ADVERTISEMENT

‌ಕಡೂರು: ರಸ್ತೆ ಮರು ಡಾಂಬರೀಕರಣಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 7 ಮೇ 2025, 12:59 IST
Last Updated 7 ಮೇ 2025, 12:59 IST
ತಾಲ್ಲೂಕಿನ ತಂಗಲಿ ಕ್ರಾಸ್ ಬಳಿ ₹5.90 ಕೋಟಿ ವೆಚ್ಚದ ರಸ್ತೆ ಮರು ಡಾಂಬರೀಕರಣಕ್ಕೆ ಶಾಸಕ ಕೆ.ಎಸ್.ಆನಂದ್ ಚಾಲನೆ ನೀಡಿದರು
ತಾಲ್ಲೂಕಿನ ತಂಗಲಿ ಕ್ರಾಸ್ ಬಳಿ ₹5.90 ಕೋಟಿ ವೆಚ್ಚದ ರಸ್ತೆ ಮರು ಡಾಂಬರೀಕರಣಕ್ಕೆ ಶಾಸಕ ಕೆ.ಎಸ್.ಆನಂದ್ ಚಾಲನೆ ನೀಡಿದರು   

ಕಡೂರು: ತಾಲ್ಲೂಕಿನ ತಂಗಲಿ ಕ್ರಾಸ್ ಬಳಿಯಿಂದ ಬೀರೂರುವರೆಗೆ 11.8 ಕಿ.ಮೀ. ಉದ್ದದ ರಸ್ತೆ ಮರು ಡಾಂಬರೀಕರಣ ಕಾಮಗಾರಿಗೆ ಶಾಸಕ ಕೆ.ಎಸ್.ಆನಂದ್ ಬುಧವಾರ ಚಾಲನೆ ನೀಡಿದರು. ₹5.90 ಕೋಟಿ ವೆಚ್ಚದಲ್ಲಿ ರಸ್ತೆ ಮರು ಡಾಂಬರೀಕರಣಗೊಳ್ಳಲಿದೆ. 

‘ರಾಷ್ಟ್ರೀಯ ಹೆದ್ದಾರಿ ಬೈಪಾಸ್ ಕಾಮಗಾರಿ ಪ್ರಗತಿಯಲ್ಲಿದೆ. ಕಡೂರು ಮತ್ತು ಬೀರೂರು ಪಟ್ಟಣಗಳನ್ನು ಹಾದು ಹೋಗಿರುವ ಈ ರಸ್ತೆ ಅಭಿವೃದ್ಧಿ ಕಳೆದ ಆರು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ರಸ್ತೆಯನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲು ವಿಳಂಬವಾಗಿತ್ತು. ಇದೀಗ ಆ ತೊಂದರೆ ಪರಿಹಾರವಾಗಿ ರಸ್ತೆ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರವಾಗಿದೆ. ಮೊದಲ 2 ಕಿ.ಮೀ.ವರೆಗೆ ಎರಡು ಪದರ ಮತ್ತು ಅಲ್ಲಿಂದ ಮುಂದಕ್ಕೆ ಒಂದು ಪದರ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಈ ರಸ್ತೆ 7 ಮೀಟರ್ ಅಗಲ ಇರುತ್ತದೆ. ಮುಂಬರುವ ದಿನಗಳಲ್ಲಿ ಈ ರಸ್ತೆಯನ್ನು 10  ಮೀಟರ್‌ನಷ್ಟು ಅಗಲೀಕರಣಗೊಳಿಸಲಾಗುವುದು. ವೇದಾ ನದಿ ಸೇತುವೆ ಬಗ್ಗೆಯೂ ಗಮನ ಹರಿಸಲಾಗುವುದು. ಕಡೂರು ಮತ್ತು ಬೀರೂರು ಪಟ್ಟಣಗಳ ವಾಣಿಜ್ಯ ಅಭಿವೃದ್ಧಿ ದೃಷ್ಟಿಯಿಂದ ಈ ರಸ್ತೆ ನಿರ್ಮಾಣ ಮಹತ್ವದ್ದಾಗಿದೆ’ ಎಂದು ಆನಂದ್‌ ಹೇಳಿದರು.

ಲೋಕೋಪಯೋಗಿ ಇಲಾಖೆಯ ಎಇಇ ಬಸವರಾಜ ನಾಯ್ಕ ಮಾತನಾಡಿ, ‘ಈ ರಸ್ತೆ ಕಾಮಗಾರಿಯನ್ನು ಒಂದು ತಿಂಗಳೊಳಗಾಗಿ ಪೂರ್ಣಗೊಳಿಸಲಾಗುವುದು’ ಎಂದರು.

ADVERTISEMENT

ತಂಗಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್, ಮುಖಂಡರಾದ ನಾರಾಯಣ ನಾಯ್ಕ, ಗೋವಿಂದಪ್ಪ, ಪಾಂಡಣ್ಣ, ಶ್ರೀನಿವಾಸ್ ನಾಯ್ಕ,ಪ್ಯಾರೇಜಾನ್ ಇದ್ದರು.

ಕಡೂರು ಪಟ್ಟಣದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 206ರ ಬೈಪಾಸ್ ಕಾಮಗಾರಿ ಪ್ರಗತಿಯಲ್ಲಿದ್ದು, ಕಡೂರು ಪಟ್ಟಣದೊಳಗೆ ಹಾದು ಹೋಗುವ ರಸ್ತೆಯನ್ನು ಉಪೇಕ್ಷಿಸಲಾಗಿತ್ತು. ರಸ್ತೆಯುದ್ದಕ್ಕೂ ಗುಂಡಿಗಳಾಗಿ ಸಂಚಾರ ದುಸ್ತರವಾಗಿತ್ತು. ಈ ಕುರಿತು ಪ್ರಜಾವಾಣಿಯಲ್ಲಿ ವರದಿ ಪ್ರಕಟವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.