ಮೂಡಿಗೆರೆ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ಮಳೆಯು ಶನಿವಾರ ಬಿಡುವು ನೀಡಿದ್ದು, ಮಲೆನಾಡಿನಲ್ಲಿ ಬಿಸಿಲು ಕಾಣುವಂತಾಯಿತು.
ಶುಕ್ರವಾರ ತಡರಾತ್ರಿಯಿಂದ ಶನಿವಾರ ಮುಂಜಾನೆವರೆಗೆ ಗಾಳಿಯೊಂದಿಗೆ ಆರ್ಭಟಿಸಿದ ಮಳೆ, ಬೆಳಿಗ್ಗೆ 6ರ ಬಳಿಕ ಬಿಡುವು ನೀಡಿತು. ಸ್ಥಗಿತವಾಗಿದ್ದ ಕೃಷಿ ಚಟುವಟಿಕೆಗಳು ಮಳೆಯ ಬಿಡುವಿನಿಂದ ಗರಿಗೆದರಿದ್ದವು. ವಿದ್ಯುತ್ ಕಂಬಗಳ ದುರಸ್ತಿ ಚಟುವಟಿಕೆ ಬಿರುಸುಗೊಂಡಿದ್ದು, ಸಂಜೆ ವೇಳೆಗೆ ಕೆಲವು ಗ್ರಾಮಗಳಿಗೆ ವಿದ್ಯುತ್ ಪೂರೈಕೆ ಮಾಡಲಾಗಿತ್ತು. ನದಿಗಳಲ್ಲಿ ನೀರಿನ ಮಟ್ಟ ಇಳಿಕೆಯಾಗಿ ಸಾಮಾನ್ಯ ಸ್ಥಿತಿಗೆ ತಲುಪಿವೆ.
ಶುಕ್ರವಾರ ತಡರಾತ್ರಿ ಸುರಿದ ಮಳೆಗೆ ಹಾನಿ ಸಂಭವಿಸಿದೆ. ಕಿರುಗುಂದ ಗ್ರಾಮದ ಬಳಿ ಜಪಾವತಿ ನದಿಯು ಉಕ್ಕಿ ಹರಿದಿದ್ದು, ನದಿತೀರದ ಇಕ್ಕೆಲದಲ್ಲಿ ನಾಟಿ ಮಾಡಲಾಗಿದ್ದ ಭತ್ತದ ಗದ್ದೆಗಳು, ಶುಂಠಿ ಗದ್ದೆಗಳು ನೀರಿನಲ್ಲಿ ಕೊಚ್ಚಿ ಹೋಗಿ ಹಲವು ರೈತರಿಗೆ ನಷ್ಟ ಉಂಟಾಗಿದೆ. ಹೇಮಾವತಿ ನದಿಯು ಉಗ್ಗೆಹಳ್ಳಿ ಗದ್ದೆ ಬಯಲಿಗೆ ನುಗ್ಗಿದ್ದು, ಸಸಿಮಡಿಗಳಿಗೆ ಮರಳು ನುಗ್ಗಿ ಹಾನಿಯಾದರೆ, ನಾಟಿ ಮಾಡಿದ್ದ ಪೈರು ನೀರಿನಲ್ಲಿ ಕೊಚ್ಚಿ ಹೋಗಿದೆ. ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೈದುವಳ್ಳಿ ಗ್ರಾಮದಲ್ಲಿ ರಸ್ತೆಗೆ ಗುಡ್ಡ ಕುಸಿದು ಭೈದುವಳ್ಳಿ – ಮೂಲರಹಳ್ಳಿ ಸಂಪರ್ಕ ರಸ್ತೆಯು ಸಂಪೂರ್ಣವಾಗಿ ಸ್ಥಗಿತವಾಗಿತ್ತು.
ಮಳೆಯಿಂದಾಗಿ ಹಂತೂರು ಗ್ರಾಮದ ಜೇನುಬೈಲ್ ಸುಶೀಲಾ ಎಂಬುವರ ಮನೆ ಕುಸಿದು, ಮನೆಯಲ್ಲಿದ್ದ ಸುಶೀಲಾ, ಯಂಕಯ್ಯ ಎಂಬುವರಿಗೆ ಗಾಯಗಳಾಗಿದ್ದು, ಮಹಾತ್ಮಗಾಂಧಿ ಸ್ಮಾರಕ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ತ್ರಿಪುರ ಗ್ರಾಮದ ಪ್ರವೀಣ್, ಜೋಗಣ್ಣನಕೆರೆಯ ಹಾಲೂರಿನ ಮಂಜುನಾಥ್, ಹೆಸಗೋಡು ಗ್ರಾಮದ ಬೇಬಿ, ಹಳೆಕೋಟೆ ಗ್ರಾಮದ ನಿಂಗಮ್ಮ, ದೇವರುಂದದ ಗಿರಿಜಮ್ಮ ಎಂಬುವರ ಮನೆಗಳು ಜಖಂಗೊಂಡಿವೆ.
ಗಾಳಿಯಿಂದಾಗಿ ಕಾಫಿ ತೋಟಗಳಲ್ಲಿ ಮರಗಳು ನೆಲಕಚ್ಚಿದ್ದು, ಕಾಫಿ ಗಿಡಗಳು ನಾಶವಾಗಿವೆ. ನೆಲಕ್ಕೆ ಬಿದ್ದಿರುವ ಮರಗಳನ್ನು ತೆರವುಗೊಳಿಸುವುದು ಬೆಳೆಗಾರರಿಗೆ ಸವಾಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.