ADVERTISEMENT

ರಂಭಾಪುರಿ ಪೀಠ: ನವರಾತ್ರಿ ಉತ್ಸವಕ್ಕೆ ಇಂದು ಸಿಎಂ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2020, 5:53 IST
Last Updated 17 ಅಕ್ಟೋಬರ್ 2020, 5:53 IST
ರಂಭಾಪುರಿ ಸ್ವಾಮೀಜಿ
ರಂಭಾಪುರಿ ಸ್ವಾಮೀಜಿ   

ಬಾಳೆಹೊನ್ನೂರು: ರಂಭಾಪುರಿ ಪೀಠದಲ್ಲಿ ಇದೇ 17ರಿಂದ 26ರ ವರೆಗೆ ಶರನ್ನವರಾತ್ರಿ ಅಂಗವಾಗಿ ವಿಶೇಷ ಪೂಜಾ ಕಾರ್ಯಗಳು ಮತ್ತು ಧರ್ಮ ಸಮಾರಂಭ ನಡೆಯಲಿದ್ದು, ಶನಿವಾರ ರಾತ್ರಿ 7.30ಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಆನ್‌ಲೈನ್ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ರಂಭಾಪುರಿ ವೀರಸೋಮೇಶ್ವರ ಸ್ವಾಮಿಜಿ ತಿಳಿಸಿದರು.

ಪೀಠದಲ್ಲಿ ಮಹಾಲಯ ಅಮಾವಾಸ್ಯೆ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದ ಅವರು, ‘ನಾಡಿನ ಬಹುದೊಡ್ಡ ಹಬ್ಬ ನವರಾತ್ರಿ. ದುಷ್ಟ ಶಕ್ತಿ ದಮನ ಸಾತ್ವಿಕ ಶಕ್ತಿ ಸಂವರ್ಧನೆಗಾಗಿ ಆದಿಶಕ್ತಿಯ ಅವತಾರ. ಮನುಷ್ಯನಲ್ಲಿ ಮನೆ ಮಾಡಿರುವ ದುಷ್ಟ ದುರ್ಗುಣಗಳನ್ನು ನಿರ್ನಾಮ ಮಾಡಿ ಸಾತ್ವಿಕ ಶುದ್ಧ ಜನಸಮುದಾಯವನ್ನು ಬೆಳೆಸುವುದೇ ಧರ್ಮ ಪೀಠದ ಗುರಿ. ಪ್ರಾಚೀನ ಕಾಲದಿಂದ ಆಚರಿಸಿಕೊಂಡು ಬರುತ್ತಿರುವ ನವರಾತ್ರಿ ದಸರಾ ಹಬ್ಬ ಕ್ಷೇತ್ರದಲ್ಲಿ ಮೊಟ್ಟ ಮೊದಲಿಗೆ ವೈಶಿಷ್ಟ್ಯಪೂರ್ಣವಾಗಿ ಜರುಗುತ್ತಿದೆ’ ಎಂದರು.

‘17ರಂದು ಬೆಳಿಗ್ಗೆ ಲೋಕ ಕಲ್ಯಾಣಕ್ಕಾಗಿ ಇಷ್ಟಲಿಂಗ ಮಹಾಪೂಜೆ ನೆರವೇರಲಿದ್ದು, ಸಂಜೆ ಸಾಂಕೇತಿಕವಾಗಿ ಶರನ್ನವರಾತ್ರಿ ದಸರಾ ಆಚರಣೆ ನಡೆಯಲಿದೆ. ಕೋವಿಡ್-19 ನಿಯಮಾನುಸಾರ ಸರ್ಕಾರದ ನಿಬಂಧನೆಗೊಳಪಟ್ಟು ಪರಂಪರೆ ಸಾಂಪ್ರದಾಯಕವಾಗಿ ಎಲ್ಲ ಕಾರ್ಯಗಳು ಜರುಗಲಿವೆ. ಮಾಸ್ಕ್‌ ಧಾರಣೆ, ಅಂತರ ಕಾಯ್ದುಕೊಳ್ಳುವುದು, ಇದೆಲ್ಲವನ್ನು ಕಡ್ಡಾಯವಾಗಿ ಪಾಲಿಸಬೇಕು. ಆದಷ್ಟು ಭಕ್ತರು ಮನೆಗಳಲ್ಲೇ ಹಬ್ಬ ಆಚರಿಸಿ ಪೂಜೆ ನೆರವೇರಿಸಿವುದು ಸೂಕ್ತ’ ಎಂದು ಅವರು ಸಲಹೆ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.