ನರಸಿಂಹರಾಜಪುರ: ‘ಪಟ್ಟಣದ ವ್ಯಾಪ್ತಿಯಲ್ಲಿ ಪರಿಹಾರ ನೀಡಿ ರಸ್ತೆ ವಿಸ್ತರಣೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹60 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಶೀಘ್ರ ರಸ್ತೆ ಕಾಮಗಾರಿ ಆರಂಭಿಸುವಂತೆ ಸೂಚನೆ ನೀಡಿದ್ದಾರೆ’ ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಹೇಳಿದರು.
ಪಟ್ಟಣದ ವ್ಯಾಪ್ತಿಯಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ಆರಂಭಿಸಲು ಕೈಗೊಳ್ಳಬೇಕಾಗಿರುವ ಪೂರ್ವ ಸಿದ್ಧತೆಯ ಬಗ್ಗೆ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಅವರೊಂದಿಗೆ ಶನಿವಾರ ಪ್ರವಾಸಿ ಮಂದಿರದಲ್ಲಿ ಅವರು ಸಮಾಲೋಚನೆ ನಡೆಸಿದರು.
‘ರಸ್ತೆ ವಿಸ್ತರಣೆಗೆ ಬೇಕಾಗಿರುವ ಭೂಸ್ವಾಧೀನ ಮಾಡಿಕೊಳ್ಳಲು ಎರಡು ರೀತಿಯ ಪ್ರಕ್ರಿಯೆ ಕೈಗೊಳ್ಳಬಹುದು. ಮೊದಲನೇದಾಗಿ ರಸ್ತೆ ವಿಸ್ತರಣೆಯಾಗುವ ಪ್ರದೇಶದಲ್ಲಿರುವ ಖಾತೆ ಹೊಂದಿರುವ ಕಟ್ಟಡದ ಮಾಲೀಕರಿಗೆ ಎಷ್ಟು ಜಾಗ ಸ್ವಾಧೀನ ಪಡಿಸಿಕೊಳ್ಳಲಾಗುತ್ತದೆ ಎಂಬ ಬಗ್ಗೆ ನೋಟಿಸ್ ನೀಡಬಹುದು. ಎರಡನೇದಾಗಿ ರಸ್ತೆ ವಿಸ್ತರಣೆಗೆ ಬೇಕಾಗಿರುವ ಜಾಗ ಬಿಟ್ಟು ಕೊಡುವುದರಿಂದ ಅದಕ್ಕೆ ಸರ್ಕಾರದ ನಿಯಮಾನುಸಾರ ಪರಿಹಾರ ನೀಡುವುದರಿಂದ ಖಾತೆದಾರರು ಸ್ವಯಂ ಪ್ರೇರಿತವಾಗಿ ಜಾಗವನ್ನು ಬಿಟ್ಟುಕೊಡಬಹುದು. ಇದರ ಬಗ್ಗೆ ಚರ್ಚಿಸಲು ಮತ್ತು ಎಲ್ಲರ ವಿಶ್ವಾಸ ಪಡೆಯಲು ಶೀಘ್ರ ಖಾತೆದಾರರ ಸಭೆ ಕರೆಯಲು ಕ್ರಮಕೈಗೊಳ್ಳಬೇಕು’ ಎಂದರು.
ಪ್ರಾಥಮಿಕ ಹಂತದ ತಯಾರಿ ಮಾಡಿಕೊಂಡ ಬಳಿಕ ಮುಂದಿನ ದಿನಗಳಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಭೆ ಕರೆಯಲಾಗುವುದು. ಹೊನ್ನೆಕೂಡಿಗೆ ಸೇತುವೆ ಕಾಮಗಾರಿ ತ್ವರಿತವಾಗಿ ಸಾಗಿದ್ದು, ಇದು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ಸೇತುವೆ ಸಂಪರ್ಕ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಸೇತುವೆ ಹಾಗೂ ಪಟ್ಟಣದ ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿದರೆ ಲೋಕಾರ್ಪಣೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪಟ್ಟಣಕ್ಕೆ ಬರಲಿದ್ದಾರೆ ಅವರು ತಿಳಿಸಿದರು.
ಹೊನ್ನೆಕೂಡಿಗೆ ಸೇತುವೆಯ ಬಳಿಯಿರುವ ರಾಜ್ಯ ಪ್ರವಾಸೋದ್ಯಮ ನಿಗಮ 3 ಎಕರೆ ಜಮೀನಿನಲ್ಲಿ ₹20 ಕೋಟಿ ವೆಚ್ಚದಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದಕ್ಕೆ ಮುಖ್ಯಮಂತ್ರಿ ಅನುದಾನ ನೀಡುವ ಭರವಸೆ ನೀಡಿದ್ದಾರೆ ಎಂದು ಎಂ.ಶ್ರೀನಿವಾಸ್ ಹೇಳಿದರು.
ಲೋಕೋಪಯೋಗಿ ಇಲಾಖೆಯ ಚಿಕ್ಕಮಗಳೂರು ವಿಭಾಗದ ಇಇ ಶ್ರೀಧರ್ ಅವರು, ‘ಪಟ್ಟಣದ ವ್ಯಾಪ್ತಿಯಲ್ಲಿ ರಸ್ತೆ ಮಧ್ಯಭಾಗದಿಂದ ಎರಡು ಕಡೆ 30 ಅಡಿ ಒಟ್ಟು 60 ಅಡಿ ರಸ್ತೆ ವಿಸ್ತರಣೆ ಮಾಡಲು ನಕಾಶೆ ಸಿದ್ಧಪಡಿಸಲಾಗಿದೆ. 1ಮೀಟರ್ ಪಾದಚಾರಿ ಮಾರ್ಗ, 2ಮೀಟರ್ ಇಂಟರ್‌ಲಾಕ್ ಅಳವಡಿಸಲಾಗುವುದು. 10 ಮೀಟರ್ ಅಗಲದ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಲಿದೆ’ ಎಂದು ಮಾಹಿತಿ ನೀಡಿದರು.
ಕೊಪ್ಪ ಲೋಕೋಪಯೋಗಿ ಇಲಾಖೆಯ ಎಇಇ ಸತೀಶ್ ಕುಮಾರ್, ಎಂಜಿನಿಯರ್ ದಿನೇಶ್ ನಾಯ್ಕ, ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಮಾಜಿ ಸದಸ್ಯ ಸುನಿಲ್ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.