ನರಸಿಂಹರಾಜಪುರ: ‘ಗ್ರಾಮದ ಅಭಿವೃದ್ಧಿಗಾಗಿ ರಸ್ತೆ ವಿಸ್ತರಣೆಗೆ ಎಲ್ಲರೂ ಸಹಕಾರ ನೀಡಬೇಕು’ ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಮನವಿ ಮಾಡಿದರು.
ಪಟ್ಟಣದ ವ್ಯಾಪ್ತಿಯಲ್ಲಿ ರಸ್ತೆ ವಿಸ್ತರಣೆಗೆ ಸಂಬಂಧಿಸಿದಂತೆ ಕೋಟೆ ಆಂಜನೇಯ ಸಮುದಾಯ ಭವನದಲ್ಲಿ ಬುಧವಾರ ನಡೆದ ಆಸ್ತಿ ಖಾತೆದಾರರೊಂದಿಗೆ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪಟ್ಟಣದ ಅಭಿವೃದ್ಧಿಗೆ ₹100 ಕೋಟಿಗೂ ಅಧಿಕ ಅನುದಾನ ನೀಡಿದ್ದಾರೆ. ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಪರಿಹಾರ ಕೊಟ್ಟು ರಸ್ತೆ ವಿಸ್ತರಣೆಗೆ ₹60 ಕೋಟಿ ಅನುದಾನ ತರಲಾಗಿದೆ. ಇದಕ್ಕೆ ಸಚಿವ ಸಂಪುಟದ ಒಪ್ಪಿಗೆಯೂ ದೊರೆತಿದೆ. ಒಂದು ವರ್ಷದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಅನುದಾನ ಕೊರತೆಯಾದಲ್ಲಿ ಹೆಚ್ಚಿನ ಅನುದಾನ ನೀಡುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ. ರಸ್ತೆ ವಿಸ್ತರಣೆಯಾಗುವುದರಿಂದ ವ್ಯಾಪಾರ, ವಹಿವಾಟುಗಳು ಹೆಚ್ಚಾಗುತ್ತದೆ. ಜೊತೆಗೆ ಆಸ್ತಿ ಮೌಲ್ಯವೂ ದ್ವಿಗುಣಗೊಳ್ಳುತ್ತದೆ ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಮಾತನಾಡಿ, ‘ಎಂ.ಶ್ರೀನಿವಾಸ್ ಅವರು ಯಾವುದೇ ಸ್ವಾರ್ಥವಿಲ್ಲದೆ ರಸ್ತೆ ವಿಸ್ತರಣೆಗೆ ಅನುದಾನ ತಂದುಕೊಟ್ಟಿದ್ದಾರೆ. ಹಿಂದೆ ಮಿನಿವಿಧಾನ ಸೌಧದಿಂದ ಸುಂಕದಕಟ್ಟೆವರೆಗೆ ರಸ್ತೆ ವಿಸ್ತರಣೆಯಾದಾಗ ಪರಿಹಾರ ನೀಡಿಲ್ಲ. ಪಟ್ಟಣದ ವ್ಯಾಪ್ತಿಯಲ್ಲಿ ಹಲವು ಮನೆಗಳು ಬೀಳುವ ಹಂತದಲ್ಲಿದೆ. ರಸ್ತೆ ವಿಸ್ತರಣೆ ರಾಜಕಾರಣ ಹೊರತು ಪಡಿಸಿದ ಪ್ರೀತಿ, ವಿಶ್ವಾಸ ಕಾಮಗಾರಿಯಾಗಿದ್ದು ಭವಿಷ್ಯದ ಪೀಳಿಗೆಗಾಗಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ’ ಎಂದರು.
ಭದ್ರಾ ಕಾಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಪಿ.ಅಂಶುಮಂತ್ ಮಾತನಾಡಿ, ‘ತಾಲ್ಲೂಕಿನ ಜನರು ಭದ್ರಾ ಅಣೆಕಟ್ಟು ನಿರ್ಮಾಣಕ್ಕೆ ತಮ್ಮ ಬದುಕನ್ನು ತ್ಯಾಗ ಮಾಡಿ ಮಧ್ಯ ಕರ್ನಾಟಕದವರಿಗೆ ಬದುಕನ್ನು ಕೊಟ್ಟಿದ್ದಾರೆ. ನಾಗರಿಕರ ಆತಂಕ ದೂರಮಾಡಿ ಯಾರು ನೋವಾಗದ ರೀತಿಯಲ್ಲಿ ರಸ್ತೆ ವಿಸ್ತರಣೆ ಮಾಡಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ‘ನರಸಿಂಹರಾಜಪುರ ಎಂದು ನಾಮಕರಣಗೊಂಡು 100 ವರ್ಷಗಳು ಸಂದ 2015ರಲ್ಲಿ ತಾಲ್ಲೂಕಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಹೊನ್ನೆಕೂಡಿಗೆ ಹಾಗೂ ಬಾಳೆಹೊನ್ನೂರು ಸೇತುವೆಗೆ ಅನುದಾನ ನೀಡಿದ್ದರು. ಪ್ರಸ್ತುತ ಎಂ.ಶ್ರೀನಿವಾಸ್ ಅವರು ವರ್ತಕ ಸಂಘದ ಮನವಿ ಮೇರೆಗೆ ಪ್ರಯತ್ನದಿಂದ ಪರಿಹಾರ ನೀಡಿ, ರಸ್ತೆ ವಿಸ್ತರಣೆ ಮಾಡಲು ಅನುದಾನ ತಂದಿದ್ದಾರೆ. ಹಿಂದೆ ಚಿಕ್ಕಮಗಳೂರು, ಬಾಳೆಹೊನ್ನೂರು, ಕೊಪ್ಪ, ನರಸಿಂಹರಾಜಪುರ ಭಾಗದಲ್ಲೂ ರಸ್ತೆ ವಿಸ್ತರಣೆ ಮಾಡಿದಾಗ ಪರಿಹಾರ ನೀಡಿಲ್ಲ. ಪ್ರಸ್ತುತ ರಸ್ತೆ ವಿಸ್ತರಣೆ ಸಂದರ್ಭದಲ್ಲಿ ಗರಿಷ್ಠ ಪರಿಹಾರ ನೀಡಲಾಗುವುದು. ಊರಿನ ಅಭಿವೃದ್ಧಿಗೆ ರಸ್ತೆ ವಿಸ್ತರಣೆ ಅನಿವಾರ್ಯವಾಗಿದೆ. ಖಾಲಿ ನಿವೇಶನಕ್ಕೂ ಪರಿಹಾರ ನೀಡಲಾಗುವುದು. ಪಟ್ಟಣಕ್ಕೆ ಮುತ್ತಿನಕೊಪ್ಪದ ತುಂಗಾನದಿಯಿಂದ 24x7 ಕುಡಿಯುವ ನೀರು ಪೂರೈಕೆಗೆ ₹23 ಕೋಟಿ ಮಂಜೂರಾಗಿದ್ದು, ಟೆಂಡರ್ ಸಹ ಆಗಿದೆ. ಮಳೆ ಕಡಿಮೆಯಾದ ಕೂಡಲೇ ರಸ್ತೆ ದುರಸ್ತಿಪಡಿಸಲಾಗುವುದು’ ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ, ಉಪಾಧ್ಯಕ್ಷೆ ಉಮಾಕೇಶ್, ಎಂಜಿನಿಯರ್ ಶ್ರೀಧರ್, ತಹಶೀಲ್ದಾರ್ ನೂರುಲ್ ಹುದಾ, ಸದಸ್ಯರಾದ ಶೋಜಾ, ಮುನಾವರಪಾಷ, ಮುಕುಂದ, ಸುರಯ್ಯಬಾನು, ಕುಮಾರಸ್ವಾಮಿ, ಸೈಯದ್ ವಸೀಂ, ರೀನಾಮೋಹನ್, ಮಾಜಿ ಅಧ್ಯಕ್ಷರಾದ ಲಕ್ಷ್ಮಣ್ ಶೆಟ್ಟಿ, ರಘುವೀರ್, ಬಿ.ಎಸ್.ಆಶೀಶ್ ಕುಮಾರ್, ಸದಾಶಿವ, ಆರ್.ರಾಜಶೇಖರ್, ವಿಜಯಲಕ್ಷ್ಮೀ ಇದ್ದರು.
ರಸ್ತೆ ವಿಸ್ತರಣೆಯನ್ನು ಸರ್ಕಾರದ ನಿಯಮಾನುಸಾರ ಪರಿಹಾರ ನೀಡಿ ಕೈಗೊಳ್ಳಲಾಗುತ್ತದೆ. ಈ ಪ್ರದೇಶದಲ್ಲಿ ಬಹುತೇಕ ಮನೆಗಳು ರಸ್ತೆಗೆ ಹೊಂದಿಕೊಂಡಂತಿದ್ದು ಶಿಥಿಲಾವಸ್ಥೆಗೆ ತಲುಪಿವೆ. ಇವುಗಳನ್ನು ತೆರವುಗೊಳಿಸಿ ಹೊಸ ಮನೆ ನಿರ್ಮಿಸಿಕೊಳ್ಳುವುದರಿಂದ ನೆಮ್ಮದಿಯಿಂದ ಬದುಕಬಹುದು. ನಗರದ ಸೌಂದರ್ಯವು ಹೆಚ್ಚುತ್ತದೆ. ವೃದ್ಧರು ಮಕ್ಕಳು ಸುರಕ್ಷಿತವಾಗಿ ಓಡಾಡಲು ಅನುಕೂಲವಾಗುತ್ತದೆ. ಪರಿಹಾರ ನೀಡಿ ರಸ್ತೆ ವಿಸ್ತರಣೆ ಮಾಡುತ್ತಿರುವುದರಿಂದ ನ್ಯಾಯಾಲಯಕ್ಕೆ ಹೋದರೂ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಹೇಳಿದರು.
ಪಟ್ಟಣದಿಂದ ಹೊನ್ನೆಕೂಡಿಗೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿ ಮಳೆ ಕಡಿಮೆಯಾದ ಕೂಡಲೇ ಪೂರ್ಣಗೊಳ್ಳಲಿದೆ. ಈ ವ್ಯಾಪ್ತಿಯಲ್ಲಿ 3 ಎಕರೆ ಜಾಗದಲ್ಲಿ ಪ್ರವಾಸೋದ್ಯಮ ನಿಗಮದಿಂದ ರೆಸಾರ್ಡ್ ನಿರ್ಮಿಸಲಾಗುವುದು. ಅಲ್ಲದೆ ಚೆಕ್ ಡ್ಯಾಂ ನಿರ್ಮಿಸಿ ಜಲಕ್ರೀಡೆಗಳಿಗೂ ಅವಕಾಶ ಕಲ್ಪಿಸಲಾಗುವುದು. ಇದರಿಂದ ಪ್ರವಾಸೋದ್ಯಮವೂ ಅಭಿವೃದ್ಧಿಯಾಗಿ ಊರಿನ ಆರ್ಥಿಕತೆಯೂ ಬೆಳವಣಿಗೆಯಾಗುತ್ತದೆ. ರಸ್ತೆ ವಿಸ್ತರಣೆಯಲ್ಲಿ ನಾನು ಹುಟ್ಟಿ ಬೆಳೆದ ಮನೆಯೂ ಸಹ ಹೋಗುತ್ತದೆ. ಆದರೆ ಊರಿನ ಅಭಿವೃದ್ಧಿಗಾಗಿ ತ್ಯಾಗ ಮಾಡಲಾಗುತ್ತಿದೆ. ಯಾವುದೇ ಸ್ವಾರ್ಥವಿಲ್ಲದೆ ಊರಿನ ಅಭಿವೃದ್ಧಿಗೆ ಕಷ್ಟಪಟ್ಟು ಅನುದಾನ ಬಿಡುಗಡೆ ಮಾಡಿಸಲಾಗಿದ್ದು ಎಲ್ಲರೂ ಸಹಕಾರ ನೀಡಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.