ADVERTISEMENT

ರಸೀತಿ ಮೊಹರು ವಿಚಾರದಲ್ಲಿ ತಪ್ಪಾಗಿದೆ: ಜಯಂತ್‌ ಪೈ

ಶುಲ್ಕ ವಸೂಲಿಯಲ್ಲಿ ಗೋಲ್‌ಮಾಲ್‌ ನಡೆದಿಲ್ಲ: ಸಮಜಾಯಿಷಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2019, 12:41 IST
Last Updated 12 ಅಕ್ಟೋಬರ್ 2019, 12:41 IST
ಜಯಂತ್‌ ಪೈ
ಜಯಂತ್‌ ಪೈ   

ಚಿಕ್ಕಮಗಳೂರು: ‘ವಿಧಾನಪರಿಷತ್ತಿನ ಸದಸ್ಯ ಎಸ್‌.ಎಲ್‌.ಭೋಜೇಗೌಡ ಅವರು ಕೈಮರ ಚೆಕ್‌ಪೋಸ್ಟ್‌ನ ವಾಹನ ಪ್ರವೇಶ ಶುಲ್ಕ ವಸೂಲಾತಿ ಕೇಂದ್ರದಲ್ಲಿ ಪಡೆದ ರಸೀತಿ ಪುಸ್ತಕದಲ್ಲಿ ಮೊಹರು ಇಲ್ಲದಿದ್ದುದು ನಿಜ. ಶುಲ್ಕ ವಸೂಲಿಯಲ್ಲಿ ಗೋಲ್‌ಮಾಲ್‌ ನಡೆದಿಲ್ಲ’ ಎಂದು ಚಂದ್ರದ್ರೋಣ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಜಯಂತ್‌ ಪೈ ಸಮಜಾಯಿಷಿ ನೀಡಿದರು.

ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪ್ರವಾಸೋದ್ಯಮ ಸಮಿತಿ ತೀರ್ಮಾನದಂತೆ ಚಂದ್ರದ್ರೋಣ ಗ್ರಾಮ ಅರಣ್ಯ ಸಮಿತಿಯು ಚೆಕ್‌ ಪೋಸ್ಟ್‌ನಲ್ಲಿ ವಾಹನಗಳ ತಪಾಸಣೆ, ಶುಲ್ಕ ವಸೂಲಾತಿ ನಿರ್ವಹಿಸುತ್ತಿದೆ. ಈ ಸಮಿತಿಗೆ ಮುಜುರಾಯಿ ಇಲಾಖೆಯು ರಸೀತಿ ಪುಸ್ತಕಗಳನ್ನು ಒದಗಿಸುತ್ತಿದೆ. ಶುಲ್ಕದಲ್ಲಿ ಶೇ 50 ಜಿಲ್ಲಾಧಿಕಾರಿ ಖಾತೆಗೆ ಜಮೆ ಮಾಡಲಾಗುತ್ತದೆ. ಬಾಕಿ ಶೇ 50ಅನ್ನು ಸಮಿತಿಯು ಸ್ವಚ್ಛತೆ, ಸಿಬ್ಬಂದಿ ಪಗಾರ ಮೊದಲಾದವುಗಳಿಗೆ ಬಳಕೆ ಮಾಡುತ್ತದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸಮಿತಿಯ ಅರಣ್ಯಾಧಿಕಾರಿಗಳು ರಸೀತಿ ಪುಸ್ತಕಗಳಿಗೆ ಮೊಹರು ಹಾಕಿ ವಸೂಲಾತಿ ಕೇಂದ್ರದ ಸಿಬ್ಬಂದಿಗೆ ಅವನ್ನು ನೀಡುತ್ತಾರೆ. ರಸೀತಿ, ಪುಸ್ತಕಗಳ ಸಂಖ್ಯೆ ಎಲ್ಲ ಲೆಕ್ಕ ಇರುತ್ತದೆ. ಕೇಂದ್ರದಲ್ಲಿ ಭೋಜೇಗೌಡ ಪಡೆದ ರಸೀತಿ ಬುಕ್ಕಿನ ಚೀಟಿಗಳಲ್ಲಿ ಮೊಹರಿಲ್ಲದ ವಿಚಾರದಲ್ಲಿ ತಪ್ಪಾಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ’ ಎಂದರು.

ADVERTISEMENT

‘ಚೆಕ್‌ಪೋಸ್ಟ್‌ನಲ್ಲಿ ಸಮಿತಿ ಸಿಬ್ಬಂದಿ ಪ್ರವಾಸಿಗರ ವಾಹನಗಳ ತಪಾಸಣೆ ಮಾಡುತ್ತಾರೆ. ಪ್ರವಾಸಿ ವಾಹನಗಳಲ್ಲಿನ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿಲ್ಲ. ಪ್ರವಾಸಿಗರಿಗೆ ಕಿರುಕುಳ ನೀಡಿಲ್ಲ’ ಎಂದು ಉತ್ತರಿಸಿದರು.

‘ರಸೀತಿ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆದಿದೆ. ಡಿಸೆಂಬರ್‌ವರೆಗೆ ರಸೀತಿ ವ್ಯವಸ್ಥೆ ಮುಂದುವರೆಸಿ, ಡಿಜಿಟಲ್‌ ವ್ಯವಸ್ಥೆ ಅನುಷ್ಠಾನಗೊಳಿಸುವ ಬಗ್ಗೆ ಚರ್ಚಿಸಲಾಗಿದೆ. ಚೆಕ್‌ಪೋಸ್ಟ್‌ನಲ್ಲಿ ವಸ್ತುಗಳನ್ನು ಇಡಲು ಲಾಕರ್‌ ಅಳವಡಿಸುವ ಕುರಿತೂ ಚರ್ಚಿಸಲಾಗಿದೆ. ಚೆಕ್‌ ಪೋಸ್ಟ್‌ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಸಮವಸ್ತ್ರ ಮತ್ತು ಗುರುತಿನ ಚೀಟಿ ಕಡ್ಡಾಯಗೊಳಿಸಲಾಗಿದೆ.’ ಎಂದು ಪ್ರತಿಕ್ರಿಯಿಸಿದರು.

‘ಗಿರಿಶ್ರೇಣಿಯ ಸ್ವಚ್ಛತೆಗೆ ಸಮಿತಿ ಆದ್ಯತೆ ನೀಡಿದೆ. ಈ ಭಾಗದಲ್ಲಿ 68 ಕಡೆಗಳಲ್ಲಿ ಕಸ ತೊಟ್ಟಿಗಳನ್ನು ಇಡಲಾಗಿದೆ. ವಾರಕ್ಕೊಮ್ಮೆ ಕಸ ವಿಲೇವಾರಿಗೆ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಟ್ರಾಕ್ಟರ್‌, ಆರು ಮಂದಿ ಕೆಲಸಗಾರರನ್ನು ವ್ಯವಸ್ಥೆ ಮಾಡಲಾಗಿದೆ. ಪ್ಲಾಸ್ಟಿಕ್‌ ನಿಯಂತ್ರಣಕ್ಕೆ ಗಮನ ಹರಿಸಿದೆ’ ಎಂದು ತಿಳಿಸಿದರು.

ಸಮಿತಿಯ ಕಾಯದರ್ಶಿ ಡಿಆರ್‌ಎಫ್‌ಒ ಆರ್‌.ವೆಂಕಟೇಶ್‌, ಶಾಂತಕುಮಾರ್‌, ವೇಣುಗೋಪಾಲ್‌, ಚಂದ್ರೇಗೌಡ, ವೇಣುಗೋಪಾಲ್‌, ಉಮೇಶ್‌, ಉನ್ನಿಕೃಷ್ಣ, ರಾಘವೇಲು, ಗುರುವೇಶ್‌ ಇದ್ದರು.

ಪಟ್ಟಿ

ಖಾತೆಗೆ ಶುಲ್ಕ ಜಮೆ

ಜಮೆ; ಮೊತ್ತ

ಜಿಲ್ಲಾಧಿಕಾರಿ ಖಾತೆಗೆ ₹ 53.43 ಲಕ್ಷ

ಗ್ರಾಮ ಅರಣ್ಯ ಸಮಿತಿ ₹ 53.43 ಲಕ್ಷ

**

ಶುಲ್ಕ ವಸೂಲಾತಿ

ವರ್ಷ ಮೊತ್ತ

2014 7.17 ಲಕ್ಷ

2015 15.91 ಲಕ್ಷ

2016 18.68 ಲಕ್ಷ

2017 23.25 ಲಕ್ಷ

2018 21.52 ಲಕ್ಷ

2019 (ಅ.10ರವರೆಗೆ);20.30 ಲಕ್ಷ

ಒಟ್ಟು ₹ 1.06 ಕೋಟಿ

(ಮಾಹಿತಿ: ಚಂದ್ರದ್ರೋಣ ಗ್ರಾಮ ಅರಣ್ಯ ಸಮಿತಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.