ADVERTISEMENT

ಜೀರಿಗೆ ಮೆಣಸಿಗೆ ದಾಖಲೆ ಬೆಲೆ

ಕೆ.ಜಿಗೆ ₹1,500 ದರ, ಇಳುವರಿ ಗಣನೀಯವಾಗಿ ಇಳಿಕೆ

ಎಚ್‌.ಎಸ್‌.ಸತೀಶ್‌ ಜೈನ್‌
Published 8 ಅಕ್ಟೋಬರ್ 2023, 19:50 IST
Last Updated 8 ಅಕ್ಟೋಬರ್ 2023, 19:50 IST
ಜೀರಿಗೆ ಮೆಣಸು
ಜೀರಿಗೆ ಮೆಣಸು   

ಬಾಳೆಹೊನ್ನೂರು (ಚಿಕ್ಕಮಗಳೂರು ಜಿಲ್ಲೆ): ಮಲೆನಾಡು ಭಾಗದಲ್ಲಿ ಬೆಳೆಯುವ ಅತಿ ಹೆಚ್ಚು ಖಾರ ಹೊಂದಿರುವ ಜೀರಿಗೆ ಮೆಣಸಿಗೆ (ಗಾಂಧಾರಿ ಮೆಣಸು) ಇದೇ ಮೊದಲ ಬಾರಿಗೆ ಮಾರುಕಟ್ಟೆಯಲ್ಲಿ ಕೆ.ಜಿಗೆ ₹1,500 ದಾಖಲೆ ಬೆಲೆ ಬಂದಿದೆ.

ಇಂಗ್ಲಿಷ್‌ನಲ್ಲಿ ‘ಬರ್ಡ್‌ ಐ ಚಿಲ್ಲಿ’ ಎಂದು ಕರೆಯಲಾಗುವ ಈ ಮೆಣಸಿಗೆ ಈಗ ಎಲ್ಲಿಲ್ಲದ ಬೇಡಿಕೆ. ಹಪ್ಪಳ, ಉಪ್ಪಿನಕಾಯಿ, ಕಷಾಯ, ಸಾಂಬಾರಿನಲ್ಲಿ ಬಳಸಲಾಗುತ್ತದೆ. ಗರಿಷ್ಠ ಔಷಧ ಗುಣ ಹೊಂದಿರುವ ಈ ಮೆಣಸನ್ನು ಹಣ್ಣಾದಾಗ ಕೊಯ್ದು ಒಣಗಿಸಿ ಮಾರಾಟ ಮಾಡಲಾಗುತ್ತದೆ. ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರದಿಂದಲೂ ಬೇಡಿಕೆ ಇದೆ.

ಜೀರಿಗೆ ಮೆಣಸಿಗೆ ಕೆ.ಜಿಗೆ ಸಾಮಾನ್ಯವಾಗಿ ₹600 ರಿಂದ ₹800ರ ಆಸುಪಾಸಿನಲ್ಲಿ ದರ ಇರುತ್ತಿತ್ತು. ಆದರೆ, ಈ ಬಾರಿ ಮಳೆ ಕೊರತೆಯಿಂದಾಗಿ ಬೆಳೆ ನಾಶವಾಗಿದ್ದು, ಇಳುವರಿ ಕುಂಠಿತವಾಗಿದೆ. ತೋಟಗಳಲ್ಲಿ ಕಳೆನಾಶಕ ಸಿಂಪಡಣೆ, ಯಂತ್ರಗಳ ಸಹಾಯದಿಂದ ಕಳೆ ತೆಗೆಯುವ ಸಂದರ್ಭದಲ್ಲಿ ಮೆಣಸಿನ ಗಿಡಗಳು ನಾಶವಾಗಿದೆ. ಕಳಸ, ಶೃಂಗೇರಿ, ಕೊಪ್ಪ, ಜಯಪುರದ ಮಾರುಕಟ್ಟೆಯಲ್ಲಿ ಈ ಹಿಂದೆ ತಿಂಗಳಿಗೆ ಕ್ವಿಂಟಲ್‌ಗಟ್ಟಲೆ ಸಂಗ್ರಹವಾಗುತ್ತಿದ್ದ ಗಾಂಧಾರಿ ಮೆಣಸು ಈ ವರ್ಷ ಕೆ.ಜಿ. ಲೆಕ್ಕಕ್ಕೆ ಇಳಿದಿದೆ.

ADVERTISEMENT

ಕೊಡಗು ಜಿಲ್ಲೆಯಲ್ಲೂ ಸ್ವಲ್ಪ ಪ್ರಮಾಣದಲ್ಲಿ ಗಾಂಧಾರಿ ಮೆಣಸು ಬೆಳೆಯಲಾಗುತ್ತದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಾಳೆಹೊನ್ನೂರು ಅತಿ ದೊಡ್ಡ ಮಾರುಕಟ್ಟೆಯಾಗಿದ್ದು ಹಾವೇರಿ, ಸಕಲೇಶಪುರ, ಶಿರಸಿ, ಆಂಧ್ರಪ್ರದೇಶದಿಂದ ವ್ಯಾಪಾರಿಗಳು ಬಂದು ಇಲ್ಲಿಂದ ಮೆಣಸು ಖರೀದಿಸುತ್ತಾರೆ. ಕೇರಳ, ತಮಿಳುನಾಡಿನಿಂದಲೂ ಸಣ್ಣ ವ್ಯಾಪಾರಿಗಳೂ ಜೀರಿಗೆ ಮೆಣಸು ತಂದು, ಇಲ್ಲಿನ ಸಗಟು ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಾರೆ.

‘ಬಾಳೆಹೊನ್ನೂರಿನಿಂದ ವಿವಿಧ ರಾಜ್ಯಗಳಿಗೆ ಹಾಗೂ ರಾಜ್ಯದೊಳಗೆ ವರ್ಷಕ್ಕೆ ಸುಮಾರು 80 ರಿಂದ 90 ಕ್ವಿಂಟಲ್‌ನಷ್ಟು ಜೀರಿಗೆ ಮೆಣಸು ಮಾರಾಟವಾಗುತ್ತದೆ. ಆದರೆ, ಈ ಬಾರಿ ಮಾರುಕಟ್ಟೆಯಲ್ಲಿ ಈ ಮೆಣಸಿನ ತೀವ್ರ ಕೊರತೆ ಇರುವುದಿಂದ ಬೆಲೆಯಲ್ಲಿ ಏರಿಕೆಯಾಗಿದೆ. ಉತ್ತರ ಭಾರತದಲ್ಲಿ ಗಣೇಶ ಹಬ್ಬದಿಂದ ದೀಪಾವಳಿ ಹಬ್ಬದ ಅವಧಿಯಲ್ಲಿ ಈ ಮೆಣಸಿಗೆ ಹೆಚ್ಚು ಬೇಡಿಕೆ ಇರುತ್ತದೆ. ನಂತರ ದರ ಸರಾಸರಿ ಮಟ್ಟಕ್ಕೆ ಇಳಿಯುತ್ತದೆ’ ಎನ್ನುತ್ತಾರೆ ಪಟ್ಟಣದ ಜೀರಿಗೆ ಮೆಣಸಿನ ವ್ಯಾಪಾರಿ ನಯಾಜ್ ಅಹಮ್ಮದ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.