುಕ್ರವಾರಕ್ಕಿಂತ ಕೊಂಚ ತಗ್ಗಿತ್ತು.

ಶುಕ್ರವಾರ ಸಂಜೆ ಸುರಿದ ಭಾರಿ ಮಳೆಗೆ ತಾಲ್ಲೂಕಿನ ಮುತ್ತಿನ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸೂಬೂರು ಗ್ರಾಮದ ಹೊಸಕೊಪ್ಪದಲ್ಲಿ ಕೆರೆಯ ಕೋಡಿಯ ಜಮೀನಿನ ಮೇಲೆ ಹರಿದಿದೆ. ಗ್ರಾಮದ ಯತಿರಾಜ್ ಮತ್ತು ಇತರರ ನಾಟಿ ಮಾಡಿದ್ದ ಭತ್ತದ ಗದ್ದೆಗಳಲ್ಲಿ ಸಸಿ ಕೊಚ್ಚಿ ಕೊಂಡು ಹೋಗಿದ್ದು 100 ಎಕರೆಗೂ ಅಧಿಕ ಜಮೀನಿಗೆ ಹಾನಿ ಸಂಭವಿಸಿದೆ.

ತಾಲ್ಲೂಕಿನ ಕಡಹಿನಬೈಲು ಗ್ರಾಮದ ವ್ಯಾಪ್ತಿಯಲ್ಲಿ ಹಳ್ಳ ಉಕ್ಕಿ ಹರಿದ ಪರಿಣಾಮ ಆಲಂದೂರು ಸೇತುವೆ, ಗಾಂಧಿ ಗ್ರಾಮ ಸೇತುವೆ ಜಲಾವೃತವಾಗಿವೆ. ಅರಿಸಿನಗೆರೆ ಗ್ರಾಮದ ರೈತ ಜಯರಾಂ ಗೌಡರಿಗೆ ಸೇರಿದ ನಾಟಿ ಮಾಡಿದ್ದ ಭತ್ತದ ಗದ್ದೆ ಸಂಪೂರ್ಣ ಜಲಾವೃತ್ತಗೊಂಡಿದೆ. ಎ.ಎಸ್.ಮಂಜುನಾಥ್, ಏಲಿಯಾಸ್ ಎಂಬುವರ ಅಡಿಕೆ ತೋಟಕ್ಕೆ ನೀರು ನುಗ್ಗಿದೆ. ಎಂ.ಟಿ.ಕುಮಾರ್ ಎಂಬುವರ 8 ಅಡಿಕೆ ಮರಗಳು ಧರೆಗುರುಳಿ ಬಿದ್ದಿವೆ.

ADVERTISEMENT

ಮಂಜಿನಕೊಪ್ಪದ ರೈತ ಮಹಾಬಲ ಶೆಟ್ಟಿ ಮತ್ತು ಆಲಂದೂರಿನ ಬಿಷ್ಟಯ್ಯ ಅವರ ನಾಟಿ ಮಾಡಿದ ಭತ್ತ ಗದ್ದೆಗೆ ಹಾನಿಯಾಗಿದೆ. ನೆರ್ಲೆಕೊಪ್ಪದ ರೈತ ಯೋಗೀಶ್ ಅವರ ಅಡಿಕೆತೋಟ ಜಲಾವೃತವಾಗಿದೆ. ಭೀಮನರಿಯ ರೈತ ಬಿ.ಎಲ್.ಪ್ರಶಾಂತ್ ಅವರ ಅಡಿಕೆ ತೋಟದ ಧರೆ ಕುಸಿದಿದ್ದು, ಅಡಿಕೆ ಸಸಿಗಳಿಗೆ ಹಾನಿಯಾಗಿದೆ.

ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿಚಂದ್ರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗೇಶ್, ಗ್ರಾಮ ಲೆಕ್ಕಾಧಿಕಾರಿ ಅಂಜಲಿ, ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲಿಸಿದರು. ತಾಲ್ಲೂಕಿನ ಹಾತೂರು ಗ್ರಾಮದಲ್ಲಿ ಮಳೆಗೆ ಗ್ರಾಮದ ರಸ್ತೆ ಕೊಚ್ಚಿಕೊಂಡು ಹೋಗಿದೆ.

ತಾಲ್ಲೂಕಿನ ಗಾಂಧಿಗ್ರಾಮದ ಸಮೀಪ ಬರುವ ಮಡಬೂರು ಗುಡ್ಡ ಕುಸಿದು ಮಡಬೂರು ಎಸ್ಟೇಟ್‌ನಲ್ಲಿ ಅಡಿಕೆ ತೋಟಕ್ಕೆ ಹಾನಿಯಾಗಿದೆ. ಭಾರಿ ಮಳೆಗೆ ಪಟ್ಟಣದ ಅಂಬೇಡ್ಕರ್ ನಗರದ ನಿವಾಸಿಗಳಾದ ಶಾರದಮ್ಮ ಹಾಗೂ ಕೃಷ್ಣ ಎಂಬುವರ ಮನೆ ಗೋಡೆ ಕುಸಿದಿದೆ. ವಾರ್ಡ್ 1ರಲ್ಲಿ ಶಾಕೀರ್ ಎಂಬುವರ ಮನೆಯ ಗೋಡೆ ಕುಸಿದಿದೆ. ಸ್ಥಳಕ್ಕೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಚಂದ್ರಕಾಂತ್, ಪಟ್ಟಣ ಪಂಚಾಯಿತಿ ಸದಸ್ಯ ಶೋಜಾ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.