ADVERTISEMENT

ಕಡೂರು: ಶಕ್ತಿ ಕಳೆದುಕೊಂಡ ಗ್ರಾಮೀಣ ಶಾಲೆಗಳು

ಕಡೂರು: ಸಮಸ್ಯೆಗಳ ಮಧ್ಯೆಯೇ ನಲಿಯುತ್ತಾ ಕಲಿಯುತ್ತಿರುವ ಚಿಣ್ಣರು

ಎನ್‌.ಸೋಮಶೇಖರ
Published 13 ಜುಲೈ 2025, 3:12 IST
Last Updated 13 ಜುಲೈ 2025, 3:12 IST
ಕಡೂರು ಶೈಕ್ಷಣಿಕ ವಲಯದ ಚೌಡ್ಲಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಕೊಠಡಿಯ ಪಾರ್ಶ್ವ ಕುಸಿರುವುದು
ಕಡೂರು ಶೈಕ್ಷಣಿಕ ವಲಯದ ಚೌಡ್ಲಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಕೊಠಡಿಯ ಪಾರ್ಶ್ವ ಕುಸಿರುವುದು   

ಕಡೂರು: ಭವಿಷ್ಯದ ಪ್ರಜೆಗಳನ್ನು ರೂಪಿಸುವ ಸರ್ಕಾರಿ ಶಾಲೆಗಳು ಹಲವು ಶೈಕ್ಷಣಿಕ ಸಮಸ್ಯೆಗಳಿಂದ ನಿತ್ರಾಣಗೊಂಡಿವೆ. ದಶಕಗಳಿಂದ ನಡೆಯದ ದುರಸ್ತಿ, ನಿರ್ಮಾಣವಾಗದ ಹೊಸ ಕೊಠಡಿಗಳು, ಕೊಠಡಿಗಳ ಕೊರತೆ, ಸೋರುವ, ಕುಸಿಯುವ ಸ್ಥಿತಿಯಲ್ಲಿರುವ ಕೊಠಡಿಗಳಲ್ಲೇ ಮಕ್ಕಳು ನಲಿಯುತ್ತಲೇ ಕಲಿಯುತ್ತಿದ್ದಾರೆ.

ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕಾದ ಆಡಳಿತ ವ್ಯವಸ್ಥೆಯ ಅಸಡ್ಡೆ, ಅನುದಾನದ ಕೊರತೆ ಗ್ರಾಮೀಣ ಭಾಗದಲ್ಲಿರುವ ಶಾಲೆಗಳ ದುಃಸ್ಥಿತಿಗೆ ಕಾರಣವಾಗಿದೆ ಎಂಬುದು ಪೋಷಕರ ದೂರು.

ಕಡೂರು ತಾಲ್ಲೂಕಿನಲ್ಲಿ ಕಡೂರು ಮತ್ತು ಬೀರೂರು ಶೈಕ್ಷಣಿಕ ವಲಯಗಳಿವೆ. ವಲಯ ಎರಡು ಇದ್ದರೂ ಪರಿಸ್ಥಿತಿ ಭಿನ್ನವಾಗಿಲ್ಲ. ಕಡೂರು ವಲಯದಲ್ಲಿ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಕೊಠಡಿಯ ಕೊರತೆ, ಹಲವು ಶಾಲೆಗಳಲ್ಲಿ ಸೋರುವ ಕೊಠಡಿಗಳು, ಇನ್ನು ಕೆಲವೆಡೆ ಕುಸಿಯುವ ಸ್ಥಿತಿಯಲ್ಲಿ ಕೊಠಡಿಗಳಿವೆ. ಸೋರುವ ಕೊಠಡಿಯನ್ನು ಕಚೇರಿಯನ್ನಾಗಿಸಿ, ಕಚೇರಿ ಕೋಣೆಗಳಲ್ಲಿ ತರಗತಿ ನಡೆಸಲಾಗುತ್ತಿರುವ ಶಾಲೆಗಳೂ ಇವೆ.

ADVERTISEMENT

ಬಿಸಿಯೂಟದ ಆಹಾರಧಾನ್ಯ ದಾಸ್ತಾನಿಗೂ ಹಲವು ಶಾಲೆಗಳಲ್ಲಿ ಸಮರ್ಪಕ ವ್ಯವಸ್ಥೆ ಇಲ್ಲ. ಹಲವು ಶಾಲೆಗಳಲ್ಲಿ ದಾಸ್ತಾನು ಕೊಠಡಿಯ ಆಹಾರ ಧಾನ್ಯಗಳ ಚೀಲಗಳ ಪಕ್ಕದಲ್ಲೇ ತರಗತಿ ನಡೆಸುವ ಸ್ಥಿತಿಯೂ ಇದೆ.

ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಕೊಠಡಿ ಕೊರತೆಯ ಜತೆಗೆ ಮಕ್ಕಳ ಕೊರತೆಯೂ ಇದೆ. ಕಡೂರು ವಲಯದ ಚೌಡ್ಲಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ 12 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಇಬ್ಬರು ಶಿಕ್ಷಕರು ಬೋಧಿಸುತ್ತಿದ್ದಾರೆ. ಶಾಲೆಯ ಸೂರು ಕುಸಿಯುತ್ತಿದ್ದು, ಟೀರುಗಳನ್ನು ಗೆದ್ದಲು ತಿನ್ನುತ್ತಿದೆ. ಹೆಂಚು ಕುಸಿದು ಒಂದು ಕೊಠಡಿ ಬಳಕೆಗೆ ಯೋಗ್ಯವಾಗಿಲ್ಲ. ಕೋಣೆ ಇಲ್ಲದ ಕಾರಣ 1ರಿಂದ 3ನೇ ತರಗತಿ ಮಕ್ಕಳಿಗೆ ನಲಿ-ಕಲಿ ಕೊಠಡಿಯಲ್ಲಿ ಹಾಗೂ 4, 5ನೇ ತರಗತಿ ವಿದ್ಯಾರ್ಥಿಗಳಿಗೆ ಒಂದು ಕೋಣೆಯಲ್ಲಿ ಜತೆಯಾಗಿ ಪಾಠ ಕೇಳುತ್ತಿದ್ದಾರೆ.

ಬೀರೂರು ಶೈಕ್ಷಣಿಕ ವಲಯದ ಬ್ಯಾಗಡೆಹಳ್ಳಿಯಲ್ಲಿ 1ರಿಂದ 7ನೇ ತರಗತಿವರೆಗೆ ಶಾಲೆ ನಡೆಯುತ್ತಿದ್ದು, 32 ಮಕ್ಕಳು ಕಲಿಯುತ್ತಿದ್ದಾರೆ. ದಶಕಗಳ ಹಿಂದೆ ನಿರ್ಮಾಣವಾದ ಕೊಠಡಿಗಳು ಸೋರುತ್ತಿವೆ. ಇನ್ನೊಂದು ಕೊಠಡಿ ಸಿಮೆಂಟ್‌ ಶೀಟ್‌ಗಳ ಚಾವಣಿ ಹೊಂದಿದೆ.

‘ಸರ್ಕಾರಿ ಶಾಲೆಗಳಲ್ಲಿ ಕಲಿಕೆ ಉತ್ತಮವಾಗಿಯೇ ಇದೆ. ಆದರೆ, ಮೂಲಸವಲತ್ತುಗಳ ಕೊರತೆಯು ಪೋಷಕರನ್ನು ಆತಂಕಕ್ಕೀಡುಮಾಡುತ್ತಿದೆ. ಈ ಕಾರಣದಿಂದ ಮಕ್ಕಳನ್ನು ಖಾಸಗಿ ಶಾಲೆಗಳ ಸೇರಿಸುತ್ತಿದ್ದಾರೆ. ಸರ್ಕಾರವು ಶಾಲೆಗಳಲ್ಲಿ ಸುಸಜ್ಜಿತ ವ್ಯವಸ್ಥೆ ಕಲ್ಪಿಸಿದರೆ ಪೋಷಕರು ಖಾಸಗಿ ಶಾಲೆಗಳನ್ನು ಅವಲಂಬಿಸಬೇಕಿಲ್ಲ’ ಎನ್ನುತ್ತಾರೆ ಮಲ್ಲೇಶ್ವರ ಗ್ರಾಮಪಂಚಾಯಿತಿ ಸದಸ್ಯ ಶೂದ್ರ ಶ್ರೀನಿವಾಸ.

ಚೌಡ್ಲಾಪುರ ಶಾಲೆಯಲ್ಲಿ ಟೀರುಗಳನ್ನು ಗೆದ್ದಲು ತಿಂದು ಹಾಳಾಗಿರುವುದು
ಕಡೂರು ತಾಲ್ಲೂಕು ಬಂಟಿಗನಹಳ್ಳಿ ಶಾಲೆಯ ದಾಸ್ತಾನು ಕೊಠಡಿಯ ಗೋಡೆ ಬಿದ್ದಿರುವುದು
ಬಂಟಿಗನಹಳ್ಳಿ ಶಾಲೆಯಲ್ಲಿ ತರಗತಿಯಲ್ಲಿ ಆಹಾರಧಾನ್ಯ ದಾಸ್ತಾನು
ಬ್ಯಾಗಡೆಹಳ್ಳಿ ಶಾಲೆಯ ಕಚೇರಿಯಲ್ಲಿ ಸಾಮಗ್ರಿಗಳು ಮತ್ತು ಆಹಾರಧಾನ್ಯ ದಾಸ್ತಾನು ಮಾಡಿರುವುದು
ಬೀರೂರು ಶೈಕ್ಷಣಿಕ ವಲಯದಲ್ಲಿ 30 ಶಾಲೆಗಳಲ್ಲಿ ಕೊಠಡಿಗಳ ನಿರ್ಮಾಣ ಅಥವಾ ದುರಸ್ತಿಗೆ ಪಟ್ಟಿ ಕಳುಹಿಸಲಾಗಿದೆ. ಈ ಪೈಕಿ 7 ಶಾಲೆಗಳಿಗೆ ಹಣ ಬಿಡುಗಡೆಯಾಗಿದ್ದು ನಿರ್ಮಾಣಕಾರ್ಯ ಪ್ರಗತಿಯಲ್ಲಿದೆ
ಶೇಖರಪ್ಪ ಪ್ರಭಾರ ಶಿಕ್ಷಣಾಧಿಕಾರಿ

ಕಲಿಕೆ ದಾಸ್ತಾನು ಒಂದೇ ಕಡೆ

ಕಡೂರು ವಲಯದ ಬಂಟಿಗನಹಳ್ಳಿಯಲ್ಲಿ 1ರಿಂದ 7ನೇ ತರಗತಿವರೆಗೆ 50ಮಕ್ಕಳು ವ್ಯಾಸಂಗ ಮಾಡುತ್ತಿದ್ದು 5 ಕೊಠಡಿಗಳು ಇವೆ. ಕೋಣೆಗಳು ಸೋರುವ ಕುಸಿಯುವ ಭಯದಿಂದ ಕಚೇರಿಯಲ್ಲಿ ಮಕ್ಕಳಿಗೆ ಪಾಠ ಹಾಗೂ ಪಾಠ ಕಲಿಯುವ ಸ್ಥಳದಲ್ಲಿ ಆಹಾರಧಾನ್ಯಗಳ ದಾಸ್ತಾನು ಮಾಡಲಾಗುತ್ತಿದೆ. ಈ ಹಿಂದೆ ನಿರ್ಮಿಸಿದ್ದ ದಾಸ್ತಾನು ಕೊಠಡಿಯ ಗೋಡೆ ಕುಸಿದಿದೆ.

ಅನುದಾನದ ಕೊರತೆಯೂ ಕಾರಣ...

‘ಶಾಲೆಗಳ ಮೂಲಸವಲತ್ತಿನ ದುಃಸ್ಥಿತಿಗೆ ಅನುದಾನದ ಕೊರತೆಯೂ ಕಾರಣವಾಗಿದೆ. ಸದ್ಯ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಲ್ಲಿ ಜನಪ್ರತಿನಿಧಿಗಳ ಆಡಳಿತವಿಲ್ಲ. ಜಿಲ್ಲಾ ಪಂಚಾಯಿತಿಯಿಂದ ಅನುದಾನ ಪಡೆದು ದುರಸ್ತಿ ಅಥವಾ ಹೊಸ ಕೊಠಡಿಗಳ ನಿರ್ಮಾಣಕ್ಕೆ ಕ್ರಮವಹಿಸಬಹುದಿತ್ತು. ಶಾಸಕರು ಶಾಲೆಗಳಿಗೆ ಅನುದಾನ ಹಂಚಿಕೆ ಮಾಡುವುದು ಕಷ್ಟ. ಗ್ರಾಮ ಪಂಚಾಯಿತಿಗಳಲ್ಲಿ 15ನೇ ಹಣಕಾಸು ಯೋಜನೆ ಹಾಗೂ ವರ್ಗ-1ರಲ್ಲಿ ಶಾಲೆಗಳ ಅಭಿವೃದ್ಧಿಗೆ ಕ್ರಮವಹಿಸಲು ಅವಕಾಶವಿದೆ. ಆದರೆ ಈ ಬಗ್ಗೆ ಯಾರೂ ಕ್ರಮ ವಹಿಸಲು ಮುಂದಾಗುವುದಿಲ್ಲʼ ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಬ್ಯಾಗಡೆಹಳ್ಳಿ ಬಸವರಾಜ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.